ಕಾರವಾರ: ತಾಲ್ಲೂಕಿನ ದೇವಬಾಗ ಕಡಲತೀರದಲ್ಲಿ ಜಮೀನು ನೀಡಬೇಕು ಎಂಬ ಕರಾವಳಿ ಕಾವಲು ಪಡೆಯ (ಕೋಸ್ಟ್ ಗಾರ್ಡ್) ಪ್ರಸ್ತಾವಕ್ಕೆ ಸ್ಥಳೀಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕಡಲತೀರದಲ್ಲಿ ಸೋಮವಾರ ಸೇರಿದ್ದ ನೂರಾರು ಮಂದಿ ಮೀನುಗಾರರು ತಮ್ಮ ನೆಲೆಯನ್ನು ಅವರಿಗೆ ನೀಡದಂತೆ ಆಗ್ರಹಿಸಿದರು.
ಕರಾವಳಿ ಕಾವಲು ಪಡೆಯ ಅಧಿಕಾರಿಗಳು ದೇವಬಾಗಕ್ಕೆ ಜ.28ರಂದು ಭೇಟಿ ನೀಡಿದ್ದರು. ಅವರು ಅಲ್ಲಿರುವ ಸರ್ಕಾರಿ ಜಮೀನು ಮತ್ತು ಸ್ಥಳದ ಜಿ.ಪಿ.ಎಸ್ ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುಮಾರು ಎಂಟು ಎಕರೆಗಳಷ್ಟು ಜಮೀನನ್ನು ಅವರು ತಮ್ಮ ಸ್ಟೇಷನ್ ನಿರ್ಮಿಸಲು ಹುಡುಕುತ್ತಿದ್ದಾರೆ. ದೇವಬಾಗದಲ್ಲಿ ಅವರಿಗೆ ಜಮೀನು ನೀಡಲು ಬಿಡುವುದಿಲ್ಲ. ಇದರಿಂದ ಸ್ಥಳೀಯ ಮೀನುಗಾರರು ಅತಂತ್ರರಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ, ‘ದೇವಬಾಗದ ಕಡಲತೀರವು ಸಾಂಪ್ರದಾಯಿಕ ಮೀನುಗಾರರ ತಾಣ. ಇಲ್ಲಿನ ಕಡಲತೀರವನ್ನು ಕರಾವಳಿ ಕಾವಲು ಪಡೆಗೆ ನೀಡಿದರೆ ಮೀನುಗಾರರ ಬದುಕಿನ ಮೇಲೆ ದೊಡ್ಡ ಹೊಡೆತ ಬೀಳಲಿದೆ. ದೇವಬಾದಿಂದ ಮಾಜಾಳಿಯ ತನಕ ಸುಮಾರು 10 ಸಾವಿರ ಮೀನುಗಾರರಿದ್ದು, ಎಲ್ಲರಿಗೂ ಇದೇ ಕಡಲತೀರ ಆಧಾರವಾಗಿದೆ’ ಎಂದು ಹೇಳಿದರು.
‘ದೋಣಿಗಳು ಈಗ ನಿಂತಿರುವ ಜಾಗದಲ್ಲಿ ಮಳೆಗಾಲ ಅಲೆಗಳ ಅಬ್ಬರ ಹೆಚ್ಚಿರುತ್ತದೆ. ಅದರ ಪಕ್ಕದ ತೀರದಲ್ಲಿ ಕಡಲ್ಕೊರೆತ ತಡೆಯಲು ದಡಕ್ಕೆ ಕಲ್ಲುಗಳನ್ನು ಅಳವಡಿಸಲಾಗಿದೆ. ಹಾಗಾಗಿ ಅಲ್ಲಿ ದೋಣಿಗಳನ್ನು ನಿಲ್ಲಿಸಲಾಗುವುದಿಲ್ಲ. ಕರಾವಳಿ ಕಾವಲು ಪಡೆಯು ಪರಿಶೀಲನೆ ಮಾಡಿದ ಜಾಗದಲ್ಲೇ ಮೀನುಗಾರರು ಮಳೆಗಾಲದಲ್ಲಿ ತಮ್ಮ ದೋಣಿಗಳನ್ನು ಲಂಗರು ಹಾಕುತ್ತಾರೆ. ಒಂದುವೇಳೆ, ಈ ಪ್ರದೇಶವನ್ನು ನಿರ್ಬಂಧಿಸಿದರೆ ಇಲ್ಲಿನ ಎಲ್ಲ ಮೀನುಗಾರರು ಅಕ್ಷರಶಃ ನಿರ್ಗತಿಕರಾಗುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಈ ಬಗ್ಗೆ ಮೀನುಗಾರರ ವಿರೋಧವನ್ನು ಜಿಲ್ಲಾಡಳಿತದೊಂದಿಗೂ ದಾಖಲಿಸಲಾಗುವುದು. ಫೆ.1ರಂದು ಜಿಲ್ಲಾಧಿಕಾರಿಗೆ ಮನವಿ ನೀಡಲಾಗುವುದು’ ಎಂದು ತಿಳಿಸಿದರು.
ದೇವಬಾಗ ಕಡಲತೀರದಲ್ಲಿ ಆಮೆ ಮೊಟ್ಟೆಯಿಟ್ಟಿದ್ದು, ಅರಣ್ಯ ಇಲಾಖೆಯು ಅವುಗಳನ್ನು ಸಂರಕ್ಷಿಸಿದೆ. ಕೆಲವೇ ದಿನಗಳಲ್ಲಿ ಅವುಗಳಿಂದ ಮರಿಗಳು ಹೊರ ಬರಲಿವೆ. ಹಾಗಾಗಿ ಇಲ್ಲಿ ನಿರ್ಮಾಣ ಕಾಮಗಾರಿ ಮಾಡಬಾರದು ಎಂದೂ ಮೀನುಗಾರರು ಒತ್ತಾಯಿಸಿದರು.
ಹಿಂದೆಯೂ ಗುರುತಿಸಲಾಗಿತ್ತು:
ಕರಾವಳಿ ಕಾವಲು ಪಡೆಯು ಅಮದಳ್ಳಿಯಲ್ಲಿ ಸ್ಟೇಷನ್ ಹೊಂದಿದ್ದು, ಬಾಡಿಗೆ ಕಟ್ಟಡದಲ್ಲಿದೆ. ಅದರ ಹೋವರ್ ಕ್ರಾಫ್ಟ್ ದೋಣಿಯನ್ನು ನಿಲ್ಲಿಸಲು ಸೂಕ್ತ ಸ್ಥಳ ಸಿಕ್ಕಿಲ್ಲ. ಅಲ್ಲದೇ ಸಿಬ್ಬಂದಿಗೆ ಒಂದೇ ಕಡೆ ವಸತಿ ಸೌಕರ್ಯವೂ ಆಗಿಲ್ಲ. ಹಾಗಾಗಿ ಈ ಹಿಂದೆ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಜಾಗ ಮಂಜೂರು ಮಾಡಲಾಗಿತ್ತು. ಆದರೆ, ಅದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ರದ್ದು ಮಾಡಲಾಗಿತ್ತು.
ಅಮದಳ್ಳಿಯಲ್ಲಿ 26 ಎಕರೆ 8 ಗುಂಟೆ ಜಾಗವನ್ನು ಗುರುತಿಸಿ, ಭೂ ಮಾಲೀಕರಿಂದ ಖರೀದಿಸಲು ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, ಅದೂ ಯಶಸ್ವಿಯಾಗಿಲಿಲ್ಲ. ಹಾಗಾಗಿ ಮತ್ತೆ ಜಾಗದ ಹುಡುಕಾಟದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.