ಮುಂಡಗೋಡ: ಶಾಸಕ ಶಿವರಾಮ ಹೆಬ್ಬಾರ ಅವರ ರಾಜೀನಾಮೆ ಕೇಳುವ ನೈತಿಕ ಹಕ್ಕು ಬಿಜೆಪಿ ಮುಖಂಡರಿಗೆ ಇಲ್ಲ. ಜಿಲ್ಲಾ ಘಟಕಕ್ಕೆ ತಾಕತ್ತು ಇದ್ದರೆ ಶಾಸಕ ಹೆಬ್ಬಾರ ಅವರನ್ನು ಬಿಜಿಪಿಯಿಂದ ಉಚ್ಚಾಟನೆ ಮಾಡಲಿ ಎಂದು ಈಚೆಗೆ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡಿರುವ ವಕೀಲ ಗುಡ್ಡಪ್ಪ ಕಾತೂರ ಬಿಜೆಪಿಗೆ ಸವಾಲು ಹಾಕಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್.ಟಿ.ಪಾಟೀಲ ಅವರು, 2018ರಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾಗಲೇ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಆಗೇಕೆ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಿಲ್ಲ. ಅಲ್ಲದೇ ಎಲ್.ಟಿ.ಪಾಟೀಲ ಅವರು ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆ ಆಗಲು ಶಾಸಕ ಹೆಬ್ಬಾರ ಅವರೇ ಕಾರಣರಾಗಿದ್ದಾರೆ. ಅದನ್ನು ಅವರು ಮರೆಯಬಾರದು. ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಯಾರು ಯಾರ ಪರವಾಗಿ ಕೆಲಸ ಮಾಡಿದ್ದಾರೆ ಎಂಬುದು ತಾಲ್ಲೂಕಿನ ಜನತೆಗೆ ಗೊತ್ತಿದೆ. ಶಾಸಕ ಹೆಬ್ಬಾರ ಅವರ ವಿರುದ್ಧ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿಗೌಡ ಪಾಟೀಲ ಮಾತನಾಡಿ, ಶಾಸಕ ಹೆಬ್ಬಾರ ಅವರು ತಾವು ಮಾಡಿರುವ ಅಭಿವೃದ್ಧಿ ಕೆಲಸಗಳಿಂದ ನಾಲ್ಕು ಬಾರಿ ಶಾಸಕರಾಗಿ ಈ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಾರೆ. ಈಗಲೂ ನಾವು ಹೆಬ್ಬಾರ ಅವರ ಬೆಂಬಲಿಗರಾಗಿದ್ದೇವೆ. ಮುಂಬರುವ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಹೆಬ್ಬಾರ ಅಭಿಮಾನಿಗಳ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ. ನಾವು ಯಾವುದೇ ಪಕ್ಷದಲ್ಲಿ ಇದ್ದರೂ, ಆ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತೇವೆ ಎಂದರು.
ಮುಖಂಡ ನಾಗಭೂಷಣ ಹಾವಣಗಿ ಮಾತನಾಡಿ, ಶಾಸಕ ಹೆಬ್ಬಾರ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಸ್ವಪಕ್ಷಿಯರೇ ಪ್ರಯತ್ನ ಮಾಡಿದ್ದರು. ಇದರಿಂದ ನೊಂದಿದ್ದಾರೆ. ಬಿಜೆಪಿಯವರು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಸಿದ್ದು ಹಡಪದ, ಶೇಖರ ಲಮಾಣಿ, ವೈ.ಪಿ.ಪಾಟೀಲ, ಪ್ರಮೋದ ಢವಳೆ, ಎಂ.ಪಿ ಕುಸೂರ, ದೇವು ಪಾಟೀಲ, ರಾಜು ಗುಬ್ಬಕ್ಕನವರ, ಎಫ್.ಡಿ.ಗುಲ್ಯಾನವರ, ಉದಯ ಕುಸೂರ ಇನ್ನಿತರ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.