ADVERTISEMENT

ಕಾರವಾರ | ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪದವೀಧರರು: ಇಳಿಕೆಯಾಗದ ಪೈಪೋಟಿ

ಗಣಪತಿ ಹೆಗಡೆ
Published 9 ನವೆಂಬರ್ 2024, 5:14 IST
Last Updated 9 ನವೆಂಬರ್ 2024, 5:14 IST
<div class="paragraphs"><p> ಅಂಗನವಾಡಿ ಕಾರ್ಯಕರ್ತೆಯರು  </p></div>

ಅಂಗನವಾಡಿ ಕಾರ್ಯಕರ್ತೆಯರು

   

–ಪ್ರಜಾವಾಣಿ ಚಿತ್ರ

ಕಾರವಾರ: ಎರಡು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಕನಿಷ್ಠ ವಿದ್ಯಾರ್ಹತೆ ಮಾನದಂಡ ಏರಿಸಿದ ಬಳಿಕವೂ ಜಿಲ್ಲೆಯಲ್ಲಿ ಹುದ್ದೆ ಪಡೆಯಲು ಪೈಪೋಟಿ ಇಳಿಕೆಯಾಗಿಲ್ಲ. ವಿಶೇಷ ಎಂದರೆ, ದ್ವಿತೀಯ ಪಿಯುಸಿ ಪೂರೈಸುವುದು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆ ಆಗಿದ್ದರೂ ಬರೋಬ್ಬರಿ 372 ಪದವೀಧರರು, 54 ಸ್ನಾತಕೋತ್ತರ ಪದವೀಧರರು ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಮಿನಿ ಅಂಗನವಾಡಿಗಳು ಸೇರಿದಂತೆ ಜಿಲ್ಲೆಯಲ್ಲಿ 2,782 ಅಂಗನವಾಡಿಗಳಿವೆ. ನಗರಕ್ಕಿಂತ ಗ್ರಾಮೀಣ ಭಾಗದ ಅಂಗನವಾಡಿಗಳಲ್ಲೇ ಪದವೀಧರ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವ ಪ್ರಮಾಣ ಹೆಚ್ಚಿದೆ.

ನಗರ ವ್ಯಾಪ್ತಿಯ 75 ಮತ್ತು ಗ್ರಾಮೀಣ ವ್ಯಾಪ್ತಿಯ 353 ಅಂಗನವಾಡಿಗಳಲ್ಲಿ ಪದವಿ ಮತ್ತು ಅದಕ್ಕಿಂತ ಮೇಲ್ಪಟ್ಟು ಶಿಕ್ಷಣ ಪಡೆದ ಕಾರ್ಯಕರ್ತೆಯರಿದ್ದಾರೆ. ನೂರಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ ಪಿಯುಸಿ ಮುಗಿಸಿದ ಸಹಾಯಕಿಯರು ಕೆಲಸ ನಿರ್ವಹಿಸುತ್ತಿದ್ದಾರೆ.

2022ಕ್ಕೂ ಮುನ್ನ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಎಸ್‍ಎಸ್ಎಲ್‍ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿತ್ತು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಜಾರಿಗೆ ಬಂದ ಬಳಿಕ ವಿದ್ಯಾರ್ಹತೆ ಮಾನದಂಡ ಬದಲಿಸಲಾಗಿದೆ. ಇದು ಹೊಸ ನೇಮಕಾತಿಗಳಿಗೆ ಮಾತ್ರ ಅನ್ವಯ ಆಗುತ್ತಿದೆ. ವಿದ್ಯಾರ್ಹತೆ ಮಾನದಂಡ ಏರಿಸಿದ್ದರಿಂದ ನೇಮಕಾತಿ ವೇಳೆ ಪೈಪೋಟಿ ಇಳಿಕೆಯಾಗಬಹುದು ಎಂಬ ಇಲಾಖೆಯ ಲೆಕ್ಕಾಚಾರವೂ ಸುಳ್ಳಾಗಿದೆ.

‘ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಆಟೋಟದ ಜತೆಗೆ ಕಲಿಕಾ ತರಬೇತಿಗೂ ಆದ್ಯತೆ ಕೊಡಲಾಗುತ್ತಿದೆ. ಹೀಗಾಗಿ ಕಾರ್ಯಕರ್ತೆಯರ ವಿದ್ಯಾರ್ಹತೆ ಮಾನದಂಡ ಬದಲಿಸಲಾಗಿದೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ.

‘ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಈಚಿನ ವರ್ಷಗಳಲ್ಲಿ ಪೈಪೋಟಿ ಏರ್ಪಡುತ್ತಿದೆ. ಉನ್ನತ ಶಿಕ್ಷಣ ಪಡೆದವರು ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅದರಲ್ಲಿಯೂ ಗ್ರಾಮೀಣ ಭಾಗದ ಅಂಗನವಾಡಿಗಳಿಗೆ ಹುದ್ದೆ ಪಡೆಯಲು ಪೈಪೋಟಿ ಹೆಚ್ಚುತ್ತಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.