ADVERTISEMENT

ಪೂರ್ವ ಮುಂಗಾರು: ಭೂಮಿ ಹದಗೊಳಿಸುವ ಕಾರ್ಯ ಚುರುಕು

ಹಳಿಯಾಳದ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು

​ಪ್ರಜಾವಾಣಿ ವಾರ್ತೆ
Published 15 ಮೇ 2024, 7:23 IST
Last Updated 15 ಮೇ 2024, 7:23 IST
ಹಳಿಯಾಳ ತಾಲ್ಲೂಕಿನ  ಕರ್ಲಕಟ್ಟಾ ಗ್ರಾಮದ ಕೃಷ್ಣಾ ಚಂದ್ರು  ಗೌಡ ತಮ್ಮ ಗದ್ದೆಯಲ್ಲಿ ಬಿತ್ತನೆಗೆ ಜಮೀನನ್ನು ಹದಗೊಳಿಸುತ್ತಿರುವುದು.
ಹಳಿಯಾಳ ತಾಲ್ಲೂಕಿನ  ಕರ್ಲಕಟ್ಟಾ ಗ್ರಾಮದ ಕೃಷ್ಣಾ ಚಂದ್ರು  ಗೌಡ ತಮ್ಮ ಗದ್ದೆಯಲ್ಲಿ ಬಿತ್ತನೆಗೆ ಜಮೀನನ್ನು ಹದಗೊಳಿಸುತ್ತಿರುವುದು.   

ಹಳಿಯಾಳ: ತಾಲ್ಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಸಾಯಂಕಾಲ ನಿರಂತರ ಪೂರ್ವ ಮುಂಗಾರು ಮಳೆ ಬಿದ್ದ ಪರಿಣಾಮ ರೈತರಿಗೆ ಬಿತ್ತನೆಗಾಗಿ ಜಮೀನು ಹದ ಮಾಡಲು ಅನುಕೂಲವಾಗಿದೆ. ಗ್ರಾಮೀಣ ಭಾಗದ ಹಲವೆಡೆ ರೈತರು ಗದ್ದೆಗಳಲ್ಲಿ ಜಮೀನು ಹದ ಮಾಡುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು ಕಾಣುತ್ತಿದೆ.

ತಾಲ್ಲೂಕಿನಲ್ಲಿ ಒಟ್ಟು 21 ಸಾವಿರ ಹೆಕ್ಟೇರ್ ಕೃಷಿ ಜಮೀನಿದ್ದು, ಇವುಗಳಲ್ಲಿ 5,400 ಹೆಕ್ಟೇರ್‌ ಜಮೀನಿನಲ್ಲಿ ಭತ್ತ, 3,100 ಹೆಕ್ಟೇರ್ ಜಮೀನಿನಲ್ಲಿ ಗೋವಿನ ಜೋಳ, 12,200 ಹೆಕ್ಟೇರ್ ಜಮೀನಿನಲ್ಲಿ ಕಬ್ಬು, 300 ಹೆಕ್ಟೇರ್ ಜಮೀನಿನಲ್ಲಿ ಹತ್ತಿ ಬೆಳೆಸಲಾಗುತ್ತದೆ.

ಕೃಷಿ ಇಲಾಖೆಯಿಂದ ಅಧಿಕೃತವಾಗಿ ರಸಗೊಬ್ಬರ ಮಾರಾಟಕ್ಕೆ ಪರವಾನಗಿ ಪಡೆದುಕೊಂಡವರು ರಸಗೊಬ್ಬರವನ್ನು ಮಾರಾಟಕ್ಕೆ ದಾಸ್ತಾನು ಇಡುತ್ತಿದ್ದಾರೆ.

ADVERTISEMENT

‘ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಾದ ಮುರ್ಕವಾಡ, ಸಾಂಬ್ರಾಣಿ, ಹಳಿಯಾಳ ಮತ್ತು ದಾಂಡೇಲಿಯಲ್ಲಿ ರಿಯಾಯಿತಿ ದರದಲ್ಲಿ ಭತ್ತ ಹಾಗೂ ಮೆಕ್ಕೆಜೋಳ ಬೀಜಗಳನ್ನು ವಿತರಿಸಲಾಗುವುದು. ಹತ್ತಿ ಬೀಜಗಳನ್ನು ರೈತರು ಮಾರುಕಟ್ಟೆಯಲ್ಲಿ ಪಡೆದುಕೊಳ್ಳಬೇಕು. ಈಗಾಗಲೇ ಬಿದ್ದ ಮಳೆಯಿಂದ ರೈತರು ಜಮೀನನ್ನು ಹದಗೊಳಿಸಿ ಒಣ ಬಿತ್ತನೆ ಮಾಡಲು ಅನುಕೂಲಕರವಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ ತಿಳಿಸಿದರು.

‘ಕಬ್ಬನ್ನು ಅಲ್ಲಲ್ಲಿ ಬೆಳೆಸಲಾಗಿದ್ದು ಪ್ರಸಕ್ತ ಸಾಲಿನಲ್ಲಿ ತೀವ್ರ ತರ ಬಿಸಿಲಿನ ಪರಿಣಾಮವಾಗಿ ಈಗಾಗಲೇ ಬೆಳೆದ ಕಬ್ಬಿಗೆ ನೀರಿನ ಕೊರತೆ ಉಂಟಾಗಿ ಬೆಳೆ ಕುಂಠಿತವಾಗಿದೆ. ರೈತರು ಕಬ್ಬಿನಲ್ಲಿಯ ಕಳೆ, ಕಸ ತೆಗೆದು ರಸಗೊಬ್ಬರ ಕೊಟ್ಟು ಕಬ್ಬಿನ ಬೆಳೆ ಸುಧಾರಿಸಲು ಸಾಧ್ಯವಾಗುತ್ತದೆ’ ಎಂದರು.

‘ಎಂಟು ಎಕರೆಗಳಷ್ಟು ಜಮೀನು ಹೊಂದಿದ್ದು ಪ್ರತಿ ವರ್ಷ ಭತ್ತ, ಹತ್ತಿ, ಗೋವಿನ ಜೋಳವನ್ನು ಬೆಳೆಯುತ್ತೇನೆ. ನಾಲ್ಕು ದಿನಗಳಿಂದ ಬಿದ್ದ ಮಳೆಯ ಪರಿಣಾಮವಾಗಿ ಜಮೀನನ್ನು ಬಿತ್ತನೆಗೆ ಹದಗೊಳಿಸುತ್ತಿದ್ದೇನೆ’ ಎಂದು ಜಮೀನಿನಲ್ಲಿ ರಂಟೆ ಹೊಡೆಯುತ್ತ ಕೃಷಿ ಕಾಯಕದಲ್ಲಿ ತೊಡಗಿದ್ದ ಕರ್ಲಕಟ್ಟಾ ಗ್ರಾಮದ ಕೃಷ್ಣಾ ಚಂದ್ರು ಗೌಡ ಸಂತಸದಿಂದ ಪ್ರತಿಕ್ರಿಯಿಸಿದರು.

ಹಳಿಯಾಳ ತಾಲ್ಲೂಕಿನ  ಕರ್ಲಕಟ್ಟಾ ಗ್ರಾಮದ ಕೃಷ್ಣಾ ಚಂದ್ರು  ಗೌಡ ತಮ್ಮ ಗದ್ದೆಯಲ್ಲಿ ಬಿತ್ತನೆಗೆ ಜಮೀನನ್ನು ಹದಗೊಳಿಸುತ್ತಿರುವುದು.
ಹಳಿಯಾಳ ತಾಲ್ಲೂಕಿನ  ಕರ್ಲಕಟ್ಟಾ ಗ್ರಾಮದ ಕೃಷ್ಣಾ ಚಂದ್ರು  ಗೌಡ ತಮ್ಮ ಗದ್ದೆಯಲ್ಲಿ ಬಿತ್ತನೆಗೆ ಜಮೀನನ್ನು ಹದಗೊಳಿಸುತ್ತಿರುವುದು.

ಕೃಷಿ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ಭತ್ತ ಹಾಗೂ ಮೆಕ್ಕೆಜೋಳ ಬೀಜದ ದಾಸ್ತಾನು ಮಾಡಲಾಗುತ್ತಿದೆ. ಒಂದು ವಾರದೊಳಗೆ ಸಂಪೂರ್ಣವಾಗಿ ದಾಸ್ತಾನು ಆಗಲಿದೆ

–ಪಿ.ಐ. ಮಾನೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.