ಶಿರಸಿ: ‘ಎಲಿಫಂಟ್ ಕಾರಿಡಾರ್’ನಿಂದ ಹೊರಗುಳಿದ ಗಜಪಡೆಯ ಸದಸ್ಯರ ಮೇಲೆ ನಿಗಾ ಇಟ್ಟು ಅವುಗಳನ್ನು ಪುನಃ ಸರಿದಾರಿಗೆ ತರಲು ಇಲ್ಲಿನ ಅರಣ್ಯ ಇಲಾಖೆ ‘ಡ್ರೋಣ್ ಕಣ್ಗಾವಲು’ ಆರಂಭಿಸಿದೆ.
ಪ್ರಸಕ್ತ ವರ್ಷ ತೀವ್ರ ಮಳೆಗಾಲ, ರೋಗ ಬಾಧೆಗಳಿಗೆ ಅಡಿಕೆ, ಬಾಳೆ, ಮೆಕ್ಕೆಜೋಳ, ಭತ್ತದ ಬೆಳೆಗಳು ನೆಲಕಚ್ಚಿವೆ. ಅಳಿದುಳಿದ ಫಸಲು ಬೆಳೆಗಾರರ ಕೈಸೇರುವ ಹೊತ್ತಿನಲ್ಲಿ ಕಾಡಿನಿಂದ ಗಜಪಡೆ ದಾಳಿ ಇಟ್ಟು ಆಪೋಷನ ತೆಗೆದುಕೊಳ್ಳುತ್ತಿವೆ. ಆಳೆತ್ತರ ಬೆಳೆದ ಅಡಿಕೆ, ಬಾಳೆ ಮರಗಳು ಇವುಗಳ ಅಟಾಟೋಪಕ್ಕೆ ಧರೆಗುರುಳುತ್ತಿವೆ. ಭತ್ತದ ಗದ್ದೆಗಳು ನೆಲಕಚ್ಚುತ್ತಿವೆ. ವರ್ಷದ ದುಡಿಮೆ ಕ್ಷಣಾರ್ಧದಲ್ಲಿ ಮಣ್ಣು ಪಾಲಾಗುತ್ತಿದೆ.
ಆನೆಗಳಿಂದಾಗುವ ಹಾವಳಿ ತಡೆದು ಕೂಡಲೆ ಕಾರ್ಯಾಚರಣೆ ನಡೆಸಿ ಆನೆಗಳನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡಲು ರಚನಾತ್ಮಕವಾದ ಕ್ರಮ ತೆಗೆದು ಕೊಳ್ಳಬೇಕೆಂದು ಅರಣ್ಯ ಅಧಿಕಾರಿಗಳ ಮೇಲೆ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೇ, ಆನೆ ದಾಳಿಯಿಂದಾದ ಹಾನಿಗಳಿಗೆ ಸಂಬಂಧಪಟ್ಟ ರೈತರಿಗೆ ಅರಣ್ಯ ಇಲಾಖೆ ವತಿಯಿಂದ ಪರಿಹಾರವನ್ನು ನೀಡಬೇಕೆಂದು ರೈತರು ಆಗ್ರಹಿಸಿಸುತ್ತಿದ್ದಾರೆ. ಹೀಗಾಗಿ ಗುಂಪಿನಿಂದ ತಪ್ಪಿಸಿಕೊಂಡು ರೈತರ ಕೃಷಿ ಕ್ಷೇತ್ರಕ್ಕೆ ಲಗ್ಗೆ ಇಡುವ ಆನೆಗಳ ಚಲನವಲನಗಳ ಮೇಲೆ ಕಣ್ಣಿಟ್ಟು ಅವುಗಳನ್ನು ನಿಯಂತ್ರಿಸುವ ಕಸರತ್ತಿಗೆ ಅರಣ್ಯ ಇಲಾಖೆ ಮುಂದಾಗಿದೆ.
‘ಕಾಡಾನೆಗಳು ಪ್ರತಿ ವರ್ಷ ಹಳಿಯಾಳ, ಗುಂಜಾವತಿ, ಯಲ್ಲಾಪುರದ ಕೆಲ ಭಾಗ, ಮುಂಡಗೋಡ ಹಾಗೂ ಬನವಾಸಿ ಹೋಬಳಿ ಮೂಲಕ ಸೊರಬ ಅರಣ್ಯದತ್ತ ಸಾಗುತ್ತವೆ. ಹೀಗೆ ಅವುಗಳು ಪಥದಲ್ಲಿ ಸಾಗುವಾಗ ಕೆಲವು ಬಾರಿ ಕೃಷಿ ಕ್ಷೇತ್ರಕ್ಕೆ ನುಗ್ಗುತ್ತವೆ. ಆ ವೇಳೆ ರೈತರು ಪಟಾಕಿ, ಸಿಡಿಮದ್ದು ಸಿಡಿಸಿದರೆ ಅವುಗಳು ಗುಂಪಿನಿಂದ ಬೇರ್ಪಟ್ಟು ಬೇರೆಡೆ ಮುಖ ಮಾಡುತ್ತವೆ. ಇಂಥ ಸಂದರ್ಭದಲ್ಲಿ ಆ ಆನೆಗಳು ಮದಬಂದಂತೆ ವರ್ತಿಸುತ್ತವೆ. ಆಗ ಸಿಕ್ಕ ಬೆಳೆಗಳಾದಿಯಾಗಿ ಎಲ್ಲವೂ ನಾಶವಾಗುತ್ತವೆ. ಜತೆಗೆ ಜನವಸತಿ ಪ್ರದೇಶಗಳಲ್ಲಿ ಸಂಚರಿಸುವ ಕಾರಣ ಸಾರ್ವಜನಿಕರಿಗೂ ಅಪಾಯದ ಸಾಧ್ಯತೆ ಇರುತ್ತದೆ. ಅಂಥ ಆನೆಗಳ ಮೇಲೆ ನಿಗಾ ಇಡುವುದು ತುಂಬಾ ಕಷ್ಟ. ಆನೆಗಳ ಹಗಲು–ರಾತ್ರಿ ಚಲನವಲನ ಪತ್ತೆಯೇ ಸವಾಲು. ಹಾಗಾಗಿ, ಮೊದಲ ಸಲ ಡ್ರೋಣ್ ಕ್ಯಾಮೆರಾ ಬಳಸಿ ಅವುಗಳ ಚಲನವಲನದ ಮೇಲೆ ನಿಗಾ ಇಡಲಾಗುತ್ತಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರ ಮಾಹಿತಿ ನೀಡಿದರು.
‘ಪ್ರತಿ ವರ್ಷ ಜನವರಿ ಮತ್ತು ಫೆಬ್ರುವರಿ ತಿಂಗಳದಲ್ಲಿ ಆನೆಗಳು ಬರುತ್ತಿದ್ದವು. ಆದರೆ ಈ ವರ್ಷ ನವೆಂಬರ ತಿಂಗಳಲ್ಲಿ ಬಂದಿವೆ. ಒಂದು ವಾರದಿಂದ 20 ಜನ ಅರಣ್ಯ ಸಿಬ್ಬಂದಿ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿ 3 ತಂಡಗಳಾಗಿ ವಿಂಗಡಿಸಿ, ಆಯಾ ತಂಡಕ್ಕೆ ಡ್ರೋಣ್ ಕ್ಯಾಮೆರಾ, ನುರಿತ ಸಿಬ್ಬಂದಿ ಬಳಸಿ ಕಾಡಾನೆಗಳ ಬಗ್ಗೆ ನಿಗಾ ಇಡಲಾಗುತ್ತಿದೆ. ಆನೆಗಳು ಪತ್ತೆಯಾದ ತಕ್ಷಣ ಕ್ಯಾಮೆರಾದಲ್ಲಿ ಲೊಕೇಷನ್ ಸಮೇತ ಚಿತ್ರ ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಕಳಿಸಲಾಗುತ್ತದೆ. ಕೂಡಲೇ ಅವರು ಕಾರ್ಯಪ್ರವೃತ್ತರಾಗಿ ಕಾಡಾನೆಗಳನ್ನು ಅವುಗಳ ಪಥದತ್ತ ಸಾಗುವಂತೆ ಶ್ರಮಿಸುತ್ತಾರೆ. ಆದಾಗ್ಯೂ ಆಯಾ ಭಾಗದ ಜನರು ಜಾಗರೂಕರಾಗಿರಬೇಕು’ ಎನ್ನುತ್ತಾರೆ ಅವರು.
‘ಅತಿವೃಷ್ಟಿ ಹಾಗೂ ರೋಗಳಿಂದ ಬೆಳೆಗಳು ಈಗಾಗಲೇ ನಾಶವಾಗಿವೆ. ಈವರೆಗೆ ಸಂಚರಿಸದ ಪ್ರದೇಶದಲ್ಲಿ ಕೂಡ ಕಾಡಾನೆಗಳು ದಾಳಿ ಮಾಡಿ ಗಿಡಮರಗಳನ್ನು ಹಾಳು ಮಾಡುತ್ತಿವೆ. ಇದಕ್ಕೆ ಪರಿಹಾರವೂ ಸಲ್ಪವಿರುವುದರಿಂದ ರೈತರಿಗೆ ಅಗಾಧ ಪ್ರಮಾಣದ ನಷ್ಟವಾಗುತ್ತಿದೆ’ ಎಂದು ಬೆಟ್ಟಕೊಪ್ಪದ ಅಡಿಕೆ ಬೆಳೆಗಾರ ಸೀತಾರಾಮ ಹೆಗಡೆ ತಿಳಿಸಿದರು.
ಈಗಾಗಲೇ ಕಾಡಾನೆಗಳ ಮೇಲೆ ನಿಗಾ ಇಡಲು ಡ್ರೋಣ್ ಕ್ಯಾಮೆರಾ ಬಳಸಲಾಗುತ್ತಿದ್ದು ಶೀಘ್ರವೇ ಅವುಗಳನ್ನು ಪುನಃ ಆನೆ ಪಥದತ್ತ ಮುಟ್ಟಿಸಲಾಗುವುದುಜಿ.ಆರ್.ಅಜ್ಜಯ್ಯ ಶಿರಸಿ ಡಿಸಿಎಫ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.