ಶಿರಸಿ: ಬಹುನಿರೀಕ್ಷಿತ ಫಲಪುಷ್ಪ ಪ್ರದರ್ಶನ ಹಾಗೂ ಕಿಸಾನ್ ಮೇಳ ಫೆ.2, 3 ಹಾಗೂ 4ರಂದು ಇಲ್ಲಿನ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆಯಲಿದೆ. ಪ್ರದರ್ಶನಕ್ಕೆ ಬರುವ ಸಾರ್ವಜನಿಕರನ್ನು ಸ್ವಾಗತಿಸಲು ಲಕ್ಷಾಂತರ ಪುಷ್ಪಗಳು ನಸುನಗುತ್ತ ನಿಂತಿವೆ.
ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಆತ್ಮ ಯೋಜನೆ, ತೋಟಗಾರಿಕಾ ಕಾಲೇಜು ಹಾಗೂ ಕೃಷಿ ಸಂಬಂಧಿಸಿದ ಇಲಾಖೆಗಳು, ಜಿಲ್ಲಾ ಪಂಚಾಯ್ತಿ ಜಂಟಿ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದ ಕುರಿತು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
19 ಅಡಿ ಎತ್ತರದ ಪುಷ್ಪ ಮಂಟಪ, ಪುಷ್ಪ ರಂಗೋಲಿ, ಹೂಗಳಿಂದ ಮೂಡಲಿರುವ ಚಿಟ್ಟೆ, ಬಿಂಬಿ, ಕುಂಬಳಕಾಯಿ ಹುಳ, ಫಿರಂಗಿ, ಆನೆಗಳು, ಬುಟ್ಟಿಯಲ್ಲಿರುವ ನಾಯಿಮರಿ, ಹೂಗಳ ಜೋಡಣೆ ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ. ತೆಂಗಿನಕಾಯಿ ಕೆತ್ತನೆ, ಬೊನ್ಸಾಯಿ ಕೃಷಿ ಪ್ರದರ್ಶನ, ತರಕಾರಿ ಬೆಳೆಗಳ ಪ್ರಾತ್ಯಕ್ಷಿಕೆ ಗಮನ ಸೆಳೆಯಲಿವೆ. ಈ ಬಾರಿ ಅನೇಕ ಹೂಗಳನ್ನು ಸ್ಥಳೀಯವಾಗಿ ಬೆಳೆಸಲಾಗಿದೆ. ರೈತರು ವಿವಿಧ ಜಾತಿಯ ಸೇವಂತಿಗೆ ಬೆಳೆದಿದ್ದಾರೆ. ಪ್ರದರ್ಶನಕ್ಕೆ ಬೇಕಾಗುವ ಇನ್ನುಳಿದ ಹೂಗಳನ್ನು ಬೆಂಗಳೂರು ಭಾಗದಿಂದ ನೇರವಾಗಿ ರೈತರಿಂದ ಖರೀದಿಸಿ ತರಲಾಗುತ್ತದೆ ಎಂದು ತಿಳಿಸಿದರು.
ಇಲಾಖೆಯ ಆವರಣದಲ್ಲಿ ಕಲ್ಲಂಗಡಿ, ಟೊಮೆಟೊ, ಬದನೆಕಾಯಿ, ಮೂಲಂಗಿ ಮೊದಲಾದ ತರಕಾರಿ ಬೆಳೆಸಲಾಗಿದೆ. ಸೇವಂತಿಗೆ, ಟೊರಿನಿಯಾ, ಚೆಂಡು ಹೂ, ಜಿರೇನಿಯಂ, ಬ್ರಿಗೊನಿಯಾ, ಸಾಲ್ವಿಯಾ, ಕ್ಯಾಲಂಡೇಲಾ ಸೇರಿದಂತೆ ಸುಮಾರು 32 ವಿಧದ ಹೂಗಳನ್ನು ಮೇಳದ ಸೌಂದರ್ಯವನ್ನು ಹೆಚ್ಚಿಸಲಿವೆ. ಕಾರ್ಯಕ್ರಮಕ್ಕೆ ಅಂದಾಜು ₹ 13 ಲಕ್ಷ ವೆಚ್ಚವಾಗಲಿದೆ. ಇಲಾಖೆಯಿಂದ ₹ 6 ಲಕ್ಷ, ಆತ್ಮ ಯೋಜನೆಯಡಿ ₹ 2.5 ಲಕ್ಷ ಅನುದಾನ ದೊರೆತಿದೆ ಎಂದು ವಿವರಿಸಿದರು.
ಫೆ.2ರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪ್ರದರ್ಶನ ಉದ್ಘಾಟಿಸುವರು. ಇದೇ ದಿನ ಪುಷ್ಪ ರಂಗೋಲಿ ಪ್ರದರ್ಶನವಿದೆ. ಫೆ.3ರ ಬೆಳಿಗ್ಗೆ 10.30ಕ್ಕೆ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ತರಕಾರಿ ಬೇಸಾಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ ಎಂದು ಹೇಳಿದರು. ಪ್ರಮುಖರಾದ ಮಂಜು ಎಂ.ಜೆ, ವಿ.ಎಸ್.ಬೆಳಗಾಂವಕರ, ಪ್ರೊ. ಹರ್ಷವರ್ಧನ, ಗಣೇಶ ಹೆಗಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.