ಕಾರವಾರ: ಮಳೆಯ ಕೊರತೆಯಿಂದ ಈ ಬಾರಿ ಕೃಷಿ ಕ್ಷೇತ್ರಕ್ಕೆ ಬರದ ಬಿಸಿ ತಟ್ಟಿದ್ದು ಒಂದೆಡೆಯಾದರೆ, ಸಮುದ್ರದಲ್ಲಿಯೂ ಮೀನಿನ ಕೊರತೆ ಉಂಟಾಗಿರುವುದು ಮೀನುಗಾರಿಕೆ ಕ್ಷೇತ್ರಕ್ಕೂ ಬರದ ಬಿಸಿ ತಟ್ಟುವಂತೆ ಮಾಡಿದೆ. ಬೈತಕೋಲ ಸೇರಿದಂತೆ ಜಿಲ್ಲೆಯ ಬಹುತೇಕ ಮೀನುಗಾರಿಕೆ ಬಂದರುಗಳಲ್ಲಿ ಚಟುವಟಿಕೆ ಕಳೆಗುಂದಿದೆ.
ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಬೆರಳೆಣಿಕೆಯಷ್ಟು ಪರ್ಸಿನ್ ದೋಣಿಗಳು ಮೀನು ಬೇಟೆ ನಡೆಸುತ್ತಿದ್ದು, ನೂರಾರು ಟ್ರಾಲರ್ ದೋಣಿಗಳು ಬಂದರಿನಲ್ಲಿ ನಿಂತು ಹಲವು ದಿನ ಕಳೆದಿವೆ. ಬೆಳಿಗ್ಗೆ, ಸಂಜೆಯ ವೇಳೆಗೆ ದೋಣಿಗಳಿಂದ ಮೀನು ಇಳಿಸುವ, ಮೀನುಗಳನ್ನು ವಾಹನಗಳಿಗೆ ತುಂಬಿಸುವ ಚಟುವಟಿಕೆಯಿಂದ ಗಿಜಿಗುಡುತ್ತಿದ್ದ ಬಂದರಿನ ಧಕ್ಕೆಯಲ್ಲಿ ಅಲ್ಲಲ್ಲಿ ಕಾರ್ಮಿಕರು ನಿದ್ದೆಗೆ ಜಾರಿದ್ದು ಕಾಣಸಿಗುತ್ತಿದೆ.
ಜಿಲ್ಲೆಯಲ್ಲಿ 1,113 ಪರ್ಸಿನ್, 4,027 ಟ್ರಾಲರ್ ದೋಣಿಗಳಿವೆ. ಅವುಗಳ ಪೈಕಿ ಶೇ.65ಕ್ಕೂ ಹೆಚ್ಚು ಮೀನುಗಾರಿಕೆ ಚಟುವಟಿಕೆಗೆ ತೆರಳದೆ ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲವಾಗಿದೆ ಎನ್ನುತ್ತವೆ ಮೀನುಗಾರಿಕೆ ಇಲಾಖೆಯ ಮೂಲಗಳು.
‘ಚಳಿಗಾಲದ ಆರಂಭದ ದಿನಗಳಲ್ಲಿ ಮೀನು ಸಿಗುವುದು ವಿರಳವಾಗಿತ್ತು. ಡಿಸೆಂಬರ್ ಬಳಿಕ ಉತ್ತಮ ಪ್ರಮಾಣದಲ್ಲಿ ಮೀನು ಸಿಗುವುದು ವಾಡಿಕೆಯಾಗಿತ್ತು. ಈ ಬಾರಿ ಟ್ರಾಲರ್ ದೋಣಿಗಳಿಗೆ ಮೀನು ಸಿಗುತ್ತಿಲ್ಲ. ಬಂದರಿನಿಂದ ಸುಮಾರು ಎಂಟು ನಾಟಿಕಲ್ ಮೈಲಿ ದೂರದವರೆಗೆ ಸಿಗಬೇಕಿದ್ದ ಸಿಗಡಿ, ಲೆಪ್ಪೆ, ಸೇರಿದಂತೆ ಯಾವ ಬಗೆಯ ಮೀನುಗಳು ಇಲ್ಲ. ಒಮ್ಮೆ ದೋಣಿ ಒಯ್ದರೆ ಕಾರ್ಮಿಕರ ವೇತನ, ಡೀಸೆಲ್ ವೆಚ್ಚ ಸೇರಿದಂತೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಆದರೆ ಕೇವಲ ₹2 ರಿಂದ 3 ಸಾವಿರ ಮೊತ್ತದ ಮೀನು ಸಿಗುತ್ತಿದೆ’ ಎಂದು ಟ್ರಾಲರ್ ದೋಣಿ ಮಾಲೀಕ ಶ್ರೀಧರ ಹರಿಕಂತ್ರ ಸಮಸ್ಯೆ ಹೇಳುತ್ತಾರೆ.
‘ಪರ್ಸಿನ್ ಬೋಟ್‍ಗಳಲ್ಲಿಯೂ ಕೆಲವಷ್ಟು ಮಾತ್ರ ಆಳಸಮುದ್ರಕ್ಕೆ ತೆರಳುತ್ತಿವೆ. ಮೀನಿನ ಕೊರತೆಯ ಕಾರಣಕ್ಕೆ ಹೆಚ್ಚು ಕಾರ್ಮಿಕರನ್ನೂ ಕೆಲಸಕ್ಕೆ ಕರೆಯಿಸಿಲ್ಲ. ಮೀನು ನಿರೀಕ್ಷಿತ ಪ್ರಮಾಣದಲ್ಲಿ ಸಿಗದ ಕಾರಣ ನಷ್ಟ ಅನುಭವಿಸುತ್ತಿದ್ದೇವೆ’ ಎಂದು ಪರ್ಸಿನ್ ದೋಣಿ ಮಾಲೀಕರ ಸಂಘದ ಅಧ್ಯಕ್ಷ ರಾಜು ತಾಂಡೇಲ್ ತಿಳಿಸಿದರು.
‘ಮೀನು ಸಂಪನ್ಮೂಲದ ಮೇಲಿನ ಅತಿಯಾದ ಒತ್ತಡ, ಬೆಳಕಿನ ಮೀನುಗಾರಿಕೆಯ ಜತೆಗೆ ಸಣ್ಣ ಬಲೆಗಳನ್ನು ಬಳಸಿ ಮೀನುಗಾರಿಕೆ ನಡೆಸುವ ಪ್ರಕ್ರಿಯೆಗಳಿಂದ ಮೀನಿನ ಸಂತತಿ ಕ್ಷೀಣಿಸಿದೆ. ಜಾಗತಿಕ ತಾಪಮಾನದ ಪರಿಣಾಮವೂ ಮೀನು ಸಮುದ್ರ ತೀರಕ್ಕೆ ಹತ್ತಿರ ಬರುತ್ತಿಲ್ಲ. ಇದರಿಂದ ಮೀನುಗಾರರಿಗೆ ಮೀನು ಲಭಿಸುತ್ತಿಲ್ಲ’ ಎಂದು ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಜೆ.ಎಲ್.ರಾಠೋಡ್ ಅಭಿಪ್ರಾಯಪಡುತ್ತಾರೆ.
ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ವಿಶೇಷ ಪರಿಹಾರ ನೀಡಿದಂತೆ ಮೀನುಗಾರಿಕೆ ಕ್ಷೇತ್ರಕ್ಕೂ ಬರ ಆವರಿಸಿದೆ ಎಂದು ಪರಿಗಣಿಸಿ ಸರ್ಕಾರ ಮೀನುಗಾರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು.-ರಾಜು ತಾಂಡೇಲ್ ಪರ್ಸಿನ್, ಬೋಟ್ ಮಾಲೀಕರ ಸಂಘದ ಅಧ್ಯಕ್ಷ
ಮೀನುಗಾರಿಕೆ ಚಟುವಟಿಕೆ ಕಳೆಗುಂದಿರುವುದು ನಿಜ. ಡೀಸೆಲ್ ಸಹಾಯಧನದ ಹೊರತಾಗಿ ಮೀನುಗಾರರಿಗೆ ಪರಿಹಾರ ಒದಗಿಸಲು ಸದ್ಯಕ್ಕೆ ಅವಕಾಶ ಇಲ್ಲ.-ಪ್ರತೀಕ್ ಶೆಟ್ಟಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.