ಸಿದ್ದಾಪುರ: ಸೂಕ್ತ ನಿರ್ವಹಣೆ ಇಲ್ಲದೆ ಅಡಿಕೆ ತೋಟ ನಾಶ ಹೊಂದಿರುವ ಹಲವಾರು ನಿದರ್ಶನಗಳು ಇವೆ. ಆದರೆ ಮಣ್ಣಿನ ಗುಣ ಲಕ್ಷಣಕ್ಕೆ ತಕ್ಕಹಾಗೆ ನಿರ್ವಹಣೆ ಮಾಡಿದಾಗ ನಶಿಸುತ್ತಿರುವ ತೋಟವನ್ನು ನಳನಳಿಸುವಂತೆ ಮಾಡಬಹುದೆಂದು ತೋರಿಸಿದ್ದಾರೆ ತಾಲ್ಲೂಕಿನ ಬಿಳಗಿಯ ರೈತ ಗಜಾನನ ನಾಯ್ಕ.
ತಮಗಿರುವ 1.6 ಎಕರೆ ಗದ್ದೆಯಲ್ಲಿ ಅಡಿಕೆ ತೋಟವನ್ನು ನಿರ್ಮಿಸಿದ್ದಾರೆ. ಅಡಿಕೆಯ ಜತೆಗೆ ಕಾಳು ಮೆಣಸು, ಬಾಳೆ, ತೆಂಗು ವಿವಿಧ ಬಗೆಯ ಮಾವಿನ ಮರಗಳೂ ಉಪ ಬೆಳೆಗಳಾಗಿ ಆದಾಯಕ್ಕೆ ಸಹಕರಿಸುತ್ತಿವೆ. ಸೀಮಿತ ತೋಟದಲ್ಲಿ ವಾರ್ಷಿಕವಾಗಿ 18 ರಿಂದ 20 ಕ್ವಿಂಟಲ್‍ಗಳಷ್ಟು ಅಡಿಕೆ ಬೆಳೆಯನ್ನು ಪಡೆಯುತ್ತಿರುವ ಅವರು ಅಂದಾಜು ₹8ಲಕ್ಷದಿಂದ ₹ 10 ಲಕ್ಷಗಳಷ್ಟು ವಾರ್ಷಿಕ ಆದಾಯವನ್ನೂ ಪಡೆಯುತ್ತಿದ್ದಾರೆ.
‘ಪೂರ್ವಜರಿಂದ ಬಂದ ಗದ್ದೆಯಲ್ಲಿ ಸುಮಾರು 15 ವರ್ಷಗಳ ಹಿಂದೆ ಅಡಿಕೆ ಸಸಿಗಳನ್ನು ಬೆಳೆಸಿದೆ. ಇದು ಹೆಚ್ಚು ಮಳೆಯಾಗುವ ಪ್ರದೇಶವಾದ್ದರಿಂದ ಮಳೆಗಾಲದಲ್ಲಿ ಮಣ್ಣಿನಲ್ಲಿ ಅವಶ್ಯಕತೆಗಿಂತ ಹೆಚ್ಚು ನೀರು ಸಂಗ್ರಹವಾಗುತ್ತದೆ. ಸುಮಾರು 15 ಗುಂಟೆಯಷ್ಟು ಪ್ರದೇಶದ ಅಡಿಕೆ ಗಿಡಗಳು ಹೆಚ್ಚಾದ ನೀರಿನ ಪ್ರಮಾಣದಿಂದ ಸಾಯಲು ಆರಂಭಿಸಿದವು. ಮೃದು ಮಣ್ಣಾದ್ದರಿಂದ ಕಾಲುವೆಯನ್ನು ಆಳವಾಗಿಸಿದಾಗ ಕುಸಿದು ಬೀಳುತ್ತಿತ್ತು. ತೋಟವನ್ನು ಉಳಿಸಿಕೊಳ್ಳಬೇಕೆಂಬ ಛಲದಿಂದ ನೂತನ ಪ್ರಯೋಗಕ್ಕೆ ಮುಂದಾದೆ’ ಎಂದು ಕೃಷಿಗಾಥೆ ವಿವರಿಸುತ್ತಾರೆ ಗಜಾನನ ನಾಯ್ಕ.
‘ತೋಟದ ಕಾಲುವೆಗಳನ್ನು ಮೂರು ಅಡಿಗಳಷ್ಟು ಆಳ ತೆಗೆದು ಅದಕ್ಕೆ ಹೊಳೆಯಂಚಿನಲ್ಲಿ ಸಿಗುವ ಮರಬನ್ನು (ಕಲ್ಲು ಮಿಶ್ರಿತ ಮಣ್ಣು) ತಂದು ಕಾಲುವೆಗೆ ತುಂಬಿ ಮೇಲೆ ಒಂದು ಅಡಿಯಷ್ಟು ಮಾತ್ರ ಕಾಲುವೆಯನ್ನು ನಿರ್ಮಿಸಿದೆ. ಹೊಳೆ ಮರಬಿನಲ್ಲಿ ಹೆಚ್ಚಿನ ಪ್ರಮಾಣದ ಕಲ್ಲು ಇರುವುದರಿಂದ ಮಣ್ಣಿನಲ್ಲಿರುವ ಹೆಚ್ಚಿನ ನೀರು ಇದರ ಮೂಲಕ ಇಂಗಲು ಸಹಾಯವಾಯಿತು. ಕೇವಲ ಎರಡು ವರ್ಷದಲ್ಲಿ ನಿರೀಕ್ಷೆಗೂ ಮೀರದ ಫಲಿತಾಂಶ ಕಂಡೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.
‘ಭೂ ಅಂತರ್ಗತ ಬಸಿಗಾಲುವೆಯ ಅನುಕೂಲವನ್ನು ಅರಿತು ಉಳಿದ ತೋಟಕ್ಕೂ ಬಸಿಗಾಲುವೆಯನ್ನು ನಿರ್ಮಿಸಲು ತೀರ್ಮಾನಿಸಿದೆ. ಸಕಾಲಕ್ಕೆ ತೋಟಗಾರಿಕಾ ಇಲಾಖೆಯ ಸಹಕಾರ ದೊರಕಿದ್ದು ಉದ್ಯೋಗ ಖಾತ್ರಿ ಯೋಜನೆಯಡಿ ಭೂ ಅಂತರ್ಗತ ಬಸಿಗಾಲುವೆ ನಿರ್ಮಾಣಕ್ಕೆ ಮತ್ತು ಅದಕ್ಕೆ ಬೇಕಾದ ಪೈಪ್‍ಗಳ ಖರೀದಿಗೆ ಆರ್ಥಿಕ ಸಹಾಯ ದೊರಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.