ADVERTISEMENT

ಕನ್ನಡಿಗೆ ಉದ್ಯೋಗ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 16:34 IST
Last Updated 27 ಜೂನ್ 2019, 16:34 IST

ಶಿರಸಿ: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗ್ರಾಮೀಣ, ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡಿಗರಿಗೆ ಉದ್ಯೋಗ ಒದಗಿಸಬೇಕು. ಎಲ್ಲ ಶಾಖೆಗಳಲ್ಲಿಯೂ ಹೊರ ರಾಜ್ಯದವರ ಬದಲಾಗಿ ಕನ್ನಡಿಗರನ್ಣೇ ನೇಮಕ ಮಾಡಬೇಕು ಎಂದು 'ನಾವು ಕನ್ನಡಿಗರು' ಸಂಘಟನೆ ಹಾಗೂ ಕರ್ನಾಟಕ ರಣಧೀರ ಪಡೆ ಸ್ಥಳೀಯ ಘಟಕ ಆಗ್ರಹಿಸಿವೆ.

ಇವೆರಡೂ ಸಂಘಟನೆಗಳ ವಕ್ತಾರಾಗಿರುವ ಸುಶೀಲ್‌ಕುಮಾರ್ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕನ್ನಡಿಗನಿಗೆ ದುಡಿಮೆ ಕೊಡಿಸುವುದು ನಮ್ಮ ಸಂಘಟನೆಗಳ ಏಕೈಕ ಗುರಿಯಾಗಿದೆ. ಈಗಾಗಲೇ ಹೊರ ರಾಜ್ಯದವರನ್ನು ಬ್ಯಾಂಕ್ ಗಳಲ್ಲಿ ನೇಮಕ ಮಾಡುತ್ತಿರುವುದನ್ನು ವಿರೋಧಿಸಿ ಟ್ವಿಟರ್‌ನಲ್ಲಿ ಅಭಿಯಾನ, ಪ್ರಧಾನಿ, ಮುಖ್ಯಮಂತ್ರಿ, ಆರ್‌ಬಿಐಗೆ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿಯಿಂದ ಉತ್ತರ ಬಂದಿದ್ದರೂ, ಅದರಲ್ಲಿ ಸ್ಪಷ್ಟತೆಯಿಲ್ಲ. ಹೀಗಾಗಿ ನಾವೇ ಎಲ್ಲ ಬ್ಯಾಂಕ್‌ಗಳಿಗೆ ಭೇಟಿ ನೀಡಿ, ಕನ್ನಡಿಗರಿಗೆ ಪ್ರಾಮುಖ್ಯತೆ ನೀಡುವಂತೆ ಹೇಳುತ್ತಿದ್ದೇವೆ’ ಎಂದರು.

ಬ್ಯಾಂಕ್‌ಗಳಲ್ಲಿ ಹಿಂದಿ ಭಾಷಿಕರು ಇರುವ ಕಾರಣ ಸಾರ್ವಜನಿಕರಿಗೆ ವ್ಯವಹರಿಸಲು ಸಮಸ್ಯೆಯಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಸಿದ್ದಾಪುರದ ಸಿಂಡಿಕೇಟ್ ಬ್ಯಾಂಕಿಗೆ ಮನವಿ ನೀಡಲು ಹೋದ ಸಂದರ್ಭದಲ್ಲಿ ‘ಹಿಂದಿಯಲ್ಲಿ ಮಾತನಾಡದಿದ್ದರೆ ಹೊರ ಹೋಗಿ’ ಎಂದು ಬ್ಯಾಂಕ್ ಸಿಬ್ಬಂದಿ ಅವಮಾನಿಸಿದ್ದಾರೆ. ರಾಜ್ಯದಾದ್ಯಂತ ಈ ಅಭಿಯಾನ ನಡೆಸಲಾಗುತ್ತಿದೆ. ಸಾರ್ವಜನಿಕರು ಸಕ್ರಿಯವಾಗಿ ಅಭಿಯಾನದಲ್ಲಿ ಭಾಗವಹಿಸಬಹುದು ಎಂದು ಹೇಳಿದರು.

ADVERTISEMENT

ಬ್ಯಾಂಕ್‌ಗಳ ಗುಮಾಸ್ತ ಹುದ್ದೆ ನೇಮಕಕ್ಕೆ ಅಖಿಲ ಭಾರತ ಮಟ್ಟದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ. ಪ್ರಾದೇಶಿಕ ಮಟ್ಟದಲ್ಲಿ ಪರೀಕ್ಷೆ ನಡೆದು, ನೇಮಕಾತಿ ಆಗಬೇಕು ಎಂದು ಸಂಘಟನೆಯ ಅಧ್ಯಕ್ಷ ಗಣೇಶ ಭಟ್ಟ ಉಪ್ಪೋಣಿ ಹೇಳಿದರು. ಪ್ರಮುಖರಾದ ಕೇಶವ ನಾಯ್ಕ, ಮಹೇಶ ನಾಯ್ಕ, ಸಚಿನ್ ಕೋಡ್ಕಣಿ, ರಿತೇಶ್ ರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.