ADVERTISEMENT

ಕಾರವಾರ: ಕೇಂದ್ರ ಬಸ್ ನಿಲ್ದಾಣದಲ್ಲಿ ಗೋವಾ ಖಾಸಗಿ ಬಸ್

ಸಾರಿಗೆ ಸಂಸ್ಥೆಯ ಆದಾಯಕ್ಕೆ ಕುತ್ತು: ಪ್ರಯಾಣಿಕರ ಆಕ್ಷೇಪ‌

ಗಣಪತಿ ಹೆಗಡೆ
Published 15 ನವೆಂಬರ್ 2024, 4:45 IST
Last Updated 15 ನವೆಂಬರ್ 2024, 4:45 IST
ಕಾರವಾರದ ಬಸ್ ನಿಲ್ದಾಣದಲ್ಲಿ ಗೋವಾ ರಾಜ್ಯದ ಖಾಸಗಿ ಬಸ್ ನಿಂತಿರುವುದು
ಕಾರವಾರದ ಬಸ್ ನಿಲ್ದಾಣದಲ್ಲಿ ಗೋವಾ ರಾಜ್ಯದ ಖಾಸಗಿ ಬಸ್ ನಿಂತಿರುವುದು   

ಕಾರವಾರ: ಇಲ್ಲಿನ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದೊಳಗೆ ನಿತ್ಯ ಗೋವಾ ರಾಜ್ಯದ ಖಾಸಗಿ ಬಸ್ ನಿಲುಗಡೆಯಾಗುತ್ತಿದೆ. ಇದಕ್ಕೆ ಹಲವು ಪ್ರಯಾಣಿಕರಿಂದ ಆಕ್ಷೇಪವೂ ವ್ಯಕ್ತವಾಗಿದೆ.

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ, ಖಾಸಗಿ ಬಸ್‍ಗಳಿಗೆ ನಿಲ್ದಾಣದೊಳಗೆ ಖಾಸಗಿ ಬಸ್ ನಿಲುಗಡೆಗೆ ಅವಕಾಶ ನೀಡಿ ನಷ್ಟಕ್ಕೆ ದಾರಿ ಮಾಡಿಕೊಳ್ಳುತ್ತಿದೆ ಎಂಬುದಾಗಿ ಪ್ರಯಾಣಿಕರು ದೂರುತ್ತಿದ್ದಾರೆ.

ಜಿಲ್ಲಾಕೇಂದ್ರವಾಗಿರುವ ಕಾರವಾರದಿಂದ ಪ್ರತಿನಿತ್ಯ ನಸುಕಿನ ಜಾವ ಗೋವಾದ ಕೆಲ ಖಾಸಗಿ ಬಸ್‍ಗಳು ಕಾಣಕೋಣ, ಮಡಗಾಂವಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಇದೇ ಸಮಯಕ್ಕೆ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳು ಸಂಚರಿಸುತ್ತಿವೆ. ಸಾರಿಗೆ ಸಂಸ್ಥೆಯ ಬಸ್‍ ಸಂಚರಿಸುವ ಮುನ್ನ ನಿಲ್ದಾಣದೊಳಕ್ಕೆ ಖಾಸಗಿ ಬಸ್‍ಗಳು ಪ್ರವೇಶಿಸಿ ಪ್ರಯಾಣಿಕರನ್ನು ಕರೆದೊಯ್ಯುವ ಕೆಲಸ ಮಾಡುತ್ತಿದೆ. ಈ ಮೂಲಕ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಆದಾಯಕ್ಕೆ ಕುತ್ತು ತರುತ್ತಿವೆ ಎಂಬುದಾಗಿ ಹಲವು ಪ್ರಯಾಣಿಕರು ದೂರುತ್ತಿದ್ದಾರೆ.

ADVERTISEMENT

‘ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸಾರಿಗೆ ಸಂಸ್ಥೆಯಲ್ಲಿ ಉಚಿತವಾಗಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಸಂಸ್ಥೆಯ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂಬುದಾಗಿ ಅಧಿಕಾರಿಗಳೇ ಹೇಳಿಕೊಳ್ಳುತ್ತಿದ್ದಾರೆ. ಅಂತರ್ ರಾಜ್ಯ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲದ ಕಾರಣ ಗೋವಾಕ್ಕೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್‍ಗಳಿಗೆ ಹೆಚ್ಚು ಪ್ರಯಾಣಿಕರನ್ನು ಸೆಳೆಯಲು ಅವಕಾಶವಿದೆ. ನಿತ್ಯ ನಸುಕಿನ ಜಾವ ಇಲ್ಲಿಂದ ಗೋವಾಕ್ಕೆ ಉದ್ಯೋಗ ನಿಮಿತ್ತ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಈ ಮೂಲಕ ಆದಾಯ ವೃದ್ಧಿಗೆ ಅನುಕೂಲವಾಗುತ್ತದೆ. ಆದರೆ, ಖಾಸಗಿ ಬಸ್‍ಗಳಿಗೆ ಲಾಭ ಮಾಡಿಕೊಡುವ ಪ್ರಯತ್ನ ನಡೆದಂತಿದೆ’ ಎಂದು ಪ್ರಯಾಣಿಕರೊಬ್ಬರು ಆರೋಪಿಸಿದರು.

‘ಗೋವಾದ ಮಡಗಾಂವದಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲೇ ಕದಂಬ ಬಸ್‍ಗಳು (ಗೋವಾ ರಾಜ್ಯದ ಸಾರಿಗೆ ಸಂಸ್ಥೆ), ರಾಜ್ಯದ ಸಾರಿಗೆ ಸಂಸ್ಥೆ ಬಸ್ ನಿಲುಗಡೆಯಾಗುತ್ತವೆ. ಅದೇ ಆಧಾರದಲ್ಲಿ ಅಲ್ಲಿನ ಕೆಲವು ಖಾಸಗಿ ಬಸ್‍ಗಳು ನಿಲ್ದಾಣದ ಒಳಗೆ ಬಂದು ನಿಲ್ಲುತ್ತವೆ. ಬಸ್ ನಿಲುಗಡೆ ಮಾಡದಂತೆ ನಾವು ಸೂಚಿಸಲು ಹೋದರೆ ಕರ್ನಾಟಕ ಸಾರಿಗೆ ನಿಗಮದಿಂದ ಪರವಾನಗಿ ಇದೆ ಎಂದು ಖಾಸಗಿ ಬಸ್ ಚಾಲಕರು ಹೇಳುತ್ತಾರೆ’ ಎಂದು ಸಾರಿಗೆ ಸಂಸ್ಥೆಯ ಸಿಬ್ಬಂದಿ ಹೇಳಿದರು.‌‌

ಗೋವಾದ ಕೆಲ ಖಾಸಗಿ ಬಸ್‍ಗಳು ಬಸ್ ನಿಲ್ದಾಣದಲ್ಲಿ ನಸುಕಿನ ಜಾವ ನಿಲುಗಡೆಯಾಗಲು ಸಾರಿಗೆ ನಿಗಮದಿಂದ ಬಹಳ ವರ್ಷ ಹಿಂದೆಯೇ ಒಪ್ಪಿಗೆ ಪಡೆದಿದ್ದಾಗಿ ಹೇಳುತ್ತಾರೆ. ಈ ಬಗ್ಗೆ ಇನ್ನೊಮ್ಮೆ ಪರಿಶೀಲಿಸಿ ಕ್ರಮವಹಿಸುತ್ತೇವೆ.
–ಸೌಮ್ಯ ನಾಯಕ, ಕಾರವಾರ ಸಾರಿಗೆ ಘಟಕದ ವ್ಯವಸ್ಥಾಪಕಿ
ಖಾಸಗಿ ವಾಹನಗಳು ನಿಲ್ದಾಣದೊಳಗೆ ಪ್ರವೇಶಿಸಿದರೆ ದಂಡ ವಿಧಿಸಲಾಗುತ್ತದೆ. ಅಂಥದ್ದರಲ್ಲಿ ನೆರೆ ರಾಜ್ಯದ ಖಾಸಗಿ ಬಸ್‍ಗಳಿಗೆ ನಿಲ್ದಾಣದೊಳಗೆ ನಿಲುಗಡೆಗೆ ಅವಕಾಶ ನೀಡುವುದು ತಪ್ಪು. ಇದರ ವಿರುದ್ಧ ಹೋರಾಟ ನಡೆಸಲಾಗುತ್ತದೆ.
–ನರೇಂದ್ರ ತಳೇಕರ, ಕರವೇ (ಟಿ.ನಾರಾಯಣ ಗೌಡ ಬಣ) ತಾಲ್ಲೂಕು ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.