ವಿಶ್ವೇಶ್ವರ ಗಾಂವ್ಕರ್
ಯಲ್ಲಾಪುರ: ‘ಏಳು ವರ್ಷದಿಂದ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತ ಜೀವನ ಕಟ್ಟಿಕೊಂಡಿದ್ದೇವೆ. ಏಕಾಏಕಿಯಾಗಿ ಇದನ್ನು ಸ್ಥಗಿತಗೊಳಿಸಲು ಮುಂದಾದರೆ ನಮ್ಮ ಹೊಟ್ಟೆಪಾಡೇನು. ಹೂ, ಹಣ್ಣು ಮಾರಾಟಕ್ಕೆ ಅವಕಾಶ ಕೊಟ್ಟು ಮೀನು ಮಾರಾಟಕ್ಕೆ ಅವಕಾಶವಿಲ್ಲ ಎಂಬುದರ ಔಚಿತ್ಯವೇನು?’ ಹೀಗೆ ಖಾರವಾಗಿ ಪ್ರಶ್ನಿಸಿದವರು ಪಟ್ಟಣದ ರಸ್ತೆ ಬದಿಗಳಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರು.
ಅಂಕೋಲಾ ತಾಲ್ಲೂಕಿನ ಹತ್ತಾರು ಮಹಿಳೆಯರು ಪಟ್ಟಣದ ವಿವಿಧೆಡೆ ರಸ್ತೆ ಬದಿಗಳಲ್ಲಿ ಮೀನು ಮಾರಾಟ ಮಾಡುವ ಮೂಲಕ ಜೀವನ ನಿರ್ವಹಣೆ ಕಂಡುಕೊಂಡಿದ್ದಾರೆ. ದೋಣಿಗಳಲ್ಲಿ ಆಯಾ ದಿನ ಬರುವ ತಾಜಾ ಮೀನುಗಳನ್ನು ಹೊತ್ತು ತರುವ ಇವರು ರಾಷ್ಟ್ರೀಯ ಹೆದ್ದಾರಿ, ಕೋರ್ಟ್ ರಸ್ತೆ, ಹಳೆ ಪೆಟ್ರೋಲ್ ಪಂಪ್, ಜೋಡುಕೆರೆ ರಸ್ತೆಯ ಬದಿಯಲ್ಲಿ ಕುಳಿತು ಮಾರಾಟ ಮಾಡುತ್ತಾರೆ.
ಆದರೆ ಈಗ ರಸ್ತೆಯ ಬದಿಯಲ್ಲಿ ಕುಳಿತು ಮೀನು ವ್ಯಾಪಾರ ಮಾಡಬಾರದು ಎಂದು ಪಟ್ಟಣ ಪಂಚಾಯ್ತಿ ನೀಡಿರುವ ಸೂಚನೆಯಿಂದ ಮಹಿಳೆಯರು ಕಂಗಾಲಾಗಿದ್ದಾರೆ. ಜೀವನ ನಿರ್ವಹಣೆಗೆ ಇದ್ದ ಮಾರ್ಗೋಪಾಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂಬುದು ಅವರ ಆರೋಪ.
ಹೊರಗಿನಿಂದ ಮೀನು ಮಾರಲು ಬರುವವರಿಗೆ ಮೀನು ಮಾರುಕಟ್ಟೆಯ ಸಮೀಪ ಸೂಕ್ತ ಸ್ಥಳ ಗುರುತಿಸಲು ಪ್ರಯತ್ನಿಸಲಾಗುವುದು. 10 ದಿನದೊಳಗೆ ರಸ್ತೆ ಬದಿ ಮೀನು ಮಾರಾಟ ನಿಲ್ಲಿಸುವಂತೆ ಎಚ್ಚರಿಕೆ ನೀಡಲಾಗಿದೆ.ಸುನೀಲ ಗಾವಡೆ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ
‘ಹೊರಗಿನಿಂದ ಬಂದ ಮಹಿಳೆಯರು ರಸ್ತೆ ಬದಿಗೆ ಮೀನು ಮಾರಾಟ ಮಾಡುವುದರಿಂದ ನಮಗೆ ವ್ಯಾಪಾರ ಆಗುವುದಿಲ್ಲ. ಅವರು ಮೀನು ಮಾರುವುದಿದ್ದರೆ ಮೀನು ಮಾರುಕಟ್ಟೆಯಲ್ಲಿಯೇ ಮಾರಲಿ’ ಎನ್ನುವುದು ಮೀನು ಮಾರುಕಟ್ಟೆಯ ವ್ಯಾಪಾರಿ ಶಫಿ ಅವರ ವಾದ.
‘ಕಳೆದ ಏಳು ವರ್ಷದಿಂದ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದೇವೆ. ರಸ್ತೆಯ ಪಕ್ಕದಲ್ಲಿಯೇ ಯಾರಿಗೂ ತೊಂದರೆಯಾಗದಂತೆ ಮೀನು ಮಾರಾಟ ಮಾಡುತ್ತೇವೆ. ಸ್ಥಳಾಂತರಗೊಂಡರೆ ನಮ್ಮ ಕಾಯಂ ಗ್ರಾಹಕರನ್ನು ಕಳೆದುಕೊಳ್ಳುತ್ತೇವೆ. ಅಲ್ಲದೆ ಮಾರುಕಟ್ಟೆಯಲ್ಲಿ ಅವರು ನಿಗದಿಪಡಿಸಿದ ಬೆಲೆಗೆ ಮೀನು ಮಾರಾಟ ಮಾಡಬೇಕಾಗುತ್ತದೆ’ ಎಂಬುದು ಮೀನು ಮಾರಾಟ ಮಾಡುವ ಅಂಕೋಲಾ ಗಾಬಿತಕೇಣಿಯ ಗೌರಿ ಕೃಷ್ಣ ಅವರ ಅಭಿಪ್ರಾಯ.
‘ಪಟ್ಟಣದ ರಸ್ತೆ ಬದಿಯಲ್ಲಿ ಹೂವು, ಹಣ್ಣು, ತರಕಾರಿ ಮುಂತಾದವುಗಳ ಮಾರಾಟ ಮೊದಲಿನಿಂದಲೂ ನಡೆದಿದೆ. ಯಾವುದೋ ಒಂದು ಮೂಲೆಯಲ್ಲಿ ಮೀನು ಮಾರಾಟ ಮಾಡಿದರೆ ತಪ್ಪೇನು’ ಎಂದು ಮೀನು ಮಾರುವ ಮಹಿಳೆ ಪೂಜಾ ಪ್ರಶ್ನಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.