ADVERTISEMENT

ಉತ್ತರ ಕನ್ನಡ: ‘ಶಾಂತಿಧಾಮ’ವಾಗಿ ಬದಲಾದ ಮುಕ್ತಿಧಾಮ

ಹಳಿಯಾಳ: ವೀರಶೈವ ರುದ್ರಭೂಮಿಯ ಪುನರುಜ್ಜೀವನಗೊಳಿಸಿದ ಯುವಕರ ಪಡೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 14:29 IST
Last Updated 20 ಆಗಸ್ಟ್ 2021, 14:29 IST
ಹಳಿಯಾಳದ ಜೀರ್ಣೋದ್ಧಾರವಾದ ವೀರಶೈವ ಲಿಂಗಾಯತ ಶಾಂತಿಧಾಮಲ್ಲಿ ನೂತನವಾಗಿ ನಿರ್ಮಿಸಿದ ಶಿವಧ್ಯಾನ ಮಂದಿರ
ಹಳಿಯಾಳದ ಜೀರ್ಣೋದ್ಧಾರವಾದ ವೀರಶೈವ ಲಿಂಗಾಯತ ಶಾಂತಿಧಾಮಲ್ಲಿ ನೂತನವಾಗಿ ನಿರ್ಮಿಸಿದ ಶಿವಧ್ಯಾನ ಮಂದಿರ   

ಹಳಿಯಾಳ: ಪಟ್ಟಣದ ಗುಡ್ನಾಪುರ ಕೈಗಾರಿಕಾ ವಸಾಹತು ಬಳಿ ಇರುವ ಸುಮಾರು ನಾಲ್ಕು ಎಕರೆ ವಿಸ್ತೀರ್ಣದ ವೀರಶೈವ ರುದ್ರಭೂಮಿ ಈಗ ‘ಶಾಂತಿಧಾಮ’ವಾಗಿದೆ. ಸುಂದರ ಉದ್ಯಾನದ ಸ್ವರೂಪ ಪಡೆದುಕೊಂಡಿದೆ.

ಇದಕ್ಕೆ ಕಾರಣವಾಗಿದ್ದು ಪಟ್ಟಣದ ವೀರಶೈವ ಲಿಂಗಾಯತ ಸಮಾಜದ ಯುವಕರ ಪಡೆ. ಈ ಹಿಂದೆ ಎಲ್ಲೆಂದರಲ್ಲಿ ಕೊಳಚೆ ತುಂಬಿ, ಗಿಡ ಗಂಟಿ ಬೆಳೆದಿದ್ದವು. ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಕಾರ್ಯಕ್ರಮಗಳಿಗೆ ಬಂದವರು ಸ್ಮಶಾವನವೆಂಬ ಭಯದೊಂದಿಗೇ ಇಲ್ಲಿನ ಸ್ಥಿತಿ ನೋಡಿ ಅಂಜುವಂತಿತ್ತು.

ಈ ಹಿಂದೆ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಹಾಗೂ ಅಂದಿನ ಪುರಸಭೆ ಸದಸ್ಯ ದಿ.ಶ್ರೀಕಾಂತ ಹೂಲಿ ರುದ್ರಭೂಮಿಯ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಿಸಿದ್ದರು. ಅವರ ಅಕಾಲಿಕ ಮರಣದ ಬಳಿಕ ಈ ಕಾರ್ಯ ಕಳೆಗುಂದಿತು. ನಂತರ ಅವರ ಪುತ್ರ, ಈಗಿನ ಪುರಸಭೆ ಸದಸ್ಯ ಉದಯ ಹೂಲಿ ಈ ಕಾರ್ಯವನ್ನು ಮುಂದುವರಿಸಿದರು. ಅಷ್ಟರಲ್ಲಿಯೇ ಕೋವಿಡ್‌ನಿಂದಾಗಿ ಸಂಫೂರ್ಣ ಲಾಕ್‌ಡೌನ್‌ ಘೋಷಣೆಯಾಗಿ ಕೆಲಸ ನಿಂತಿತು.

ADVERTISEMENT

ವೀರಶೈವ ಲಿಂಗಾಯತ ಸಮಾಜದ ಸುಮಾರು 15 ಮಂದಿ ಪುರುಷರು, ಮಹಿಳೆಯರು ಪ್ರತಿದಿನ ಶ್ರಮದಾನ ಮಾಡಿದರು. ಲಾಕ್‌ಡೌನ್ ಸಡಿಲಿಕೆಯ ನಂತರ ಸಮಾಜದ ಇತರರು ಹಾಗೂ ಕುಶಲಕರ್ಮಿಗಳಿಂದ ಸುಮಾರು ₹ 24 ಲಕ್ಷ ವೆಚ್ಚಮಾಡಿ ರುದ್ರಭೂಮಿಯನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲಾಯಿತು. ಪುರಸಭೆಯಿಂದ ಎಸ್.‌ಎಫ್‌.ಐ ಯೋಜನೆಯಡಿ ಅನುದಾನ ₹ 6 ಲಕ್ಷ ಹಾಗೂ ದಾನಿಗಳಿಂದಲೂ ಹಣ ಸಂಗ್ರಹಿಸಲಾಯಿತು.

ಏನೇನಿದೆ?
ರುದ್ರಭೂಮಿಯ ಪ್ರವೇಶ ದ್ವಾರಕ್ಕೆ ಬರುತ್ತಿದ್ದಂತೆ ಸುಂದರವಾದ ಪರಮೇಶ್ವರನ ದೇವಸ್ಥಾನವಿದೆ. ಅದರ ಎದುರಿಗೆ ನಂದಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಗೋಕಾಕ ತಾಲ್ಲೂಕಿನ ಅರಭಾವಿ ಗ್ರಾಮದಲ್ಲಿ ದೊರಕುವ ಕಲ್ಲಿನಿಂದ ಸುಮಾರು ₹ 13 ಲಕ್ಷ ವೆಚ್ಚದಿಂದ ಅದನ್ನು ನಿರ್ಮಿಸಲಾಗಿದೆ.

ದೇವಸ್ಥಾನದ ಸುತ್ತಲೂ ಹುಲ್ಲು ಹಾಸು ನಿರ್ಮಿಸಲಾಗಿದೆ. ಉದ್ಯಾನ, ಪತ್ರಿವನ ಹಾಗೂ ಅಲ್ಲಲ್ಲಿ ಬನ್ನಿಗಿಡ, ಔಷಧೀಯ ಗಿಡಗಳನ್ನು ನೆಡಲಾಗಿದೆ. ಸುತ್ತಲೂ ಆವರಣ ಗೋಡೆಯಲ್ಲಿ ಈರಯ್ಯ ಮಠಪತಿ ಚಿತ್ರಿಸಿದ ವರ್ಲಿ ಚಿತ್ರಕಲೆಯ ಆಕರ್ಷಣೆಯಿದೆ. ರವಿ ಉಡುಪಿ ಚಿತ್ರಿಸಿದ ಮಾನವನ ಜನನದಿಂದ ಮರಣದವರೆಗಿನ ಬದುಕು ಬಿಂಬಿಸುವ ಚಿತ್ರಕಲೆ ಗಮನ ಸೆಳೆಯುತ್ತದೆ.

ಶಾಂತಿ ಧಾಮಕ್ಕೆ ಬಂದವರಿಗೆ ಆಸನ, ಮಳೆಯಲ್ಲಿ ನಿಲ್ಲಲು ಶೆಡ್‌, ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಗೃಹ ಹಾಗೂ ವಾಯುವಿಹಾರದ ಪಥವನ್ನೂ ನಿರ್ಮಿಸಲಾಗಿದೆ. ದೇವಸ್ಥಾನದಲ್ಲಿ ಪ್ರತಿದಿನ ಪೂಜೆ ಪುನಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುತ್ತಲೂ ವಿದ್ಯುತ್‌ ದೀಪ ಅಳವಡಿಸಲಾಗಿದೆ.

ಶಾಂತಿಧಾಮ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ರವಿ ತೋರಣಗಟ್ಟಿ, ಉಮೇಶ ಬೋಳಶೆಟ್ಟಿ, ಬಸವರಾಜ ಶೆಟ್ಟರ್‌, ಮಲ್ಲಿಕಾರ್ಜುನ ಇಟಗಿ, ಶಿವಾನಂದ ಶೆಟ್ಟರ್‌, ಶಿವಾನಂದ ಉಂಡಿ, ಶಿವಬಸು ಧೇಗನಳ್ಳಿಮಠ, ಉಮಾಶಂಕರ ಮದನಳ್ಳಿಮಠ, ಮಲ್ಲಿಕಾರ್ಜುನ ಹುಬ್ಬಳ್ಳಿ, ಶಂಭು ಮೇಲಿನಮಠ, ಸುಹಾಸ ಕೂಡಲಮಠ, ಅಪ್ಪಾಸಾಹೇಬ ಹುಂಡೇಕರ, ಗೀತಾ ಹೀರೆಮಠ, ಹೇಮಾವತಿ ಮದ್ನಳ್ಳಿಮಠ ಅವರೂ ಸ್ಮರಣೀಯ ಸಹಕಾರ ನೀಡಿದ್ದಾರೆ.

ಮಂದಿರ ಲೋಕಾರ್ಪಣೆ:ಶಾಂತಿಧಾಮದಲ್ಲಿ ನಿರ್ಮಿಸಿದ ದೇವಸ್ಥಾನದಲ್ಲಿ ಶಿವ ಮತ್ತು ನಂದಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಯು ಆ.19ರಂದು ನೆರವೇರಿದೆ. ಉಪ್ಪಿನ ಬೇಟಗೇರಿಯ ವಿರೂಪಕ್ಷೇಶ್ವರ ಸ್ವಾಮಿ ಹಾಗೂ ಗೋಕರ್ಣದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

20ರಂದು ಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕೆ.ಕೆ.ಹಳ್ಳಿ ನಿತ್ಯಾನಂದ ಆಶ್ರಮದ ಸುಬ್ರಹ್ಮಣ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಎಸ್.‌ಎಲ್.‌ಘೋಟ್ನೇಕರ, ವಾಯವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ, ಪುರಸಭೆ ಅಧ್ಯಕ್ಷ ಅಜರ್‌ ಬಸರಿಕಟ್ಟಿ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ.ತೋರಣಗಟ್ಟಿ ಇದ್ದರು. ದಿವಂಗತ ಶ್ರೀಕಾಂತ ಹೂಲಿ ಅವರಿಗೆ ಭಾವಾಂಜಲಿ ಕಾರ್ಯಕ್ರಮವು 21ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.

***
ರುದ್ರಭೂಮಿಯ ಸುತ್ತಲೂ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು. ಎಲ್ಲ ಸಮುದಾಯಗಳಿಗೂ ಅನುಕೂಲ ಆಗುವಂತೆ ಮುಕ್ತಿ ವಾಹನದ ವ್ಯವಸ್ಥೆ ಮಾಡಲಾಗುವುದು.
-ಉದಯ ಹೂಲಿ, ಪುರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.