ಜೊಯಿಡಾ: ತಾಲ್ಲೂಕಿನ ವಿವಿಧೆಡೆ ಕೊಟ್ಟಿಗೆಗೇ ದಾಳಿ ಮಾಡಿ ಐದು ಜಾನುವಾರನ್ನು ಬಲಿ ಪಡೆದಿದ್ದ ಹುಲಿಯು ಕೊನೆಗೂ ಬೋನಿನಲ್ಲಿ ಸೆರೆಯಾಗಿದೆ. ಒಂಬತ್ತು ವರ್ಷದ ಒಳಗಿನ ಈ ಹೆಣ್ಣು ಹುಲಿಯು ತುಸು ಅನಾರೋಗ್ಯವಾಗಿದ್ದು, ಚಿಕಿತ್ಸೆ ನೀಡಿದ ಬಳಿಕ ಹಂಪಿಯ ಅಭಯಾರಣ್ಯಕ್ಕೆ ಬಿಡಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಉಳವಿ ಭಾಗದ ಕಾಳಸಾಯಿ ಸಮೀಪದ ಚಂದ್ರಾಳಿ ಹಾಗೂ ಹೆಣಕೊಳ ಸಮೀಪದ ಕಳ್ನೆಯಲ್ಲಿ ಒಂದು ವಾರದ ಅವಧಿಯಲ್ಲಿ ಐದು ಜಾನುವಾರು ಹುಲಿ ದಾಳಿಗೆ ಬಲಿಯಾಗಿದ್ದವು. ಇದರಿಂದ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದರು. ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಳ್ನೆಯಲ್ಲಿ ದನದ ಕೊಟ್ಟಿಗೆಯಲ್ಲಿ ಬೋನು ಇಟ್ಟಿದ್ದರು. ವ್ಯಾಘ್ರವು ಭಾನುವಾರ ರಾತ್ರಿ ಅದರಲ್ಲಿ ಸೆರೆಯಾಗಿದೆ.
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಫಣಸೋಲಿ ವನ್ಯಜೀವಿ ವಲಯದ ಮಾಲೆ ಚಂದ್ರಾಳಿಯ ದತ್ತಾ ಶೇಳಪೇಕರ ಎಂಬುವವರ ಮೂರು ದನಗಳನ್ನು ಕಳೆದ ವಾರ ಹುಲಿ ತಿಂದಿತ್ತು. ಶನಿವಾರ ರಾತ್ರಿ ಗುಂದ ವನ್ಯಜೀವಿ ವಲಯದ ಕಳ್ನೆಯ ರಾಮ ಗುಣೋ ಬಿರಂಗತ ಅವರ ಎರಡು ದನಗಳನ್ನು ಕೊಟ್ಟಿಗೆಯಲ್ಲೇ ಕೊಂದು ಹಾಕಿತ್ತು. ಹುಲಿಯು ಚಂದ್ರಾಳಿಯಲ್ಲಿ ಮೊದಲ ಬಾರಿ ದಾಳಿ ಮಾಡಿದ್ದಾಗಲೇ ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಕಾರ್ಯಾಚರಣೆ ಪ್ರಾರಂಭಿಸಿದ್ದರು.
ಉಳವಿಯಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಶಾಸಕ ಆರ್.ವಿ.ದೇಶಪಾಂಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಈ ಭಾಗದ ಸಾರ್ವಜನಿಕರು ಭೇಟಿ ಮಾಡಿದ್ದರು. ಆದಷ್ಟು ಬೇಗ ಹುಲಿಯನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ನಿರ್ದೇಶಿಸಲು ಆಗ್ರಹಿಸಿದ್ದರು. ಸಚಿವರು ಮತ್ತು ಶಾಸಕರು, ಕೆ.ಟಿ.ಆರ್ ನಿರ್ದೇಶಕ ಮರಿಯಾ ಡಿ.ಕ್ರಿಸ್ತರಾಜು ಅವರಿಗೆ ದೂರವಾಣಿ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಹುಲಿಯ ಚಲನವಲನಗಳನ್ನು ಸೆರೆ ಹಿಡಿಯಲು ಫಣಸೋಲಿ ವನ್ಯಜೀವಿ ವಲಯದ ಉಪ ವಲಯ ಅರಣ್ಯಾಧಿಕಾರಿ ಪ್ರಸನ್ನ ಅಮರಾವತಿ ಹಾಗೂ ಆ ಭಾಗದ ಗಸ್ತು ವನಪಾಲಕರು ಸತತ ಒಂದು ವಾರ ಚಂದ್ರಾಳಿಯಲ್ಲೇ ಬೀಡುಬಿಟ್ಟಿದ್ದರು. ಕ್ಯಾಮೆರಾಗಳನ್ನು ಅಳವಡಿಸಿ ಅದರ ಚಲನವಲನ ಗಮನಿಸಿದ್ದರು. ಈ ಸಂದರ್ಭದಲ್ಲಿ ಮೂರು ಬಾರಿ ಫಣಸೋಲಿ ವಲಯ ಅರಣ್ಯಾಧಿಕಾರಿ ರಶ್ಮಿ ದೇಸಾಯಿ ಹಾಗೂ ಒಂದು ಬಾರಿ ಕೆ.ಟಿ.ಆರ್ ನಿರ್ದೇಶಕ ಮರಿಯಾ ಕ್ರಿಸ್ತರಾಜು ಅವರೂ ಸ್ಥಳಕ್ಕೆ ಭೇಟಿ ನೀಡಿದ್ದರು. ಹುಲಿಯನ್ನು ಸೆರೆ ಹಿಡಿಯುವುದಾಗಿ ಜನರಿಗೆ ಭರವಸೆ ನೀಡಿದ್ದರು.
ಒಂದು ವಾರ ಬಿಟ್ಟು ಮತ್ತೆ ಬೇಟೆ ಮುಂದುವರಿಸಿದ ಹುಲಿಯು, ಕಳ್ನೆಯಲ್ಲಿ ಶನಿವಾರ ರಾತ್ರಿ ದನದ ಕೊಟ್ಟಿಗೆಗೇ ನುಗ್ಗಿತ್ತು. ಎರಡು ದನಗಳನ್ನು ಬಲಿ ಪಡೆಯುತ್ತಿದ್ದಂತೆ ಸಾರ್ವಜನಿಕರ ಆತಂಕ ಇಮ್ಮಡಿಯಾಗಿತ್ತು.
ಭಾನುವಾರವೇ ಕಾರ್ಯಾಚರಣೆ ತೀವ್ರಗೊಳಿಸಿದ ಅರಣ್ಯ ಇಲಾಖೆಯು, ಹುಲಿ ದಾಳಿಗೆ ಸತ್ತ ದನದ ಕೊಟ್ಟಿಗೆಯಲ್ಲಿ ಬೋನನ್ನು ಇಟ್ಟು ಕ್ಯಾಮೆರಾಗಳನ್ನು ಅಳವಡಿಸಿದ್ದರು. ಭಾನುವಾರ ರಾತ್ರಿ ಮತ್ತೆ ಬೇಟೆಯಾಡಲು ಬಂದ ಹುಲಿಯು ಬೋನಿನಲ್ಲಿ ಸೆರೆಯಾಯಿತು.
ಸೆರೆಯಾದ ಹುಲಿಗೆ ವಯಸ್ಸಾಗಿದ್ದು, ಅನಾರೋಗ್ಯ ಸಮಸ್ಯೆಯೂ ಇದೆ. ಅದಕ್ಕೆ ಹಂಪಿಯಲ್ಲಿ ಚಿಕಿತ್ಸೆ ನೀಡಿ, ಅಲ್ಲಿನ ಅಭಯಾರಣ್ಯಕ್ಕೆ ಬಿಡಲಾಗುವುದು.
– ಮರಿಯಾ ಕ್ರಿಸ್ತರಾಜು, ಕೆ.ಟಿ.ಆರ್. ನಿರ್ದೇಶಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.