ಶಿರಸಿ: ತಾಲ್ಲೂಕಿನ ಹಳ್ಳಿಕೊಪ್ಪ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಕಟ್ಟಡ ನಿರ್ಮಾಣದ ಸಹಾಯಾರ್ಥ ಗುರುವಾರ ಮತ್ಸ್ಯಬೇಟೆ ನಡೆಸಲಾಯಿತು.
ಕಳೆದ ಎರಡು ವರ್ಷಗಳಿಂದ ಗ್ರಾಮದ ಕೆರೆಯಲ್ಲಿ ಗ್ರಾಮಸ್ಥರು ಸಾಮೂಹಿಕ ಮತ್ಸ್ಯಬೇಟೆ ನಡೆಸುತ್ತಿದ್ದಾರೆ. ಉತ್ಸಾಹದಲ್ಲಿ ಕೆರೆಗೆ ಇಳಿದಿದ್ದ ಗ್ರಾಮಸ್ಥರು ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೆ ನಿರಾಸೆ ಅನುಭವಿಸಿದರು. ಕೆಲವರಿಗೆ ಹತ್ತಾರು ಕೆಜಿಯಷ್ಟು ಮೀನು ಸಿಕ್ಕರೆ, ಮತ್ತೆ ಹಲವರು ಬರಿಗೈಲಿ ದಡಕ್ಕೆ ಮರಳಿದ್ದರು.
ಹಳ್ಳಿಕೊಪ್ಪ, ಬುಗುಡಿಕೊಪ್ಪ, ಕೋಟೆಕೊಪ್ಪ, ಉಮ್ಮುಡಿ, ಮಳಲಗಾಂವ, ಇನ್ನಿತರ ಗ್ರಾಮಗಳಿಂದ ನೂರೈವತ್ತಕ್ಕೂ ಹೆಚ್ಚು ಜನರು ಬೇಟೆಯಲ್ಲಿ ಪಾಲ್ಗೊಂಡಿದ್ದರು. ಕಾಟ್ಲಾ, ಗಾಸ್ಗರ್, ಗೌರಿ ತಳಿಯ ಮೀನುಗಳು ಲಭಿಸಿದ್ದವು.
ಬಲೆ, ಗಾಳದ ಬದಲು ಕೇವಲ ಖುಣಿ ಬಳಸಿ ಮೀನು ಹಿಡಿಯಲು ಅವಕಾಶ ನೀಡಲಾಗಿತ್ತು. ಪ್ರತಿ ಖುಣಿಗೆ ತಲಾ ₹200 ರಂತೆ ದೇವಸ್ಥಾನದ ಕಟ್ಟಡ ನಿರ್ಮಾಣ ಸಹಾಯಾರ್ಥ ಸಂಗ್ರಹಿಸಲಾಯಿತು.
‘150ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಮತ್ಸ್ಯಬೇಟೆಯಿಂದ ₹30 ಸಾವಿರದಷ್ಟು ಮೊತ್ತ ಸಂಗ್ರಹವಾಗಿದೆ. ಇದನ್ನು ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು’ ಎಂದು ಸಮಿತಿಯ ಪ್ರಮುಖ ಪ್ರಶಾಂತ್ ನಾಯ್ಕ ತಿಳಿಸಿದರು.
‘ಕಳೆದ ವರ್ಷಕ್ಕೆ ಹೋಲಿಸಿದರೆ ಬೇಟೆ ವೇಳೆ ಈ ಬಾರಿ ಮೀನುಗಳು ಹೆಚ್ಚು ಲಭಿಸಿಲ್ಲ. ಆಗಸ್ಟ್ ವೇಳೆಗೆ ಗ್ರಾಮದ ಯುವಕರು ನೂರಾರು ಮೀನು ಮರಿಗಳನ್ನು ಕೆರೆಯಲ್ಲಿ ಬಿಟ್ಟಿದ್ದರು. ಅತಿವೃಷ್ಟಿಯಿಂದ ಕೆರೆ ಭರ್ತಿಯಾಗಿದ್ದ ಪರಿಣಾಮ ಮೀನುಗಳು ಹೊರಕ್ಕೆ ಹೋಗಿರುವ ಸಾಧ್ಯತೆ ಇದೆ’ ಎಂದು ಗ್ರಾಮದ ಹಿರಿಯ ಶಿವು ರಾಮಾ ನಾಯ್ಕ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.