ADVERTISEMENT

ತಾಯಿಯ ಚಿಕಿತ್ಸೆಗೆ ಅಜ್ಜನ ಕೊಲೆಗೈದ ಮೊಮ್ಮಗ

ತಾತನ ಜಮೀನು ಮಾರಾಟ ಮಾಡಿ ಹಣ ಹೊಂದಿಸಲು ಮುಂದಾಗಿದ್ದ!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 15:28 IST
Last Updated 21 ಸೆಪ್ಟೆಂಬರ್ 2019, 15:28 IST
   

ಕಾರವಾರ: ತಾಯಿಯ ಮೂತ್ರಪಿಂಡದ ಚಿಕಿತ್ಸೆ ಹಾಗೂ ಸಹೋದರಿಯರ ಶಿಕ್ಷಣಕ್ಕೆ ಹಣ ಹೊಂದಿಸಲು, 17 ವರ್ಷದ ಮೊಮ್ಮಗನೇ ಅಜ್ಜನನ್ನು ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ತಾಲ್ಲೂಕಿನ ಮಾಜಾಳಿಯ ಅಂಗಡಿ ಗ್ರಾಮದಲ್ಲಿ ನಿವೃತ್ತ ಅರಣ್ಯ ರಕ್ಷಕ ಜಾನ್ ಅಂಥೋನ್ ಫರ್ನಾಂಡಿಸ್ (82) ಅವರನ್ನು ಹರಿತವಾದ ಆಯುಧಗಳಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಅವರ ಮೃತದೇಹವು ಸೆ.15ರಂದು ಮನೆಯ ಸ್ನಾನಗೃಹದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತು.

ಈ ಬಗ್ಗೆ ಅನುಮಾನ ಬಂದ ಕಾರಣ ಮೊಮ್ಮಗನನ್ನೂ ಪೊಲೀಸರು ವಿಚಾರಣೆ ನಡೆಸಿದಾಗ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ADVERTISEMENT

‘ತಾತನ ಜಮೀನು ಮಾರುವ ಉದ್ದೇಶ’:

‘ಫರ್ನಾಂಡಿಸ್‌ಮತ್ತು ಅವರ ಪುತ್ರಿಯ (ಆರೋಪಿಯ ತಾಯಿ) ನಡುವೆ ಜಮೀನಿನ ವಿಚಾರದಲ್ಲಿವೈಷಮ್ಯ ಬೆಳೆದಿತ್ತು. ಇದು ಆರೋಪಿಗೂ ತಿಳಿದಿತ್ತು. ಅಜ್ಜನನ್ನು ಕೊಲೆ ಮಾಡಿದರೆ ಯಾರ ಅಡ್ಡಿಯೂ ಇಲ್ಲದೇ ಜಮೀನು ಮಾರಾಟ ಮಾಡಿ, ಬಂದ ಹಣದಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಬಹುದು ಎಂದುಕೊಂಡು ಕೊಲೆ ಮಾಡಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದರು.

‘ಆರೋಪಿಯು ತಾಯಿ, ಅಕ್ಕ ಹಾಗೂ ತಂಗಿಯ ಜತೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದ. ಸಹೋದರಿಯರಿಬ್ಬರೂ ಪ್ರತಿಭಾವಂತ ವಿದ್ಯಾರ್ಥಿಗಳು. ಈತ ಕೂಡ ಪಿಯು ವಿಜ್ಞಾನ ವಿಭಾಗದಲ್ಲಿ ಶೇ 86ರಷ್ಟು ಅಂಕ ಗಳಿಸಿದ್ದ. ಎಂಜಿನಿಯರಿಂಗ್‌ಗೆ ಸೇರಿಕೊಳ್ಳಬೇಕು ಎಂದುಕೊಂಡಾಗ ಕಾಲೇಜು ಶುಲ್ಕ ತುಂಬಲಾಗದೇ ಡಿಪ್ಲೊಮಾ ಸೇರಿದ್ದ’ ಎಂದು ಅವರು ವಿವರಿಸಿದರು.

‘ಅಜ್ಜನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಹುಬ್ಬಳ್ಳಿಯಿಂದ ಬಸ್‌ನಲ್ಲಿ ಬಂದಿದ್ದ ಆರೋಪಿ, ಫರ್ನಾಂಡಿಸ್ ಒಬ್ಬರೇ ಇದ್ದಾಗ ಹಿಂಬದಿಯಿಂದ ಚಾಕುವಿನಿಂದ ಚುಚ್ಚಿದ್ದ.ಅವರಮೈಮೇಲೆ ಇದ್ದ 50 ಗ್ರಾಂ ಬಂಗಾರವನ್ನು ದೋಚಿಕೊಂಡು ಹೋಗಿ ಅಡವಿಟ್ಟು, ಹಣವನ್ನೂ ಪಡೆದುಕೊಂಡು ಹಿಂತಿರುಗಿದ್ದ. ಫರ್ನಾಂಡಿಸ್ ಅವರ ಮನೆಯ ಸುತ್ತಮುತ್ತಲಿನವರನ್ನು ವಿಚಾರಿಸಿದಾಗ ಜಮೀನು ವ್ಯಾಜ್ಯದ ವಿಷಯ ಗೊತ್ತಾಯಿತು. ಇದರ ಜಾಡು ಹಿಡಿದು ಹೊರಟಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ’ ಎಂದು ತಿಳಿಸಿದರು.

ಆರೋಪಿಯನ್ನು ಶನಿವಾರ ಬೆಳಿಗ್ಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.