ಭಟ್ಕಳ: ‘ಪಾಲಕರು ಮಕ್ಕಳ ಬಗ್ಗೆ ಸದಾ ಜಾಗೃತಿ ವಹಿಸಬೇಕು. ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರ ಮಾಡಬೇಕು’ ಎಂದು ಪತ್ರಕರ್ತ ರಾಘವೇಂದ್ರ ಹೆಬ್ಬಾರ ಹೇಳಿದರು.
ವಿದ್ಯಾಭಾರತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಅಪ್ಪಂದಿರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ’ ಎಂದರು.
ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸುರೇಶ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ತೆಂಗಿನಗುಂಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ನಾಗರಾಜ ಎನ್.ಎಸ್ ಮಕ್ಕಳು ಮತ್ತು ತಂದೆಯರ ನಡುವಿನ ಬಾಂಧವ್ಯದ ಬಗ್ಗೆ ವಿವರಿಸಿ ವಿದ್ಯಾಭಾರತಿ ಶಾಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕಿ ರೂಪಾ ರಮೇಶ ಖಾರ್ವಿ ಮಾತನಾಡಿ, ‘ಸದಾ ಒತ್ತಡದಲ್ಲಿರುವ ಅಪ್ಪಂದಿರನ್ನು ಶಾಲೆಗೆ ಕರೆಯಿಸಿ ಮಕ್ಕಳ ಜತೆ ಸ್ವಲ್ಪ ಸಮಯ ಕಳೆಯಲು ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪಾಲಕರು ಮಕ್ಕಳಿಗೆ ತಮ್ಮ ಕಷ್ಟಗಳನ್ನು ಅರ್ಥೈಸಬೇಕು’ ಎಂದರು.
ಶಿಕ್ಷಕಿ ಕವಿತಾ ನಾಯ್ಕ ಸ್ವಾಗತಿಸಿದರು. ಶಾಲೆಯ 4ನೇ ತರಗತಿ ವಿದ್ಯಾರ್ಥಿಗಳಾದ ಅರ್ಜವ್ ಜೈನ್ ಮತ್ತು ರಾಬಿಯಾ ನಿರೂಪಿಸಿದರು. ಶಿಕ್ಷಕಿ ಅಶ್ವಿನಿ ನಾಯ್ಕ ಇದ್ದರು. ಸಭಾ ಕಾರ್ಯಕ್ರಮದ ನಂತರದಲ್ಲಿ ಅಪ್ಪಂದಿರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆ ಮತ್ತು ಆಟ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.