ಶಿರಸಿ: ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಜಾರಿಗೆ ತಂದಿದ್ದ ಬೆಳೆಸಾಲ ಮನ್ನಾ ಯೋಜನೆಯ ಫಲ ಉತ್ತರ ಕನ್ನಡ ಜಿಲ್ಲೆಯ ಸುಮಾರು ಎರಡು ಸಾವಿರ ರೈತರಿಗೆ ಸಿಕ್ಕಿಲ್ಲ. ದಾಖಲೆಗಳ ಗೊಂದಲ, ತಾಂತ್ರಿಕ ಅಡಚಣೆ ಇದಕ್ಕೆ ಕಾರಣವಾಗಿದೆ.
ಒಬ್ಬ ರೈತನಿಗೆ ಗರಿಷ್ಠ ₹1 ಲಕ್ಷದವರೆಗಿನ ಬೆಳೆಸಾಲ ಮನ್ನಾ ಮಾಡುವ ಯೋಜನೆ2018ರ ಆಗಸ್ಟ್‌ನಲ್ಲಿ ಜಾರಿಗೆ ತರಲಾಗಿತ್ತು. ಆದರೆ ಯೋಜನೆ ಜಾರಿಗೊಂಡು ಮೂರು ವರ್ಷ ಕಳೆದರೂ ಹಲವು ರೈತರಿಗೆ ಸೌಲಭ್ಯ ಸಿಗದಂತಾಗಿದೆ.
ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ದಾಖಲೆಯ ಗೊಂದಲಗಳಿಂದ ದೊಡ್ಡ ಸಂಖ್ಯೆಯಲ್ಲಿ ರೈತರು ಸೌಲಭ್ಯ ವಂಚಿತರಾಗಿದ್ದಾರೆ. 900ರಷ್ಟು ರೈತರ ಪಡಿತರ ಚೀಟಿ ದೋಷವೂ ಇದರಲ್ಲಿ ಸೇರಿದೆ. ಪ್ರಾಥಮಿಕ ಸಹಕಾರ ಸಂಸ್ಥೆಗಳ ಸಿಬ್ಬಂದಿ ಮಾಡಿದ ಕಣ್ತಪ್ಪಿನಿಂದಲೂ ಹಲವು ರೈತರಿಗೆ ಸಾಲಮನ್ನಾ ಭಾಗ್ಯ ಸಿಕ್ಕಿಲ್ಲ.
‘ಸಾಲ ನೀಡುವಾಗ ಪರಿಗಣಿಸಿದ ದಾಖಲೆಯನ್ನು ಸಾಲಮನ್ನಾಕ್ಕೆ ಪರಿಗಣಿಸಲು ಒಪ್ಪದಿರುವುದು ಸರಿಯಲ್ಲ. ದಾಖಲೆ ತಿದ್ದುಪಡಿ ವೇಳೆ ಸಿಬ್ಬಂದಿ ಮಾಡಿರುವ ತಪ್ಪಿಗೆ ನಾವು ಶಿಕ್ಷೆ ಅನುಭವಿಸಬೇಕಾಗುತ್ತಿದೆ’ ಎಂದು ಸೌಲಭ್ಯ ಪಡೆಯಲಾಗದ ರೈತರು ಅಸಹನೆ ತೋಡಿಕೊಳ್ಳುತ್ತಿದ್ದಾರೆ.
ಸಮಸ್ಯೆ ಏನು?
ಬೆಳೆಸಾಲ ಪಡೆಯುವ ರೈತ ಆಯಾ ಸಹಕಾರ ಸಂಸ್ಥೆ ಅಥವಾ ಬ್ಯಾಂಕ್‌ಗಳಲ್ಲಿ ಪಹಣಿ ಪತ್ರಿಕೆ, ಪಡಿತರ ಚೀಟಿ, ಆಧಾರ್ ಕಾರ್ಡ್ ದಾಖಲೆ ನೀಡಬೇಕಿತ್ತು. ಹಲವು ರೈತರು ಸಾಲಕ್ಕೆ ಅರ್ಜಿ ಸಲ್ಲಿಸುವಾಗ ನೀಡಿದ ಪಡಿತರ ಚೀಟಿಯನ್ನು ಕೆಲ ತಿಂಗಳ ನಂತರ ಬದಲಿಸಿಕೊಂಡಿದ್ದರು. ಕೆಲವರ ಹೆಸರು ಪಹಣಿ ಪತ್ರಿಕೆಯಲ್ಲಿ ಒಂದಿದ್ದರೆ, ಉಳಿದ ದಾಖಲೆಯಲ್ಲಿ ಬೇರೆ ಇದೆ. ಆಧಾರ್ ಕಾರ್ಡ್‍ನಲ್ಲಿನ ದೋಷವೂ ಸಮಸ್ಯೆಯಾಗಿದೆ. ಸಾಲಮನ್ನಾಕ್ಕೆ ಅರ್ಜಿ ಪರಿಗಣಿಸುವಾಗ ಇವು ಪತ್ತೆಯಾದ ಪರಿಣಾಮ ಅರ್ಜಿಗಳು ತಿರಸ್ಕೃತಗೊಂಡಿವೆ.
‘ದಾಖಲೆಯ ಗೊಂದಲಕ್ಕೆ ಅರ್ಜಿ ಬಾಕಿ ಉಳಿದುಕೊಂಡಿದ್ದು, ತಹಶೀಲ್ದಾರ್ ನೇತೃತ್ವದ ತಾಲ್ಲೂಕು ಮಟ್ಟದ ಸಮಿತಿಗೆ (ಟಿ.ಎಲ್.ಸಿ.) ಪರಿಶೀಲಿಸಿ ವರದಿ ಸಲ್ಲಿಸಲು ತಿಳಿಸಿದ್ದೇವೆ. ಅವರು ನೀಡುವ ವರದಿ ಫಲಾನುಭವಿಯ ವಾಸ್ತವ ಮಾಹಿತಿ ದೃಢೀಕರಿಸಿದರೆ ಸೌಲಭ್ಯಕ್ಕೆ ಪರಿಗಣಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗುತ್ತದೆ’ ಎಂದು ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗವತ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಾಕಿ ಇರುವ ಸಾಲಮನ್ನಾ ಹಣ ಬಿಡುಗಡೆಗೊಳಿಸಲು ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ರೈತರಿಗೆ ಸೌಲಭ್ಯ ಸಿಗುವಂತೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಪ್ರತಿಕ್ರಿಯಿಸಿದರು.
ಅಂಕಿ–ಅಂಶ
2,000ಸಾಲಮನ್ನಾ ಸೌಲಭ್ಯ ಸಿಗದ ರೈತರು
900ಪಡಿತರ ಚೀಟಿ ಗೊಂದಲದಿಂದ ಸೌಲಭ್ಯಕ್ಕೆ ಅರ್ಹರಾಗದ ರೈತರು
₹12.5 ಕೋಟಿಬಿಡುಗಡೆಯಾಗಬೇಕಿರುವ ಸಾಲಮನ್ನಾ ಹಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.