ADVERTISEMENT

ಕಾರವಾರ | 2 ವರ್ಷ ಕಳೆದರೂ ಪೂರ್ಣಗೊಳ್ಳದ ಗೋಶಾಲೆ ಕಾಮಗಾರಿ: ದನಗಳಿಗೆ ರಸ್ತೆಯೇ ಗತಿ

ಗಣಪತಿ ಹೆಗಡೆ
Published 14 ಸೆಪ್ಟೆಂಬರ್ 2024, 6:09 IST
Last Updated 14 ಸೆಪ್ಟೆಂಬರ್ 2024, 6:09 IST
ಕಾರವಾರ ತಾಲ್ಲೂಕಿನ ಕಣಸಗಿರಿಯಲ್ಲಿ ಗೋಶಾಲೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ
ಕಾರವಾರ ತಾಲ್ಲೂಕಿನ ಕಣಸಗಿರಿಯಲ್ಲಿ ಗೋಶಾಲೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ   

ಕಾರವಾರ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಐದು ಗೋಶಾಲೆಗಳ ಪೈಕಿ ಕೇವಲ ಒಂದು ಮಾತ್ರ ಪೂರ್ಣಗೊಂಡಿದೆ. ಉಳಿದ ನಾಲ್ಕು ಗೋಶಾಲೆ ಸ್ಥಾಪನೆ ಯೋಜನೆ ನನೆಗುದಿಗೆ ಬಿದ್ದಿದೆ.

ಬಿಡಾಡಿ ಗೋವುಗಳನ್ನು ಅಪಘಾತ, ಗೋವು ಕಳ್ಳರಿಂದ ರಕ್ಷಿಸುವ ಸಲುವಾಗಿ ಗೋ ಶಾಲೆಗಳನ್ನು ಸ್ಥಾಪಿಸಲು 2021ರಲ್ಲಿ ಯೋಜನೆ ರೂಪಿಸಲಾಗಿತ್ತು. ಪ್ರತಿ ಜಿಲ್ಲೆಗೆ ಒಂದು ಗೋಶಾಲೆ ಸ್ಥಾಪಿಸಲು ಮೊದಲ ಹಂತದಲ್ಲಿ ಯೋಜನೆ ಕಾರ್ಯರೂಪಕ್ಕೆ ತರಲಾಗಿತ್ತು. ಹಳಿಯಾಳದಲ್ಲಿ ಜಿಲ್ಲೆಯ ಮೊದಲ ಸರ್ಕಾರಿ ಗೋಶಾಲೆ ಸ್ಥಾಪನೆಗೊಂಡಿದೆ.‌

2022–23ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದು ಗೋಶಾಲೆ ಸ್ಥಾಪಿಸಲು ಮುಂದಾಗಿದ್ದ ಸರ್ಕಾರ ಜಿಲ್ಲೆಗೆ ಹೆಚ್ಚುವರಿಯಾಗಿ ನಾಲ್ಕು ಗೋಶಾಲೆಗಳನ್ನು ಮಂಜೂರು ಮಾಡಿತ್ತು. ಕಾರವಾರ, ಶಿರಸಿ, ಭಟ್ಕಳ ಮತ್ತು ಮುಂಡಗೋಡಕ್ಕೆ ಗೋಶಾಲೆ ಮಂಜೂರಾಗಿದ್ದವು.

ADVERTISEMENT

ಶಿರಸಿ ತಾಲ್ಲೂಕಿನ ಅಜ್ಜೀಬಳ ಗ್ರಾಮದಲ್ಲಿ ಗೋಶಾಲೆ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದರೂ, ನಿರ್ವಹಣೆಗೆ ಅನುದಾನ ಬಿಡುಗಡೆಯಾಗದ ಕಾರಣಕ್ಕೆ ಕಾರ್ಯಾರಂಭ ಮಾಡಿಲ್ಲ. ಕಾರವಾರ ತಾಲ್ಲೂಕಿನ ಕಣಸಗಿರಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ಸ್ಥಾಪನೆಗೊಳ್ಳುತ್ತಿದ್ದ ಗೋಶಾಲೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಭಟ್ಕಳ ಮತ್ತು ಮುಂಡಗೋಡದಲ್ಲಿ ಜಾಗ ಲಭ್ಯತೆ ಇಲ್ಲದ ಕಾರಣಕ್ಕೆ ಕಾಮಗಾರಿ ಎರಡು ವರ್ಷವಾದರೂ ಆರಂಭಗೊಂಡಿಲ್ಲ.

‘ದಿನದಿಂದ ದಿನಕ್ಕೆ ಬಿಡಾಡಿ ದನಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೆದ್ದಾರಿಗಳ ಮೇಲೆ ಆಶ್ರಯ ಪಡೆಯುತ್ತಿರುವ ದನಗಳು ಅಪಘತಗೊಂಡು ಮೃತಪಡುತ್ತಿರುವ ಘಟನೆ ಹೆಚ್ಚುತ್ತಿದೆ. ಅಲ್ಲದೇ ಇವುಗಳಿಂದ ವಾಹನ ಸವಾರರು ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಗೋವುಗಳನ್ನು ಅಪಹರಿಸುವ, ಅಕ್ರಮವಾಗಿ ಸಾಗಣೆ ಮಾಡುವವರಿಗೆ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿ ಅನುಕೂಲವಾಗಿದೆ. ಇವೆಲ್ಲದರಿಂದ ಗೋ ಸಂಪತ್ತು ಕಡಿಮೆಯಾಗುತ್ತಿದ್ದು, ಗೋಶಾಲೆ ಸ್ಥಾಪಿಸಿದ್ದರೆ ಅವುಗಳಿಗೆ ಕಡಿವಾಣ ಹಾಕಬಹುದಿತ್ತು’ ಎನ್ನುತ್ತಾರೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ.

ಕಾರವಾರ ತಾಲ್ಲೂಕಿನ ಕಣಸಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಗೋಶಾಲೆಯ ಆಹಾರ ದಾಸ್ತಾನು ಕೇಂದ್ರದ ಕಾಮಗಾರಿ ಅರ್ಧಕ್ಕೆ ನಿಂತಿದೆ
ಕಾರವಾರ ಶಿರಸಿಯಲ್ಲಿ ಗೋಶಾಲೆಗಳ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು ನಿರ್ವಹಣೆ ಅನುದಾನಕ್ಕೆ ಕಾಯಲಾಗುತ್ತಿದೆ. ಅನುದಾನ ಲಭಿಸಿದ ತಕ್ಷಣ ಕಾರ್ಯಾರಂಭಿಸಲಾಗುತ್ತದೆ
ಡಾ.ಮೋಹನ ಕುಮಾರ್ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ
ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಬಳಿಕ ಗೋಶಾಲೆ ಸ್ಥಾಪಿಸಿ ಗೋವುಗಳನ್ನು ರಕ್ಷಿಸಲು ಮುಂದಾಗಿದ್ದ ಹಿಂದಿನ ಬಿಜೆಪಿ ಸರ್ಕಾರದ ಯೋಜನೆಯನ್ನು ಮುಂದುವರೆಸಲು ಈಗಿನ ರಾಜ್ಯ ಸರ್ಕಾರಕ್ಕೆ ಇಚ್ಚಾಶಕ್ತಿ ಇದ್ದಂತಿಲ್ಲ
ರೂಪಾಲಿ ನಾಯ್ಕ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ
ನಿರ್ವಹಣೆಗೂ ಅಲ್ಪ ಅನುದಾನ
‘ಹಳಿಯಾಳದ ಸರ್ಕಾರಿ ಗೋಶಾಲೆಯಲ್ಲಿ ಸದ್ಯ 96 ಗೋವುಗಳ ಪಾಲನೆ ಮಾಡಲಾಗುತ್ತಿದೆ. ಪ್ರತಿ ಗೋವುಗಳ ನಿರ್ವಹಣೆಗೆ ದಿನಕ್ಕೆ ₹70 ವೆಚ್ಚವನ್ನು ಸರ್ಕಾರ ನೀಡುತ್ತಿದೆ. ಅಪಘಾತಗೊಂಡಿದ್ದ ಪೊಲೀಸರು ವಶಕ್ಕೆ ಪಡೆದು ತಂದ ಗೋವುಗಳನ್ನು ಇಲ್ಲಿ ಸಾಕಲಾಗುತ್ತಿದೆ. ಖಾಸಗಿ ಗೋಶಾಲೆಗಳಿಂದ ಅರ್ಜಿ ಬಂದರೆ ಅವರಿಗೂ ನಿರ್ವಹಣೆಗೆ ನಿಯಮದ ಪ್ರಕಾರ ಅನುದಾನ ನೀಡಲಾಗುತ್ತದೆ’ ಎನ್ನುತ್ತಾರೆ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಮೋಹನ ಕುಮಾರ್. ‘ಖಾಸಗಿ ಗೋಶಾಲೆಗಳಿಗೆ ಪ್ರತಿ ಗೋವಿಗೆ ದಿನಕ್ಕೆ ₹17.50 ಮೊತ್ತವನ್ನು ನಿರ್ವಹಣೆ ಸಲುವಾಗಿ ಸರ್ಕಾರ ನೀಡುತ್ತಿದೆ. ಈ ಮೊತ್ತದಲ್ಲಿ ಮುಷ್ಟಿಯಷ್ಟು ಪಶು ಆಹಾರ ಖರೀದಿಸಲೂ ಸಾಧ್ಯವಾಗದು’ ಎಂದು ಗೋಶಾಲೆಯ ಮುಖ್ಯಸ್ಥರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.