ಮುರುಡೇಶ್ವರ: ಇಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಮತ್ಸ್ಯ ಮೇಳದಲ್ಲಿ ಬಣ್ಣ ಬಣ್ಣದ ಮೀನುಗಳು ಜನರನ್ನು ರಂಜಿಸಿದರೆ, ವಿಭಿನ್ನ ಬಗೆಯ ಸಮುದ್ರ ಮೃದ್ವಂಗಿಗಳು (ಚಿಪ್ಪು) ಚಿತ್ತಾಕರ್ಷಿಸಿದವು. ಸಣ್ಣ ಗಾತ್ರದಿಂದ ಹಿಡಿದು ಅಡಿಗಳಷ್ಟು ಅಗಲದ ಚಿಪ್ಪುಗಳನ್ನು ಕಂಡು ಜನ ಪುಳಕಗೊಂಡರು.
ವಿಶ್ವದ ನಾನಾ ಭಾಗದಿಂದ ಸಮುದ್ರ ಚಿಪ್ಪುಗಳನ್ನು ಹವ್ಯಾಸಕ್ಕಾಗಿ ಸಂಗ್ರಹಿಸುತ್ತಿರುವ ಕೇರಳ ರಾಜ್ಯದ ಅಲೆಪ್ಪಿಯ ಪರಿಸರ ತಜ್ಞ ಫಿರೋಜ್ ಅಹ್ಮದ್ ‘ಸೀ ಗಿಫ್ಟ್’ ಹೆಸರಿನಲ್ಲಿ ಸಮುದ್ರ ಚಿಪ್ಪುಗಳ ಪ್ರದರ್ಶನ ಆಯೋಜಿಸಿದ್ದಾರೆ. ಇಲ್ಲಿ ತಾವು ಸಂಗ್ರಹಿಸಿದ ಪೈಕಿ 350ಕ್ಕೂ ಹೆಚ್ಚು ಬಗೆಯ ಮೃದ್ವಂಗಿಗಳನ್ನು ಜನತೆಗೆ ಪ್ರದರ್ಶಿಸುತ್ತಿದ್ದಾರೆ.
ಬಿಳಿ ಬಣ್ಣದ ಬಟ್ಟಲಿನಲ್ಲಿ ಅವರು ಹರಡಿಟ್ಟಿರುವ, ಒಂದಕ್ಕಿಂತ ಒಂದು ವೈಶಿಷ್ಟವಾದ, ಬಣ್ಣ ಬಣ್ಣದ ಚಿಪ್ಪುಗಳನ್ನು ಜನರು ಕುತೂಹಲದಿಂದ ನೋಡಿದರು.
ಆರ್ಕ್ ಶೆಲ್, ಸೂರ್ಯಾಸ್ತಮಾನ ಬಣ್ಣ ಹೋಲುವ ಚಿಪ್ಪು, ಕದಿರು ಚಿಪ್ಪು, ಹಸಿರು ಬಣ್ಣದ ಚಿಪ್ಪು, ಇಂಡಿಯನ್ ಟಿಬಿಯಾ, ಎಲಿಫಂಟ್ ಟೂತ್... ಹೀಗೆ ನೂರಾರು ಬಗೆಯ ಚಿಪ್ಪುಗಳು ಪ್ರದರ್ಶನದಲ್ಲಿವೆ. ವೆಲ್ಕ್ ಹೆಸರಿನ ಅತಿ ದೊಡ್ಡ ಗಾತ್ರದ ಚಿಪ್ಪು, ನೆಸಾರಿಯಸ್ ಪಿಕ್ವಸ್ ಹೆಸರಿನ ಅತಿ ಚಿಕ್ಕ ಗಾತ್ರದ ಚಿಪ್ಪುಗಳನ್ನು ತುಂಬಿದ ಬಟ್ಟಲಿನತ್ತಲೇ ವೀಕ್ಷಕರ ದೃಷ್ಟಿ ನೆಟ್ಟಿದೆ.
‘30 ವರ್ಷದಿಂದ ಸಮುದ್ರ ಚಿಪ್ಪುಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇನೆ. 500ಕ್ಕೂ ಹೆಚ್ಚು ಬಗೆಯ ಚಿಪ್ಪುಗಳನ್ನು ಸಂಗ್ರಹಿಸಿದ್ದೇನೆ. ಅವುಗಳ ಪೈಕಿ ಕೆಲವನ್ನು ಪ್ರದರ್ಶನಕ್ಕೆ ಇರಿಸಿದ್ದೇನೆ. ಚಿಪ್ಪುಗಳನ್ನು ಎಂದಿಗೂ ಮಾರಾಟ ಮಾಡುವುದಿಲ್ಲ. ಅವುಗಳ ಸಂರಕ್ಷಣೆಯ ಉದ್ದೇಶದೊಂದಿಗೆ ಸಂಗ್ರಹದ ಕೆಲಸ ಮಾಡುತ್ತಿರುವೆ’ ಎಂದು ಫಿರೋಜ್ ಅಹ್ಮದ್ ಹೇಳಿದರು.
‘ಅರಬ್ಬಿ ಸಮುದ್ರ, ಹಿಂದೂ ಮಹಸಾಗರ, ಫೆಸಿಪಿಕ್ ಸಾಗರ, ಮೆಡಿಟರೇನಿಯನ್ ಸಮುದ್ರ ಹೀಗೆ ಜಗತ್ತಿನ ವಿವಿಧ ಸಮುದ್ರಗಳ ತೀರದಲ್ಲಿ ಓಡಾಟ ನಡೆಸಿ ಸಂಗ್ರಹಿಸಿದ ಚಿಪ್ಪುಗಳನ್ನು ಇಟ್ಟುಕೊಂಡಿದ್ದೇನೆ. ಇದಲ್ಲದೆ ಆಳ ಸಮುದ್ರದ ಮೀನುಗಾರಿಕೆ ನಡೆಸುವ ವೇಳೆ ಮೀನುಗಾರರಿಗೆ, ಸಂಶೋಧಕರಿಗೆ ದೊರೆತ ಚಿಪ್ಪುಗಳನ್ನು ಅವರಿಂದ ಖರೀದಿಸಿ ಸಂಗ್ರಹಿಸಿದ್ದೇನೆ. ಅವೆಲ್ಲವನ್ನೂ ಜನರಿಗೆ ಪ್ರದರ್ಶಿಸುವುದು ರೂಢಿ. ದೇಶದ ವಿವಿಧಡೆ 300ಕ್ಕೂ ಹೆಚ್ಚು ಸಮುದ್ರ ಚಿಪ್ಪುಗಳ ಪ್ರದರ್ಶನವನ್ನು ‘ಸೀ ಗಿಫ್ಟ್’ ಹೆಸರಿನಲ್ಲಿ ಆಯೋಜಿಸಿದ್ದೇನೆ’ ಎಂದರು.
ಆಕರ್ಷಣೀಯ ವೆಲ್ಕ್ ಮತ್ತು ನೆಸಾರಿಯಸ್ ಪಿಕ್ವಸ್ ಚಿಪ್ಪು ಸಮುದ್ರ ಶಂಖು, ಚಿಪ್ಪು ಕಂಡು ಖುಷಿಪಟ್ಟ ಜನರು ದೇಶದ ವಿವಿಧೆಡೆ 300ಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ತಜ್ಞ
ಸಮುದ್ರ ಮಾಲಿನ್ಯ ಹೆಚ್ಚಿದಷ್ಟು ಚಿಪ್ಪುಗಳು ಅವನತಿಯತ್ತ ಸಾಗುತ್ತವೆ. ಜತೆಗೆ ಭೂಮಿಯ ಮೇಲೆ ಆಮ್ಲಜನಕದ ಕೊರತೆ ಎದುರಾಗುತ್ತದೆ. ಇದನ್ನು ಪ್ರದರ್ಶನದ ಜತೆಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇನೆಫೀರೋಜ್ ಅಹ್ಮದ್ ಪರಿಸರ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.