ADVERTISEMENT

ಕಾರವಾರ: ಗ್ರಾ.ಪಂ. ಕರ ಸಂಗ್ರಹ ಕುಂಠಿತ, ಪೂರ್ಣಗೊಳ್ಳದ ಆಸ್ತಿ ಸಮೀಕ್ಷೆ

ಶೇ.28.41 ರಷ್ಟು ಮಾತ್ರ ತೆರಿಗೆ ವಸೂಲು

ಗಣಪತಿ ಹೆಗಡೆ
Published 27 ಜನವರಿ 2023, 19:30 IST
Last Updated 27 ಜನವರಿ 2023, 19:30 IST
   

ಕಾರವಾರ: ಜಿಲ್ಲೆಯ ಗ್ರಾಮ ಪಂಚಾಯ್ತಿಗಳು 2022–23ನೇ ಸಾಲಿಗೆ ಕರ ಸಂಗ್ರಹಿಸುವ ವಿಚಾರದಲ್ಲಿ ಹಿಂದೆ ಬಿದ್ದಿವೆ. ಆಸ್ತಿ ಸಮೀಕ್ಷೆ ನಡೆಸಿ ಪರಿಷ್ಕೃತ ತೆರಿಗೆ ವಸೂಲಿ ಮಾಡಬೇಕು ಎಂಬ ಸರ್ಕಾರದ ಆದೇಶವೇ ಇದಕ್ಕೆ ಕಾರಣ ಎಂಬುದು ಅಧಿಕಾರಿಗಳ ವಾದ.

229 ಗ್ರಾಮ ಪಂಚಾಯ್ತಿಗಳಿರುವ ಉತ್ತರ ಕನ್ನಡದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು ₹9.83 ಕೋಟಿ ಕರ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈವರೆಗೆ ಕೇವಲ ₹2.79 ಕೋಟಿ ಮಾತ್ರ ಸಂಗ್ರಹಗೊಂಡಿದೆ. ಹಿಂದಿನ ವರ್ಷದ ಬಾಕಿಯೂ ಸೇರಿದಂತೆ ₹11.89 ಕೋಟಿ ಸಂಗ್ರಹಗೊಳ್ಳಬೇಕಿದೆ.

ಗ್ರಾಮೀಣ ಭಾಗದಲ್ಲಿ ಖಾಸಗಿ ಆಸ್ತಿ, ಕಟ್ಟಡ, ವ್ಯಾಪಾರ ಮಳಿಗೆ, ಕಟ್ಟಡ ಪರವಾನಗಿಗಳ ಮೂಲಕ ಪ್ರತಿ ವರ್ಷ ಜನರಿಂದ ಕರ ಸಂಗ್ರಹಿಸಲಾಗುತ್ತದೆ. ಈ ಮೊತ್ತದಲ್ಲಿ ಶೇ.24ರಷ್ಟನ್ನು ಸರ್ಕಾರಕ್ಕೆ ಭರಣ ಮಾಡಲಾಗುತ್ತದೆ. ಉಳಿದ ಮೊತ್ತ ಗ್ರಾಮ ಪಂಚಾಯ್ತಿಯ ಹೊರಗುತ್ತಿಗೆ ಸಿಬ್ಬಂದಿ ವೇತನ, ಸ್ವಚ್ಛತೆ, ಗ್ರಾಮಸಭೆ, ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ನಿರ್ವಹಣೆ ವೆಚ್ಚಕ್ಕೆ ಬಳಕೆಯಾಗುತ್ತದೆ.

ADVERTISEMENT

ಆದರೆ, ಜಿಲ್ಲೆಯ ಗ್ರಾಮ ಪಂಚಾಯ್ತಿಗಳು ಕರ ಸಂಗ್ರಹಣೆಯಲ್ಲಿ ಪ್ರತಿ ಬಾರಿ ಹಿಂದುಳಿಯುತ್ತಿವೆ ಎಂಬ ಆರೋಪಗಳಿವೆ. ಗುಡ್ಡಗಾಡು ಜಿಲ್ಲೆಯಾಗಿರುವ ಇಲ್ಲಿ ನಿಗದಿತ ಸಮಯಕ್ಕೆ ಜನರಿಂದ ಕರ ಸಂಗ್ರಹಿಸಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ.

‘ನಿರಪೇಕ್ಷಣಾ ಪತ್ರ ಪಡೆಯಲು, ಕಟ್ಟಡ ಪರವಾನಗಿ ಪಡೆಯಲು ಕಚೇರಿಗೆ ಬಂದಾಗಲಷ್ಟೇ ಜನರಿಗೆ ಕರ ಪಾವತಿಸಲು ಸೂಚಿಸಲಾಗುತ್ತಿದೆ. ಉಳಿದಂತೆ ಮನೆ ಮನೆಗೆ ತೆರಳಿ ಕರ ಸಂಗ್ರಹಿಸುವ ಕಾರ್ಯಗಳು ನಡೆಯುತ್ತಿಲ್ಲ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿಯ ಅಧಿಕಾರಿಯೊಬ್ಬರು.

‘ಕರ ಸಂಗ್ರಹಣೆಗೆ ನಿರ್ದಿಷ್ಟ ಮಾರ್ಗಸೂಚಿ ಇಲ್ಲ. ಕಟ್ಟುನಿಟ್ಟಾಗಿ ಕರ ಸಂಗ್ರಹಿಸಲು ಪಿಡಿಒಗಳಿಗೆ ಅಧಿಕಾರವನ್ನೂ ನೀಡಿಲ್ಲ. ಜನರಿಗೆ ತಿಳಿಹೇಳಿದರೂ ಕರ ಪಾವತಿಗೆ ಹಿಂದೇಟು ಹಾಕುತ್ತಾರೆ. ಕೆಲವರಷ್ಟೇ ನಿಗದಿತ ಸಮಯಕ್ಕೆ ಕರ ಪಾವತಿಸುತ್ತಾರೆ. ಕರ ಪಾವತಿಗೆ ಒತ್ತಡ ಹೇರಿದರೆ ಗ್ರಾಮ ಪಂಚಾಯ್ತಿ ಸದಸ್ಯರೇ ಅದನ್ನು ತಡೆಯುತ್ತಾರೆ. ಇದರಿಂದ ಕರ ಸಂಗ್ರಹಕ್ಕೆ ಹಿನ್ನಡೆ ಉಂಟಾಗುತ್ತಿದೆ’ ಎಂದು ಪಿಡಿಒವೊಬ್ಬರು ಪ್ರತಿಕ್ರಿಯಿಸಿದರು.

ಸಮೀಕ್ಷೆಗೆ ಹಿಂದೇಟು: ಕಳೆದ ಆಗಸ್ಟ್‌ನಲ್ಲಿ ಸರ್ಕಾರ ಗ್ರಾಮೀಣ ಭಾಗದ ಆಸ್ತಿಗಳ ಸಮೀಕ್ಷೆ ನಡೆಸಿ, ಅದಕ್ಕೆ ತಕ್ಕಂತೆ ತೆರಿಗೆ ಪರಿಷ್ಕರಣೆ ಮಾಡಬೇಕು ಹಾಗೂ ಪಂಚತಂತ್ರ–2.0 ತಂತ್ರಾಂಶದ ಮೂಲಕ ಕರ ಸಂಗ್ರಹಿಸಬೇಕು ಎಂದು ಆದೇಶಿಸಿತ್ತು. ನವೆಂಬರ್ ಹೊತ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿತ್ತು.

‘ಕಡಿಮೆ ಅವಧಿಯಲ್ಲಿ ಆಸ್ತಿ ಸಮೀಕ್ಷೆ ನಡೆಸುವುದು ಕಷ್ಟ. ಅಲ್ಲದೆ ಹೊಸ ತಂತ್ರಾಂಶ ಬಳಸಿ ತೆರಿಗೆ ಸಂಗ್ರಹಣೆಗೆ ಕಾಲಾವಕಾಶವನ್ನೂ ಕೋರಲಾಗಿತ್ತು. ಸ್ಪಷ್ಟ ನಿರ್ದೇಶನ ಇಲ್ಲದ ಕಾರಣ ಗೊಂದಲ ಮುಂದುವರರಿದಿದೆ. ಕರ ಸಂಗ್ರಹಣೆ ಕುಂಠಿತಗೊಳ್ಳಲು ಇದೂ ಸಹ ಕಾರಣ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಿಡಿಒ ಸಮಸ್ಯೆ ವಿವರಿಸಿದರು.


*
ಆಸ್ತಿ ಸಮೀಕ್ಷೆ ಪೂರ್ಣಗೊಳಿಸಿ ಕರ ಸಂಗ್ರಹಣೆ ಮಾಡಲು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆಲವು ತಾಲ್ಲೂಕಿನಲ್ಲಿ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ.
-ಈಶ್ವರ ಕಾಂದೂ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.