ADVERTISEMENT

ಮುಂಡಗೋಡ: ದಸರಾ ‘ಗಾಂಭೀರ್ಯ’ ಸಾರುವ ಗಜಕುಣಿತ

ಕಲೆ, ಸಂಪ್ರದಾಯ ಜೀವಂತವಿರಿಸಿಕೊಂಡಿರುವ ದನಗರ ಗೌಳಿಗರು

​ಶಾಂತೇಶ ಬೆನಕನಕೊಪ್ಪ
Published 6 ಅಕ್ಟೋಬರ್ 2024, 4:33 IST
Last Updated 6 ಅಕ್ಟೋಬರ್ 2024, 4:33 IST
ದಸರಾ ಅಂಗವಾಗಿ ಗಜಕುಣಿತದಲ್ಲಿ ನಿರತರಾಗಿರುವ ದನಗರ ಗೌಳಿ ಸಮುದಾಯದ ಯುವಕರು (ಸಂಗ್ರಹ ಚಿತ್ರ)
ದಸರಾ ಅಂಗವಾಗಿ ಗಜಕುಣಿತದಲ್ಲಿ ನಿರತರಾಗಿರುವ ದನಗರ ಗೌಳಿ ಸಮುದಾಯದ ಯುವಕರು (ಸಂಗ್ರಹ ಚಿತ್ರ)   

ಮುಂಡಗೋಡ: ದಶಕಗಳಿಂದ ಕಾನನದ ಮಧ್ಯೆ ನೆಲೆ ಕಟ್ಟಿಕೊಂಡಿರುವ, ಹೈನುಗಾರಿಕೆಯನ್ನೇ ಮೂಲ ಕಸಬುನ್ನಾಗಿಸಿಕೊಂಡ ದನಗರ ಗೌಳಿ ಜನಾಂಗದವರ ದಸರಾ ಆಚರಣೆ ವಿಶೇಷವಾಗಿದೆ.

ತಲೆಗೆ ಬಿಳಿ ಪಗೋಡ (ಪೇಟ) ಸುತ್ತಿಕೊಂಡು, ಉದ್ದನೆಯ ಮೀಸೆಯನ್ನು ತುಸು ತಿರುವಿಕೊಂಡು, ಮರಾಠಿ ಮಿಶ್ರಿತ ಕನ್ನಡ ಮಾತನಾಡುವ ಗೌಳಿ ಜನಾಂಗದ ಜನರು ಪಟ್ಟಣವಾಸಿಗಳಿಗೆ ಹಾಲು ಮಾರುತ್ತ ಜೀವನ ಕಟ್ಟಿಕೊಂಡವರು. ಕಳಿಕಿಕಾರೆ, ಮೈನಳ್ಳಿ, ಬಡ್ಡಿಗೇರಿ, ಬ್ಯಾನಳ್ಳಿ, ಗೋದ್ನಾಳ, ಜೇನಮುರಿ, ಸಿರಿಗೇರಿ, ನ್ಯಾಸರ್ಗಿ, ಉಗ್ಗಿನಕೇರಿ ಇನ್ನಿತರ ಕಡೆ ದನಗರ ಗೌಳಿ ಸಮುದಾಯದವರು ವಾಸಿಸುತ್ತಿದ್ದಾರೆ.

ಘಟಸ್ಥಾಪನೆ, ಜಾಗರಣೆ, ಮನೆಯ ಅಂಗಳದಲ್ಲಿ ಗಜಕುಣಿತ, ಸೀಮೋಲ್ಲಂಘನ, ಶಿಲ್ಲೆಂಗಾನ್ ಇವು ಗೌಳಿಗ ಸಮುದಾಯದವರ ದಸರಾ ಆಚರಣೆಯಲ್ಲಿ ಕಂಡುಬರುವ ಪ್ರಮುಖ ಹಂತಗಳಾಗಿವೆ. ಸಮುದಾಯದ ಒಳಪಂಗಡಗಳಾದ ಕೊಕರೆ, ಎಡಗೆ, ತೊರತ್, ಧೂಯಿಪಡೆ, ವರಕ್, ಶಳಕೆ, ಶಿಂಧೆ ಸೇರಿದಂತೆ ಎಲ್ಲರೂ ಒಂದಾಗಿ ದಸರಾ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ.

ADVERTISEMENT

ದಸರಾ ಆರಂಭದ ದಿನದಂದು ಘಟಸ್ಥಾಪನೆ ಮಾಡಿದ ನಂತರ, ಗೌಳಿವಾಡಾದ ಎಡಗೆ ಮನೆತನದವರ ಮನೆಯಲ್ಲಿ ಗಜಕುಣಿತ ಸದಸ್ಯರು ಪಾಲ್ಗೊಂಡು, ನಿತ್ಯವೂ ಗಜಕುಣಿತ ಮಾಡುತ್ತಾರೆ. ಜಗಾ ಎಂದು ಕರೆಯುವ ವಿಶಿಷ್ಟ ಧಿರಿಸು ಧರಿಸಿಕೊಂಡು, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಗಜಕುಣಿತದ ವಿಶೇಷ.

‘ಪ್ರತಿ ಮನೆಯಲ್ಲಿ ಅನ್ನ, ಹಾಲು, ತುಪ್ಪ ಹಾಗೂ ಬೆಲ್ಲದಿಂದ ಮಾಡಿರುವ ವಿಶೇಷ ಖಾದ್ಯವನ್ನು ಗಜತಂಡದ ಸದಸ್ಯರು ಸಹಪಂಕ್ತಿ ಭೋಜನ ಮಾಡುತ್ತಾರೆ. ಇದಾದ ನಂತರ ಗೌಳಿವಾಡಾದ ಅಂಗಳದಲ್ಲಿ ಪ್ರತಿ ಕುಟುಂಬದ ಮಹಿಳೆಯರು ಮಜ್ಜಿಗೆ ತುಂಬಿರುವ ಮಡಕೆಯನ್ನು ತಂದು ಇಡುತ್ತಾರೆ. ಗಜಕುಣಿತದ ತಂಡಗಳು ಅಲ್ಲಿ ಗಂಟೆಗಟ್ಟಲೇ ನೃತ್ಯವನ್ನು ಮಾಡುತ್ತಾರೆ’ ಎಂದು ಗೌಳಿಗ ಸಮುದಾಯದ ಯುವಮುಖಂಡ ಸಂತೋಷ ವರಕ್‌ ವಿವರಿಸಿದರು.

ಸಂತೆಯಲ್ಲೇ ಆಮಂತ್ರಣ

‘ಏಕಾದಶಿ ದಿನದಂದು ನಿಗದಿಪಡಿಸಿರುವ ಗೌಳಿವಾಡಾದಲ್ಲಿ ಶಿಲ್ಲೆಂಗಾನ್‌ ಆಯೋಜಿಸಲಾಗಿರುತ್ತದೆ. ತಮ್ಮೂರಿನ ಹಬ್ಬಕ್ಕೆ ಬರುವಂತೆ ವಾರದ ಸಂತೆಯಲ್ಲಿ ಶಿಲ್ಲೆಂಗಾನ್‌ ನಡೆಯುವ ಊರಿನ ವ್ಯಕ್ತಿಯು ವೀಳ್ಯದೆಲೆ ಆಮಂತ್ರಣ ನೀಡುತ್ತಾರೆ. ಆಮಂತ್ರಣ ಸ್ವೀಕರಿಸಿದ ವ್ಯಕ್ತಿಯು ತನ್ನ ಗೌಳಿವಾಡಾದ ಇತರರಿಗೆ ಆಮಂತ್ರಣದ ಕುರಿತು ಮಾಹಿತಿ ಹಂಚಿಕೊಳ್ಳುತ್ತಾನೆ. ಆಗ ಆ ಗೌಳಿವಾಡಾದ ಎಲ್ಲ ಸದಸ್ಯರೂ ಶಿಲ್ಲೆಂಗಾನ್‌ ನಡೆಯುವ ಗೌಳಿವಾಡಾದತ್ತ ಪಯಣ ಬೆಳೆಸುವುದು ಸಂಪ್ರದಾಯವಾಗಿದೆ. ಬ್ರಾಹ್ಮಿ ಮುಹೂರ್ತದಲ್ಲಿ ಬರುವ ಗಜಕುಣಿತ ತಂಡಗಳನ್ನು ಗೌಳಿವಾಡಾದಲ್ಲಿ ಅರತಿ ಮಾಡಿ ಸ್ವಾಗತಿಸಲಾಗುತ್ತದೆ. ಮಜ್ಜಿಗೆ ತುಂಬಿರುವ ಮಡಿಕೆಯಲ್ಲಿ ಕಾಯಿ ಇಟ್ಟುಕೊಂಡು ಮಕ್ಕಳು ಮಹಿಳೆಯರು ಶಿಲ್ಲೆಂಗಾನ್‌ ನಡೆಯುವ ಗೌಳಿವಾಡಾಕ್ಕೆ ಹೋಗುತ್ತಾರೆ. ಬೆಳಗಿನ ಜಾವದವರೆಗೂ ಗಜಕುಣಿತ ತಂಡಗಳು ಬರುತ್ತವೆ’ ಎನ್ನುತ್ತಾರೆ ಕಳಿಕಿಕಾರೆ ಗ್ರಾಮದ ಜಾನು ಎಡಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.