ADVERTISEMENT

ಭಯವೇ ಹಲವು ಸಮಸ್ಯೆಗೆ ಕಾರಣ: ರಾಘವೇಶ್ವರ ಭಾರತಿ ಸ್ವಾಮೀಜಿ

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 16:52 IST
Last Updated 3 ಸೆಪ್ಟೆಂಬರ್ 2022, 16:52 IST
ಗೋಕರ್ಣದ ಅಶೋಕೆಗೆ ಶನಿವಾರ ಭೇಟಿ ನೀಡಿದ ಗಾಯಕಿ ಬಿ.ಆರ್.ಛಾಯಾ, ರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ಗೋಕರ್ಣದ ಅಶೋಕೆಗೆ ಶನಿವಾರ ಭೇಟಿ ನೀಡಿದ ಗಾಯಕಿ ಬಿ.ಆರ್.ಛಾಯಾ, ರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.   

ಕಾರವಾರ: ‘ಪ್ರತಿ ಜೀವಿಯನ್ನೂ ಭಯ ಕಾಡುತ್ತದೆ. ಇದರಿಂದಾಗಿಯೇ ಅನೇಕ ಸಮಸ್ಯೆಗಳಾಗುತ್ತವೆ. ಭಗವಂತನ ಅಭಯ ಮುದ್ರೆಯು ಎಲ್ಲರ ಭಯ ನಿವಾರಿಸಬಲ್ಲದು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಶನಿವಾರದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ಇಂಥ ಅಭಯ ಸ್ಥಿತಿಯನ್ನು ತಲುಪುವವನಿಗೆ ಯಾವ ಭಯ ಅಥವಾ ಅಂಜಿಕೆ ಇರುವುದಿಲ್ಲ. ಜೀವನದಲ್ಲಿ ಭಯವೇ ದೊಡ್ಡ ಆಪತ್ತು. ಸಾವಿನ ಬಗ್ಗೆ ಭೀತಿ ಮಾಡಿ ಚಿಂತೆ ಮಾಡುವ ಬದಲು ಜೀವನದ ಬಗ್ಗೆ ಚಿಂತೆ ಮಾಡಿ’ ಎಂದರು.

ADVERTISEMENT

‘ಧೈರ್ಯವಂತರನ್ನು ಭೂತ ಕಾಡುವುದಿಲ್ಲ, ಭಯಗ್ರಸ್ಥರನ್ನು ಅಥವಾ ಹೇಡಿಗಳನ್ನು ಮಾತ್ರವೇ ಅದು ಕಾಡುತ್ತದೆ. ಅಳುಕು ಇರುವವರ ಮನಸ್ಸು ಭೂತಕ್ಕೆ ಮೊದಲ ಆಹಾರ. ಭಯವನ್ನು ಮೀರುವ ಮಾರ್ಗೋಪಾಯಗಳು ಅನೇಕ ಇವೆ’ ಎಂದು ಹೇಳಿದರು.

ಗಾಯಕಿ ಬಿ.ಆರ್.ಛಾಯಾ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಹಾಡಿನ ಮೂಲಕ ಭಕ್ತರ ಮನ ರಂಜಿಸಿದರು. ಗುರುಕುಲದ ವಿದ್ಯಾರ್ಥಿನಿಯರಾದ ತನ್ವಿತಾ ಮತ್ತು ಭವ್ಯಾ ಅವರಿಂದ ಭರತನಾಟ್ಯ, ವಸುಧಾ ಶರ್ಮಾ ಮತ್ತು ಬಳಗದವರಿಂದ ಹಿಂದೂಸ್ತಾನಿ ಗಾಯನ ನಡೆಯಿತು.

ಸೆ.5ರಂದು ಮಧ್ಯಾಹ್ನ 3.30ರಿಂದ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಅವರ ಗಾಯನವಿದೆ. ಗೋಪಾಲಕೃಷ್ಣ ಹೆಗಡೆ ತಬಲಾದಲ್ಲಿ ಮತ್ತು ಸತೀಶ್ ಭಟ್ ಹಾರ್ಮೋನಿಯಂನಲ್ಲಿ ಸಹಕರಿಸುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.