ಶಿರಸಿ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗಲು ಅರ್ಹರಿದ್ದ ಉತ್ತರ ಕನ್ನಡ ಜಿಲ್ಲೆಯ 992 ಯಜಮಾನಿಯರು ವಿವಿಧ ಕಾರಣಗಳಿಗೆ ಯೋಜನೆಯ ಸೌಲಭ್ಯ ಪಡೆಯಲು ನಿರಾಕರಿಸಿದ್ದಾರೆ.
ರಾಜ್ಯ ಸರ್ಕಾರವು ಯೋಜನೆಯಡಿ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ₹2 ಸಾವಿರ ಜಮಾ ಮಾಡುತ್ತದೆ. ಜಿಲ್ಲೆಯಲ್ಲಿ 2023ರ ಆಗಸ್ಟ್‌ನಿಂದ ಈವರೆಗೆ 3,13,198 ಯಜಮಾನಿಯರು ಯೋಜನೆಯಡಿ ನೋಂದಣಿ ಆಗಿದ್ದಾರೆ. ಇನ್ನೂ ಕೆಲ ತೆರಿಗೆ ಪಾವತಿದಾರರು, ರೇಷನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿದವರೂ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲವು ಯಜಮಾನಿಯರು ಸಲ್ಲಿಸಿದ ದಾಖಲೆಗಳು ತಾಳೆಯಾಗುತ್ತಿಲ್ಲ. ಅವುಗಳ ಪರಿಶೀಲನೆ ನಡೆದಿದೆ.
ಇವೆಲ್ಲವುಗಳ ಹೊರತಾಗಿ ಯೋಜನೆಗೆ ಎಲ್ಲ ರೀತಿಯಲ್ಲೂ ಅರ್ಹರಿರುವ ಜಿಲ್ಲೆಯ ವಿವಿಧ ತಾಲ್ಲೂಕುಗಳ 992 ಯಜಮಾನಿಯರು ಸ್ವಯಂ ಪ್ರೇರಣೆಯಿಂದ ಈ ಯೋಜನೆಯ ಸೌಲಭ್ಯದಿಂದ ಹೊರಗುಳಿದಿದ್ದಾರೆ. ಆಯಾ ತಾಲ್ಲೂಕುಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲಾ ಮಟ್ಟದ ಕಚೇರಿಗೆ ಸಿಕ್ಕ ಮಾಹಿತಿಯಿಂದ ಇದು ದೃಢಪಟ್ಟಿದೆ.
‘ಕೆಲ ಯಜಮಾನಿಯರು ರಾಜಕೀಯ ಪಕ್ಷ, ಸ್ವಾಭಿಮಾನಕ್ಕೆ ಕಟ್ಟುಬಿದ್ದು ಯೋಜನೆಯಿಂದ ಹೊರಗುಳಿದಿರಬಹುದು. ಇನ್ನೂ ಕೆಲವರು ನೋಂದಣಿ ಪ್ರಕ್ರಿಯೆ ಜಟಿಲತೆಯಿಂದ ದೂರ ಉಳಿದಿರಬಹುದು. ಕೆಲ ಫಲಾನುಭವಿಗಳ ಖಾತೆಗೆ ಇನ್ನೂ ಮೊದಲ ಕಂತಿನ ಹಣ ಬಂದಿಲ್ಲ. ಅದಕ್ಕೆ ವ್ಯರ್ಥ ಪ್ರಯತ್ನ ಮಾಡುವುದು ಬೇಡವೆಂದು ಕೈಬಿಟ್ಟಿರಬಹುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದರು.
‘ನಿರಾಕರಣೆಗೆ ಅಧಿಕೃತ ಮತ್ತು ಲಿಖಿತ ಕಾರಣ ಇಲ್ಲ. ಅದಕ್ಕೆ ಕೆಲವರ ಮನವೊಲಿಕೆ ಪ್ರಯತ್ನ ಇಲಾಖೆ ಸಿಬ್ಬಂದಿಯಿಂದ ನಡೆದಿದೆ. ಆದರೆ, ಅಂತಿಮವಾಗಿ ಯಜಮಾನಿ ಒಪ್ಪಿದರೆ ಮಾತ್ರ ನೋಂದಣಿ ಪ್ರಕ್ರಿಯೆ ಸಾಧ್ಯ. ಈವರೆಗೆ ನೋಂದಣಿ ಮಾಡದವರ ಮಾಹಿತಿ ಸಂಗ್ರಹಿಸಲಾಗಿದೆ’ ಎಂದು ಅವರು ತಿಳಿಸಿದರು.
‘ಇಷ್ಟು ವರ್ಷ ಇಂಥ ಉಚಿತ ಯೋಜನೆಯ ಲಾಭ ಪಡೆದಿಲ್ಲ. ಆದರೂ ಜೀವನ ನಿರ್ವಹಿಸಿದ್ದೇವೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಮನಸ್ಸಿಲ್ಲ’ ಎಂದು ಸಿದ್ದಾಪುರದ ಮಂಜುಳಾ ನಾಯ್ಕ ತಿಳಿಸಿದರು.
‘ಜನಸಾಮಾನ್ಯರ ತೆರಿಗೆ ಹಣದಿಂದ ಸರ್ಕಾರ ನೀಡುವ ಉಚಿತ ಸೌಲಭ್ಯ ಪಡೆಯಲು ಸ್ವಾಭಿಮಾನ ಅಡ್ಡ ಬರುತ್ತದೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿಲ್ಲ’ ಎಂದು ಶಿರಸಿಯ ಪ್ರೇಮಾ ಹೆಗಡೆ ಹೇಳಿದರು.
ಅಂಕಿ–ಅಂಶ (ಗೃಹಲಕ್ಷ್ಮಿ ಯೋಜನೆ ನಿರಾಕರಣೆ:ತಾಲ್ಲೂಕುವಾರು ಮಾಹಿತಿ)
ತಾಲ್ಲೂಕು: ಸಂಖ್ಯೆ
ಕಾರವಾರ: 263
ಕುಮಟಾ: 202
ಶಿರಸಿ: 144
ಅಂಕೋಲಾ 116
ಹೊನ್ನಾವರ:90
ಯಲ್ಲಾಪುರ: 68
ಜೊಯಿಡಾ: 54
ಭಟ್ಕಳ: 21
ಸಿದ್ದಾಪುರ: 20
ಹಳಿಯಾಳ: 09
ದಾಂಡೇಲಿ: 5
ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಸಂಬಂಧಿಸಿ ಮನೆ ಯಜಮಾನಿಯನ್ನು ಗುರುತಿಸಲು ಅಂಗನವಾಡಿ ಕಾರ್ಯಕರ್ತೆಯರು ತೆರಳಿದಾಗ ಯೋಜನೆ ಸೌಲಭ್ಯ ಬೇಡವೆಂದು ಯಜಮಾನಿಯರು ಹೇಳುತ್ತಿದ್ದಾರೆ.ಎಚ್.ಎಚ್.ಕುಕನೂರ, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.