ADVERTISEMENT

ಚರ್ಚೆಗೆ ಗ್ರಾಸವಾದ ಹಸಿರು ಧ್ವಜ ಹಾರಾಟ

​ಪ್ರಜಾವಾಣಿ ವಾರ್ತೆ
Published 14 ಮೇ 2023, 16:17 IST
Last Updated 14 ಮೇ 2023, 16:17 IST
ಭಟ್ಕಳ ಪಟ್ಟಣದ ಶಂಶುದ್ದಿನ್ ವೃತ್ತದಲ್ಲಿ ಯುವಕನೊಬ್ಬ ಹಸಿರು ಧ್ವಜ ಹಾರಿಸಿರುವುದು.
ಭಟ್ಕಳ ಪಟ್ಟಣದ ಶಂಶುದ್ದಿನ್ ವೃತ್ತದಲ್ಲಿ ಯುವಕನೊಬ್ಬ ಹಸಿರು ಧ್ವಜ ಹಾರಿಸಿರುವುದು.   

ಕಾರವಾರ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಂಭ್ರಮಾಚರಣೆ ವೇಳೆ ಜಿಲ್ಲೆಯ ಭಟ್ಕಳ ಮತ್ತು ಶಿರಸಿಯಲ್ಲಿ ಹಸಿರು ಧ್ವಜ ಹಾರಾಡಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಭಟ್ಕಳ ಪಟ್ಟಣದಲ್ಲಿ ಮಂಕಾಳ ವೈದ್ಯ ಬೆಂಬಲಿಗರು ನಡೆಸಿದ್ದ ಸಂಭ್ರಮಾಚರಣೆ ವೇಳೆ ಶಂಶುದ್ದಿನ್ ವೃತ್ತದಲ್ಲಿ ಯುವಕನೊಬ್ಬ ಅರ್ಧ ಚಂದ್ರಾಕೃತಿ, ನಕ್ಷತ್ರದ ಚಿತ್ರವಿದ್ದ ಹಸಿರು ಬಣ್ಣದ ಧ್ವಜ ಹಾರಿಸಿದ್ದ. ಪಕ್ಕದಲ್ಲಿಯೇ ಕೇಸರಿ ಬಣ್ಣದ ಧ್ವಜ, ನೀಲಿ ಧ್ವಜಗಳು ಹಾರಾಡಿದ್ದವು. ಇದೇ ಮಾದರಿಯ ಧ್ವಜ ಶಿರಸಿಯಲ್ಲಿ ಭೀಮಣ್ಣ ನಾಯ್ಕ ಗೆಲುವು ಸಾಧಿಸುತ್ತಿದ್ದಂತೆ ನಡೆದ ಸಂಭ್ರಮಾಚರಣೆಯಲ್ಲೂ ಹಾರಾಡಿದೆ.

ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಕೆಲವರು ಪಾಕಿಸ್ತಾನ ಧ್ವಜ ಹಾರಿಸಲಾಗಿದೆ ಎಂದು ಟೀಕಿಸಿದ್ದಾರೆ. ಆದರೆ, ಅವು ಪಾಕಿಸ್ತಾನದ ಧ್ವಜ ಅಲ್ಲ, ಮುಸ್ಲಿಂ ಸಮುದಾಯದವರು ಮೆರವಣಿಗೆ ವೇಳೆ ಹಾರಿಸುವ ಧ್ವಜ ಎಂಬುದಾಗಿ ಕೆಲವರು ಸಾಮಾಜಿಕ ಜಾಲತಾಣದ ಪೋಸ್ಟ್ ಗೆ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

‘ಭಟ್ಕಳ ಮತ್ತು ಶಿರಸಿಯಲ್ಲಿ ಹಾರಿಸಲಾಗಿದ್ದ ಧ್ವಜಗಳು ಪಾಕಿಸ್ತಾನದ ಧ್ವಜ ಆಗಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಜನರು ವದಂತಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಪ್ರತಿಕ್ರಿಯಿಸಿದ್ದಾರೆ.

‘ಪಾಕಿಸ್ತಾನ್ ಜಿಂದಾಬಾದ್‌ ವಿಡಿಯೊ ನಕಲಿ’ಬೆಳಗಾವಿ: ‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಕೆಲವರು ಘೋಷಣೆ ಕೂಗಿದ ವಿಡಿಯೊ ನಕಲಿಯಾಗಿದೆ. ಬಿಜೆಪಿಯ ಕೆಲವರು ಇಂತಹ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಸಹ ಇದನ್ನೇ ಮಾಡಿದ್ದರು’ ಎಂದು ಉತ್ತರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಆಸೀಫ್‌(ರಾಜು) ಸೇಠ್‌ ದೂರಿದರು. ಬೆಳಗಾವಿಯ ಆರ್‌ಪಿಡಿ ಕಾಲೇಜು ವೃತ್ತದಲ್ಲಿ ಕೆಲವರು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರವಾಗಿ ಭಾನುವಾರ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು.  ‘ಕಿಡಿಗೇಡಿಗಳು ನಮ್ಮ ವಿರುದ್ಧ ಪಿತೂರಿ ಮಾಡಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಅಧಿಕಾರವಧಿಯಲ್ಲಿ ಯಾರೇ ಭಾರತಕ್ಕೆ ಅಗೌರವ ತೋರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಬಿಡುವುದಿಲ್ಲ’ ಎಂದರು. ‘ಜಗದೀಶ ಶೆಟ್ಟರ್ ನಮ್ಮ ಹಿರಿಯರು. ಅವರು ಬೆಳಗಾವಿಗೆ ಬಂದು ಪ್ರಚಾರ ಮಾಡಿದ್ದರಿಂದ ನಾನು ಗೆದ್ದೆ. ಅವರೂ ಗೆಲ್ಲಬೇಕಿತ್ತು. ಜಗದೀಶ ಶೆಟ್ಟರ್ ಅವರ ಸೋಲು ನನಗೆ ಅತೀವ ಬೇಸರ ತರಿಸಿದೆ. ಅವರೊಂದಿಗೆ ನಮ್ಮ ಪಕ್ಷ ಯಾವಾಗಲೂ ಇರುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.