ADVERTISEMENT

‘ಗೃಹಲಕ್ಷ್ಮಿ’ಯರ ಕೈ ಸೇರದ ಹಣ

ಏಪ್ರಿಲ್‍ನಿಂದಲೇ ಹಲವರ ಖಾತೆಗೆ ಪಾವತಿ ಸ್ಥಗಿತ:ಆರೋಪ

ಗಣಪತಿ ಹೆಗಡೆ
Published 31 ಜುಲೈ 2024, 7:07 IST
Last Updated 31 ಜುಲೈ 2024, 7:07 IST
   

ಕಾರವಾರ: ಕಳೆದ ವರ್ಷದ ಆಗಸ್ಟ್ ತಿಂಗಳಿನಿಂದ ಜಿಲ್ಲೆಯ ಬಹುಪಾಲು ಮಹಿಳೆಯರಲ್ಲಿ ಸಂತಸ ಮೂಡಲು ಕಾರಣವಾಗಿದ್ದ ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆ ಕಳೆದ ಎರಡು ತಿಂಗಳಿನಿಂದ ಬೇಸರ ಮೂಡಿಸಿದೆ!

ಮಹಿಳೆಯರ ಬ್ಯಾಂಕ್ ಖಾತೆಗೆ ಮಾಸಿಕವಾಗಿ ಜಮಾ ಆಗುತ್ತಿದ್ದ ತಲಾ ₹2 ಸಾವಿರ ಮೊತ್ತ ಎರಡು ತಿಂಗಳುಗಳಿಂದ ಪಾವತಿಯಾಗದಿರುವುದು ಈ ಬೇಸರಕ್ಕೆ ಕಾರಣವಾಗಿದೆ. ಯೋಜನೆಯ ಅಡಿ ಜಿಲ್ಲೆಯಲ್ಲಿ ಹೆಸರು ನೋಂದಾಯಿಸಿಕೊಂಡ 3.15 ಲಕ್ಷ ಮಹಿಳೆಯರ ಪೈಕಿ 3.12 ಲಕ್ಷ ಮಂದಿಗೆ ಮೇ ತಿಂಗಳವರೆಗೆ ಹಣ ಪಾವತಿಯಾಗಿದೆ ಎಂಬುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ, ಮಾರ್ಚ್ ಬಳಿಕ ಈವರೆಗೆ ಖಾತೆಗೆ ಹಣ ಜಮಾ ಆಗಿಲ್ಲ. ಲೋಕಸಭೆ ಚುನಾವಣೆಗೆ ಮುನ್ನ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಮೊತ್ತವನ್ನು ಏಕಕಾಲಕ್ಕೆ ಜಮಾ ಮಾಡಿದ್ದ ಸರ್ಕಾರವು ಬಳಿಕ ಹಣ ಪಾವತಿಸುವುದನ್ನು ಸ್ಥಗಿತಗೊಳಿಸಿದೆ ಎಂಬುದು ಹಲವರು ಮಹಿಳೆಯರ ಆರೋಪ.

ADVERTISEMENT

‘ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ಖಾತೆಗೆ ಮೊತ್ತ ಪಾವತಿಯಾದ ಬಳಿಕ ನಾಲ್ಕು ತಿಂಗಳಿನಿಂದ ನಯಾಪೈಸೆ ಪಾವತಿಯಾಗಿಲ್ಲ. ಗೃಹಲಕ್ಷ್ಮಿ ಯೋಜನೆ ಜಾರಿಯಾದಾಗಿನಿಂದ ಖಾತೆಗೆ ಬರುತ್ತಿದ್ದ ಹಣವು ದಿನಸಿ, ತರಕಾರಿ ಖರೀದಿಗೆ ಅನುಕೂಲವಾಗಿತ್ತು. ದುಡಿದ ಮೊತ್ತದಲ್ಲಿ ಔಷಧಿ, ಮನೆಯ ಖರ್ಚಿಗೆ ಹಣ ಹೊಂದಿಸಿಕೊಳ್ಳಲು ನೆರವಾಗುತ್ತಿತ್ತು. ಹಣ ಬರದೆ ಪರಿಚಯಸ್ಥರ ಬಳಿ ಸಾಲ ಮಾಡಿ ಜೀವನ ನಿರ್ವಹಿಸುವ ಸ್ಥಿತಿ ಮರುಕಳಿಸಿದೆ’ ಎಂದು ಅಂಬ್ರಾಯಿಯ ಮೀರಾ ನಾಯ್ಕ ಹೇಳಿದರು.

‘ಸ್ವಸಹಾಯ ಸಂಘದಲ್ಲಿ ಮಾಡಿದ್ದ ಸಾಲ ತೀರಿಸಲು ಗೃಹಲಕ್ಷ್ಮಿ ಹಣ ನೆರವಿಗೆ ಬಂದಿತ್ತು. ನಾಲ್ಕು ತಿಂಗಳಿನಿಂದ ಹಣ ಪಾವತಿಯಾಗದ ಕಾರಣ ಸಾಲದ ಕಂತು ತುಂಬಲು ಆಗಿಲ್ಲ’ ಎಂದು ಭಟ್ಕಳದ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ಜೂನ್, ಜುಲೈ ತಿಂಗಳಿನ ಮೊತ್ತ ಪಾವತಿ ಬಾಕಿ ಇದೆ. ಮೇ ತಿಂಗಳವರೆಗೂ ಬಹುತೇಕ ಖಾತೆಗಳಿಗೆ ಗೃಹಲಕ್ಷ್ಮಿ ಮೊತ್ತ ಜಮಾ ಆಗಿದೆ ಎಚ್.ಎಚ್.ಕುಕನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ
ಗೃಹಲಕ್ಷ್ಮಿ ಯೋಜನೆಯಡಿ ನೀಡಲಾಗುತ್ತಿದ್ದ ಮೊತ್ತವನ್ನು ಮಹಿಳೆಯರಿಗೆ ನೀಡದೆ ಸರ್ಕಾರ ವಂಚಿಸುತ್ತಿದೆ. ಕೂಡಲೆ ಹಣವನ್ನು ಮಹಿಳೆಯರ ಖಾತೆಗೆ ಪಾವತಿಸಬೇಕು ಸುಜಾತಾ ಬಾಂದೇಕರ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ

ತೆರಿಗೆ ಪಾವತಿಯ ಮಾಹಿತಿಯೇ ಇರಲಿಲ್ಲ!

ಗೃಹಲಕ್ಷ್ಮಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದ ಬಡ ಮಧ್ಯಮ ವರ್ಗದ ಕುಟುಂಬದ ಸಾವಿರಾರು ಮಹಿಳೆಯರಿಗೆ ತೆರಿಗೆ ಪಾವತಿದಾರರು ಎಂಬ ಕಾರಣಕ್ಕೆ ಯೋಜನೆಯಡಿ ಮೊತ್ತ ನೀಡುವುದು ಏಕಾಏಕಿ ಸ್ಥಗಿತಗೊಂಡಿರವುದು ಹಲವರನ್ನು ಕಂಗಾಲಾಗಿಸಿದೆ.

‘ಕೆಲ ತಿಂಗಳು ಗೃಹಲಕ್ಷ್ಮಿ ಮೊತ್ತ ಖಾತೆಗೆ ಬಂದಿತ್ತು. ಕಳೆದ ವರ್ಷದ ಡಿಸೆಂಬರ ತಿಂಗಳಿನಿಂದ ಹಣ ಬರುವುದು ನಿಂತಿತು. ಅಧಿಕಾರಿಗಳನ್ನು ವಿಚಾರಿಸಿದರೆ ತೆರಿಗೆ ಪಾವತಿದಾರರಾಗಿರುವ ಕಾರಣಕ್ಕೆ ನಿಮ್ಮ ಕುಟುಂಬಕ್ಕೆ ಹಣ ಪಾವತಿಯಾಗದು ಎಂದರು. ಅಷ್ಟೇನೂ ಆದಾಯ ಹೊಂದಿರದ ನಾವು ತೆರಿಗೆ ಪಾವತಿದಾರರಲ್ಲ ಎಂದು ಸಾಬೀತುಪಡಿಸಲು ಸಾಕಷ್ಟು ಹೆಣಗಬೇಕಾಗಿ ಬಂತು’ ಎಂದು ಶಿರಸಿ ತಾಲ್ಲೂಕು ಬಂಡಲ ಗ್ರಾಮದ ಮಹಿಳೆಯೊಬ್ಬರು ಹೇಳಿದರು.

‘ಕೆಲವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇನಾಮಿ ಹೆಸರಿನಲ್ಲಿ ಗುತ್ತಿಗೆದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಅಂತಹವರು ಯಾರ ಹೆಸರಿನಲ್ಲಿ ಹೆಸರು ನೋಂದಾಯಿಸಿದ್ದರೊ ಅವರ ಪತ್ನಿಯರಿಗೆ ಹಣ ಪಾವತಿ ಸ್ಥಗಿತಗೊಂಡಿದೆ. ಅಂತಹ ಪ್ರಕರಣವೂ ಸೇರಿದಂತೆ ಸುಮಾರು ಆರೂವರೆ ಸಾವಿರ ಜನರಿಗೆ ಹಣ ಪಾವತಿ ಸ್ಥಗಿತಗೊಂಡಿದ್ದು, ಪುನಃ ಅರ್ಜಿ ಸಲ್ಲಿಸಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.