ಕಾರವಾರ: ‘ಇತ್ತೀಚಿಗೆ ಸಮುದ್ರ ಹೆಚ್ಚು ಕಲುಷಿತವಾಗುತ್ತಿದೆ. ಪ್ಲಾಸ್ಟಿಕ್‌ನಂಥ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಇದರಿಂದ ಜಲಚರಗಳಿಗೆ ಹಾನಿಯಾಗಿ ಪರಿಸರ ಸಮತೋಲನ ತಪ್ಪುತ್ತಿದೆ. ಈ ಆತಂಕವನ್ನು ದೂರ ಮಾಡಬೇಕು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಕರೆ ನೀಡಿದರು.
‘ಅಂತರರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆ’ ಅಂಗವಾಗಿ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕರಾವಳಿಯ ಬಹುತೇಕ ಜನರ ಆದಾಯವು ಮೀನುಗಾರಿಕೆಯ ಮೇಲೆ ಅವಲಂಬಿತವಾಗಿದೆ. ಕಡಲು ಮಲಿನವಾದರೆ ಆರ್ಥಿಕ ಚಟುವಟಿಕೆಗಳ, ಜೀವನೋಪಾಯ ಕಾರ್ಯಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಸ್ವಚ್ಛತೆಯು ಪ್ರತಿ ಮನೆಯಿಂದ ಆರಂಭವಾಗಬೇಕು’ ಎಂದು ಹೇಳಿದರು.
‘ನಾಲೆಗಳು, ನದಿಗಳನ್ನು ಸ್ವಚ್ಛವಾಗಿಡಬೇಕು. ಇದರಿಂದ ಸಮುದ್ರದ ಮಾಲಿನ್ಯವು ಅರ್ಧಕರ್ಧ ಕಡಿಮೆಯಾಗಲಿದೆ. ಇದೊಂದು ದೊಡ್ಡ ಕರ್ತವ್ಯವಾಗಿದ್ದು, ನೆರೆಹೊರೆಯವರನ್ನೂ ಭಾಗವಹಿಸಲು ಪ್ರೇರೇಪಿಸಬೇಕು. ಸ್ವಚ್ಛವಾಗಿರುವ ದೇಶದಲ್ಲಿ ಜೀವಿಸಿದಾಗ ನಿರೋಗಿಗಳಾಗುತ್ತೇವೆ. ಆರ್ಥಿಕ ನೆಮ್ಮದಿ, ಮಾನಸಿಕ ಹಾಗೂ ದೈಹಿಕ ಆರೋಗ್ಯ ಪ್ರಾಪ್ತವಾಗುತ್ತದೆ’ ಎಂದರು.
‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ದೇಶದಾದ್ಯಂತ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ನೈರ್ಮಲ್ಯದ ಬಗ್ಗೆ ಜನ ಹೆಚ್ಚು ಗಮನ ಹರಿಸಿದ್ದು, ವಿವಿಧ ರೋಗಗಳು ಕಡಿಮೆಯಾಗಿವೆ. ಈ ರೀತಿಯ ಅಭಿಯಾನಗಳು ದಿನವೂ ನಡೆಯಲಿ’ ಎಂದು ಆಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಜಿಲ್ಲೆಯ ಕರಾವಳಿಯಲ್ಲಿ ಪ್ರವಾಸೋದ್ಯಮ, ಮೀನುಗಾರಿಕೆ ಅಭಿವೃದ್ಧಿ ಮಾಡಬೇಕು. ಇದಕ್ಕೆ ಪೂರಕವಾಗಿ ಕಡಲತೀರಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದೂ ಮುಖ್ಯ’ ಎಂದರು.
ಶಾಸಕಿ ರೂಪಾಲಿ ನಾಯ್ಕ, ‘ಸಮುದ್ರಕ್ಕೆ ಕಸ ಎಸೆಯುವುದನ್ನು ನಿಲ್ಲಿಸಬೇಕು. ಮನೆಗಳಿಂದ ವಿವಿಧ ತ್ಯಾಜ್ಯಗಳನ್ನು ಪ್ರತ್ಯೇಕಿಸಿಯೇ ನಗರಸಭೆಯ ಕಸ ವಿಲೇವಾರಿ ವಾಹನಗಳಿಗೆ ಕೊಡಬೇಕು’ ಎಂದು ಹೇಳಿದರು.
ಭಾರತೀಯ ನೌಕಾಪಡೆಯ ಕರ್ನಾಟಕದ ವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಮಾತನಾಡಿ, ‘ನೌಕಾಪಡೆಯು ಸಮುದ್ರದ ಸ್ವಚ್ಛತೆಯಲ್ಲಿ ತನ್ನದೇ ರೀತಿಯಲ್ಲಿ ಕೈ ಜೋಡಿಸಿದೆ. ಸಮುದ್ರ ತೀರಗಳ ಭದ್ರತೆಯ ವಿಚಾರದಲ್ಲಿ ಮೀನುಗಾರರ ಸಹಕಾರ ಅಗತ್ಯ’ ಎಂದರು.
ಪರ್ಯಾವರಣ ಸಂರಕ್ಷಣೆ ಗತಿವಿಧಿ ಸಂಘಟನೆಯ ಸಂಚಾಲಕ ಜಯರಾಮ ಬೊಳ್ಳಾಜೆ ಮಾತನಾಡಿದರು. ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸತತ ಏಳು ವರ್ಷಗಳಿಂದ ಸ್ವಚ್ಛತಾ ಶ್ರಮದಾನದಲ್ಲಿ ತೊಡಗಿರುವ ಪಹರೆ ವೇದಿಕೆಯ ಪದಾಧಿಕಾರಿಗಳಿಗೆ ರಾಜ್ಯಪಾಲರು ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ಪ್ರದಾನ ಮಾಡಿದರು.
ಕಡಲತೀರ ಸ್ವಚ್ಛತಾ ಅಭಿಯಾನದಲ್ಲಿ ಅತಿ ಹೆಚ್ಚು ಕಸ ಸಂಗ್ರಹಿಸಿದ ವೆಂಕಟಾಪುರ ತಂಡ, ಶರಾವತಿ ತಂಡ ಹಾಗೂ ಸದಾನಂದ ಸಾಳೇಕರ್ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ವಾಗತಿಸಿದರು. ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಜಿ.ವಿ.ಎಂ ಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕೆ.ಸಿ ವೇದಿಕೆಯಲ್ಲಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ ವಂದಿಸಿದರು.
ಸಾಂಕೇತಿಕ ಚಾಲನೆ:
ಕಡಲತೀರ ಸ್ವಚ್ಛತಾ ದಿನಾಚರಣೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಟ್ಯಾಗೋರ್ ಕಡಲತೀರದಲ್ಲಿ ಶನಿವಾರ ಬೆಳಿಗ್ಗೆ 7.30ಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಸಮುದ್ರ ಪೂಜೆ ನೆರವೇರಿಸಿ, ಕಸ ಹೆಕ್ಕಿದ ಬಳಿಕ ಸಸಿಯೊಂದನ್ನು ನೆಟ್ಟರು. ಸಂಘ ಸಂಸ್ಥೆಗಳಿಗೆ ವಿವಿಧ ಸ್ವಚ್ಛತಾ ಪರಿಕರಗಳನ್ನು ಇದೇವೇಳೆ ಹಸ್ತಾಂತರಿಸಿದರು.
ಏಕಕಾಲಕ್ಕೆ ಸುಮಾರು 5 ಸಾವಿರ ಮಂದಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದ್ದರು. ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ನೌಕಾಪಡೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.