ADVERTISEMENT

ಶಿರಸಿ | ವನ್ಯಜೀವಿ ಹಾವಳಿ: ರೈತರು ದಿವಾಳಿ

ರಾಜೇಂದ್ರ ಹೆಗಡೆ
Published 28 ಅಕ್ಟೋಬರ್ 2024, 4:52 IST
Last Updated 28 ಅಕ್ಟೋಬರ್ 2024, 4:52 IST
ಶಿರಸಿಯ ಮಳಲಗಾಂವದಲ್ಲಿ ಕಾಡಾನೆಗಳ ಹಿಂಡು ಭತ್ತದ ಕ್ಷೇತ್ರಕ್ಕೆ ಹಾನಿ ಮಾಡಿದೆ
ಶಿರಸಿಯ ಮಳಲಗಾಂವದಲ್ಲಿ ಕಾಡಾನೆಗಳ ಹಿಂಡು ಭತ್ತದ ಕ್ಷೇತ್ರಕ್ಕೆ ಹಾನಿ ಮಾಡಿದೆ   

ಶಿರಸಿ: ಗ್ರಾಮಾಂತರ ಪ್ರದೇಶದಲ್ಲಿ ವನ್ಯಜೀವಿಗಳ ಹಾವಳಿಯಿಂದ ರೈತರು ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಿದ್ದು, ಸಂಘರ್ಷದ ಹಂತ ಮುಟ್ಟಿದೆ. ವಿಪರೀತ ಮಳೆಗೆ ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಸಾಗುವಳಿ ಜಮೀನಿನಲ್ಲಿ ವನ್ಯಜೀವಿಗಳ ಕಾಟ ನಿದ್ದೆಗೆಡುವಂತೆ ಮಾಡಿದೆ.

ಅಡಿಕೆ, ಬಾಳೆ, ಭತ್ತ, ಕಬ್ಬು, ಮೆಕ್ಕೆಜೋಳ ಸೇರಿ ಪ್ರತಿಯೊಂದು ಬೆಳೆಯನ್ನೂ ನಾಶ ಮಾಡುತ್ತಿರುವ ವನ್ಯಜೀವಿಗಳು, ಹಗಲು ಹೊತ್ತಿನಲ್ಲೇ ಕೃಷಿ ಜಮೀನಿನಲ್ಲಿ ದಾಂಧಲೆ ನಡೆಸುತ್ತಿವೆ. ಪ್ರಾಣಕ್ಕೆ ಸಂಚಕಾರ ತರುವ ಪ್ರಾಣಿಗಳ ನಿಯಂತ್ರಣ ಸಾಧ್ಯವಿಲ್ಲದಂತಾಗಿದೆ. ಕಾಡಾನೆ, ಕಡವೆ, ಕಾಡೆಮ್ಮೆ, ಮೊಲ, ಮಂಗ, ಹಂದಿಗಳ ಹಿಂಡು ಸೇರಿದಂತೆ ಅನೇಕ ವನ್ಯಜೀವಿಗಳ ಹಾವಳಿಯಿಂದಾಗಿ ಸಾಗುವಳಿ ಜಮೀನಿಗೆ ಹಾನಿಯ ಜತೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗುತ್ತಿದೆ. ಉಪದ್ರವ ನಿಯಂತ್ರಣಕ್ಕೆ ಪರ್ಯಾಯ ಕ್ರಮವೇ ಇಲ್ಲದಂತಾಗಿದೆ’ ಎನ್ನುತ್ತಾರೆ ಕೃಷಿಕರು.

‘ಸಾಗುವಳಿ ಜಮೀನಿಗೆ ನುಸುಳದಂತೆ ತಡೆಯಲು ರೈತರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕಲ್ಲುಕಂಬ, ಐಬೆಕ್ಸ್ ಬೇಲಿಯನ್ನು ವನ್ಯಜೀವಿಗಳು ಪುಡಿಗಟ್ಟುತ್ತಿವೆ. ಆಳದ ಕಾಲುವೆಯನ್ನೂ ದಾಟಿ ಜಮೀನಿಗೆ ಪ್ರವೇಶ ಪಡೆದು ಬೆಳೆಗೆ ಹಾನಿ ಮಾಡುತ್ತಿವೆ. ಕಾಡಾನೆಗಳ ಹಾವಳಿಯೂ ಆರಂಭವಾಗಿದ್ದು, ಕೊಯ್ಲಿಗೆ ಬಂದ ಭತ್ತ ಕೈಸೇರುವುದು ಅನುಮಾನ’ ಎನ್ನುತ್ತಾರೆ ಮಳಲಗಾಂವ ಗ್ರಾಮದ ರೈತ ಬಂಗಾರ್ಯ ನಾಯ್ಕ.

ADVERTISEMENT

‘ಉಪಟಳ ತಡೆಗೆ ರೈತರು ಮಾಡುವ ನಾನಾ ರೀತಿಯ ಬೆದರಿಕೆ ಕ್ರಮಕ್ಕೂ ವನ್ಯಜೀವಿಗಳು ಬಗ್ಗುತ್ತಿಲ್ಲ. ಕಂಡ ಕ್ಷಣದಲ್ಲಿ ರೈತರ ಮೇಲೆ ವನ್ಯಜೀವಿಗಳು ಎರಗಿ ಬರುವಂತೆ ವರ್ತಿಸುತ್ತಿದ್ದು ಭಯವೇ ಇಲ್ಲವಾಗಿದೆ. ಸಾಗುವಳಿ ಜಮೀನಿನಲ್ಲಿ ಕಾಣಿಸುವ ವನ್ಯಜೀವಿಗಳನ್ನು ಕಾಡಿಗೆ ಓಡಿಸಿ ಎಂದು ಅರಣ್ಯ ಇಲಾಖೆ ನೀಡುತ್ತಿರುವ ಸೂಚನೆ ರೈತರಲ್ಲಿ ಆಕ್ರೋಶ ಉಂಟು ಮಾಡಿದೆ’ ಎನ್ನುತ್ತಾರೆ ಅವರು. 

‘ವನ್ಯಜೀವಿ ಸಂಖ್ಯೆ ಹೆಚ್ಚಾದ ಕಾರಣ ಒಬ್ಬನೇ ರೈತ ಸಾಗುವಳಿ ಜಮೀನಿಗೆ ಹೋಗಲು ಸಾಧ್ಯವಿಲ್ಲ. ಬೆಳೆ, ಸಾಗುವಳಿ ಜಮೀನು ಬೇಲಿ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ನೀಡುತ್ತಿಲ್ಲ. ಮಂಗಗಳಿಂದ ಆದ ಹಾನಿ ಸರ್ಕಾರದ ಲೆಕ್ಕದಲ್ಲಿ ಹಾನಿಯೇ ಅಲ್ಲ. ತಕ್ಷಣ ಹಾಳಾದ ಬೆಳೆಗೆ ವೈಜ್ಞಾನಿಕ ಪರಿಹಾರ ನೀಡಲು ಸರ್ಕಾರ ಕ್ರಮವಹಿಸಬೇಕು’ ಎಂಬುದು ರೈತಾಪಿ ವರ್ಗದ ಆಗ್ರಹವಾಗಿದೆ.

ಅಡಿಕೆ ಮರಕ್ಕೆ ಹಾನಿಯಾದರೆ ಪರಿಹಾರ ನೀಡಬಹುದು. ಹಿಂಗಾರು ಹಂತದಲ್ಲೇ ಅಡಿಕೆ ಬೆಳೆಹಾನಿಗೆ ಪರಿಹಾರಧನ ನೀಡಲು ತಾಂತ್ರಿಕ ಸಮಸ್ಯೆ ಇದೆ
ಜಿ.ಆರ್.ಅಜ್ಜಯ್ಯ ಡಿಸಿಎಫ್ ಶಿರಸಿ

ಪರಿಹಾರ ಧನವಿಲ್ಲ

ಸಾಗುವಳಿ ಜಮೀನಿನ ಮೇಲೆ ಗುಂಪುಗೂಡಿ ದಾಳಿ ನಡೆಸುವ ಮಂಗಗಳ ಹಾವಳಿಗೆ ಜನರು ಬೆಚ್ಚಿದ್ದಾರೆ. ಹಳ್ಳಿ ಭಾಗದಲ್ಲಿ ಸಂಖ್ಯೆ ಹೆಚ್ಚಿಸಿಕೊಂಡಿರುವ ಮಂಗಗಳಿಂದ ನಾನಾ ರೀತಿಯಲ್ಲಿ ಜನರು ನಷ್ಟಕ್ಕೀಡಾಗುತ್ತಿದ್ದಾರೆ. 1972ರ ವನ್ಯಜೀವಿಗಳ ಸಂರಕ್ಷಣೆ ಕಾಯಿದೆ ಅನ್ವಯ ಮಂಗಗಳು ವನ್ಯಜೀವಿಗಳೆಂದು ಒಪ್ಪಲು ಅರಣ್ಯ ಇಲಾಖೆ ಸಿದ್ಧವಿಲ್ಲ. ಹೀಗಾಗಿ ಮಂಗಗಳಿಂದಾಗುವ ಬೆಳೆ ಹಾನಿಗೆ ಅರಣ್ಯ ಇಲಾಖೆ ಪರಿಹಾರಧನ ನೀಡುತ್ತಿಲ್ಲ. ಇದು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.‌ ‘ವನ್ಯಜೀವಿಗಳಿಂದಾಗುವ ಬೆಳೆ ಸಾಗುವಳಿ ಜಮೀನು ಹಾನಿಗೆ ರೈತರು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪರಿಹಾರಧನ ಪಡೆಯಬಹುದು’ ಎಂದು ಶಿರಸಿಯ ಡಿಸಿಎಫ್ ಜಿ.ಆರ್. ಅಜ್ಜಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.