ADVERTISEMENT

ಗ್ರಾಮ ವಾಸ್ತವ್ಯ: ನದಿಗೆ ಸುರಿದ ಮಣ್ಣು ತೆರವಿಗೆ ಆಗ್ರಹ

ಕಾರವಾರ ತಾಲ್ಲೂಕಿನ ಕಡವಾಡದ ಹಳೆಕೋಟದಲ್ಲಿ ಅಧಿಕಾರಿಗಳ ಗ್ರಾಮ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2022, 16:09 IST
Last Updated 15 ಅಕ್ಟೋಬರ್ 2022, 16:09 IST
ಕಾರವಾರ ತಾಲ್ಲೂಕಿನ ಕಡವಾಡ ಗ್ರಾಮದ ಹಳೆಕೋಟದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ತಹಶೀಲ್ದಾರ್ ನಿಶ್ಚಲ್ ನರೋನಾ ಅವರಿಗೆ ಮನವಿ ಸಲ್ಲಿಸಿದರು. ಗ್ರಾ.ಪಂ ಉಪಾಧ್ಯಕ್ಷ ಆನಂದು ನಾಯ್ಕ, ಬಿ.ಇ.ಒ ಶಾಂತೇಶ ನಾಯಕ ಇದ್ದಾರೆ.
ಕಾರವಾರ ತಾಲ್ಲೂಕಿನ ಕಡವಾಡ ಗ್ರಾಮದ ಹಳೆಕೋಟದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ತಹಶೀಲ್ದಾರ್ ನಿಶ್ಚಲ್ ನರೋನಾ ಅವರಿಗೆ ಮನವಿ ಸಲ್ಲಿಸಿದರು. ಗ್ರಾ.ಪಂ ಉಪಾಧ್ಯಕ್ಷ ಆನಂದು ನಾಯ್ಕ, ಬಿ.ಇ.ಒ ಶಾಂತೇಶ ನಾಯಕ ಇದ್ದಾರೆ.   

ಕಾರವಾರ: ‘ನಗರಸಭೆಯವರು ಸುಂಕೇರಿ ಸೇತುವೆಯ ಬಳಿ ಕಾಳಿ ನದಿಗೆ ಮಣ್ಣು ಸುರಿದು ಕೆಲವು ತಿಂಗಳೇ ಆದವು. ಅದನ್ನು ಇನ್ನೂ ತೆರವು ಮಾಡದ ಕಾರಣ ಮೀನುಗಾರಿಕೆಗೆ ಅಡಚಣೆಯಾಗುತ್ತಿದೆ’ ಎಂದು ಸ್ಥಳೀಯರು ತಾಲ್ಲೂಕು ಆಡಳಿತದ ಅಧಿಕಾರಿಗಳಿಗೆ ದೂರಿದರು.

ತಾಲ್ಲೂಕಿನ ಕಡವಾಡ ಗ್ರಾಮ ಪಂಚಾಯಿತಿಯ ಹಳೆಕೋಟದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಮಸ್ಯೆಯನ್ನು ಗಮನಕ್ಕೆ ತಂದರು.

‘ಮಣ್ಣು ಹಾಕಿದ ಪ್ರದೇಶ ಮತ್ತು ಸುತ್ತಮುತ್ತ ಕಾಳಿ ನದಿಯಲ್ಲಿ ಅರಣ್ಯ ಇಲಾಖೆಯಿಂದ ಕಾಂಡ್ಲಾ ಗಿಡಗಳನ್ನು ನೆಡಲಾಗುತ್ತಿದೆ. ಅದನ್ನು ನಗರಸಭೆಯವರು ತೆರವು ಮಾಡಿ ಅಲ್ಲೇ ಎಸೆಯುತ್ತಾರೆ. ಇದರಿಂದ ಸಾಂಪ್ರದಾಯಿಕ ಮೀನುಗಾರಿಕೆಯ ಬಲೆ ಹಾಕಲು ಸಮಸ್ಯೆಯಾಗುತ್ತಿದೆ. ಅದನ್ನು ತೆರವು ಮಾಡಲು ನಗರಸಭೆಯವರಿಗೆ ಸೂಚಿಸಿ’ ಎಂದು ಆಗ್ರಹಿಸಿದರು.

ADVERTISEMENT

ತಹಶೀಲ್ದಾರ್ ನಿಶ್ಚಲ್ ನರೋನಾ ಮಾತನಾಡಿ, ‘ಅಲ್ಲಿ ಮಣ್ಣು ಹಾಕುವುದನ್ನು ನಿಲ್ಲಿಸಲಾಗಿದೆ. ಈಗ ಇರುವ ಮಣ್ಣು ಮತ್ತು ಇತರ ತ್ಯಾಜ್ಯಗಳ ತೆರವಿಗೆ ತಿಳಿಸಲಾಗುವುದು’ ಎಂದರು.

‘ಗ್ರಾಮದ ಮಹಾದೇವ ದೇವಸ್ಥಾನದ ದುರಸ್ತಿ ಆಗಬೇಕು. ಕಾರ್ಯಕ್ರಮಗಳಿಗೆ ಸಭಾಂಗಣವನ್ನು ಕಾಯ್ದಿರಿಸಲು ಗ್ರಾಮ ಚಾವಡಿಯ ಬದಲು ದೇವಸ್ಥಾನದಲ್ಲೇ ವ್ಯವಸ್ಥೆ ಕಲ್ಪಿಸಿ’ ಎಂದು ಗ್ರಾಮಸ್ಥರು ಆಗ್ರಹಿಸಿದರು.

ತಹಶೀಲ್ದಾರ್ ಪ್ರತಿಕ್ರಿಯಿಸಿ, ‘ದೇಗುಲದ ಅಭಿವೃದ್ಧಿಗೆ ಯೋಜನೆ ಸಿದ್ಧವಾಗಿದೆ. ಅಂದಾಜು ಖರ್ಚು ವೆಚ್ಚವನ್ನು ಲೆಕ್ಕಾಚಾರ ಮಾಡಲಾಗಿದೆ. ಶೀಘ್ರವೇ ದುರಸ್ತಿ ಮಾಡಲಾಗುವುದು’ ಎಂದರು.

ಮುರಿದ ಸೇತುವೆ:

‘ಕಡವಾಡ ಮಾರುತಿ ದೇವಸ್ಥಾನದಿಂದ ಸುಂಕೇರಿ ಸೇತುವೆ ತನಕ ಹಳ್ಳದ ಹೂಳೆತ್ತಿಲ್ಲ. ಇದರಿಂದ ನೀರು ರಸ್ತೆಗೆ ಬರುತ್ತಿದೆ. ದುರಸ್ತಿ ಮಾಡಿದ ರಸ್ತೆ ವರ್ಷದೊಳಗೇ ಹಾಳಾಗಿದ್ದು, ಶಾಶ್ವತ ಪರಿಹಾರ ಕಲ್ಪಿಸಿ. ಮಕ್ಕೇರಿಯಲ್ಲಿ ಸೇತುವೆ ಮುರಿದು ನಾಲ್ಕು ತಿಂಗಳಾದರೂ ಪುನಃ ನಿರ್ಮಿಸಿಲ್ಲ’ ಎಂದು ಗ್ರಾಮಸ್ಥರು ದೂರಿದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಗಾಂವ್ಕರ್ ಪ್ರತಿಕ್ರಿಯಿಸಿ, ‘ರಸ್ತೆ ಕಾಮಗಾರಿಗೆ ವಿಶೇಷ ಅನುದಾನಕ್ಕಾಗಿ ಪ್ರಸ್ತಾವ ಕಳುಹಿಸಲಾಗಿದೆ. ಸೇತುವೆ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಕಾಮಗಾರಿ ಶುರುವಾಗಿ, ಡಿಸೆಂಬರ್ ಒಳಗೆ ಸಂಚಾರಕ್ಕೆ ಮುಕ್ತವಾಗಲಿದೆ’ ಎಂದರು.

ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ತಹಶೀಲ್ದಾರ್ ನಿಶ್ಚಲ್ ನರೋನಾ ಪ್ರಮಾಣಪತ್ರಗಳನ್ನು ವಿತರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಿಯಾ ಗೌಡ, ಉಪಾಧ್ಯಕ್ಷ ಆನಂದು ನಾಯ್ಕ, ಆರ್.ಎಫ್.ಒ ರಾಘವೇಂದ್ರ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ, ಕೆ.ಎಸ್.ಆರ್‌.ಟಿ.ಸಿ ಸಂಚಾರ ನಿಯಂತ್ರಣಾಧಿಕಾರಿ ಅಶೋಕ ನಾಯ್ಕ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

ಸಭೆಯಲ್ಲಿ ಕೇಳಿದ್ದು...

* ಹಳೆಕೋಟ ಸರ್ಕಾರಿ ಶಾಲೆ ದುರಸ್ತಿಗೆ ₹ 28 ಲಕ್ಷ ಮಂಜೂರು.

* ಜನತಾ ಕಾಲೊನಿ ನಿವಾಸಿಗಳಿಗೆ ಹಕ್ಕು ಪತ್ರ ಕೊಡಬೇಕು.

* ಕಾಲೊನಿಗೆ ಸರ್ವಋತು ರಸ್ತೆ ನಿರ್ಮಿಸಬೇಕು.

* ಸುಂಕೇರಿಯ ಬಸ್‌ ಕಡವಾಡದ ತನಕವೂ ಬರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.