ಶಿರಸಿ: ಜಗತ್ತು ಜ್ಞಾನದ ಹಿಂದೆ ಓಡಲು ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಹೆಚ್ಚಬೇಕು ಎಂದು ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸೀತಾರಾಮ ಕೆದಿಲಾಯ ಹೇಳಿದರು.
ಪ್ರಬೋಧಿನಿ ಗುರುಕುಲಮ್ ನೇತೃತ್ವದಲ್ಲಿ ಭಾನುವಾರ ಇಲ್ಲಿ ಆಯೋಜಿಸಿದ್ದ 'ಭಾರತೀಯ ಶಿಕ್ಷಣ ದರ್ಶನ- ಗುರುಕುಲ ಪ್ರಸ್ತುತತೆ' ಕುರಿತು ಗುರುಕುಲ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವನು ದಾನವನಂತಾಗದೇ ಮಾನವನಂತೆ ಬದುಕಲು ಶಿಕ್ಷಣ ಬೇಕು. ವ್ಯಕ್ತಿತ್ವ ದೈವತ್ವಕ್ಕೆ ಏರುವಂತೆ ಮಾಡಲು ಶಿಕ್ಷಣ ಪೂರಕ. ಗುರುಕುಲ ಎಂದರೆ ದೊಡ್ಡ ಕುಟುಂಬವಾಗಿದೆ. ಬದುಕುವುದನ್ನು ಕಲಿಯುವ ಜಾಗ ಅದಾಗಿದೆ. ಹಾಗಾಗಿ ಗುರುಕುಲದಿಂದ ಸಂಸ್ಕಾರ ಪಡೆದವರು ಮೌಲ್ಯಗಳ ಜೊತೆ ಬದುಕು ಸಾಗಿಸಬಹುದು ಎಂದರು.
‘ನಮ್ಮೊಳಗಿನ ಜ್ಞಾನವು ಪ್ರಕಾಶದ ಮೂಲಕ ಜಗತ್ತಿಗೆ ಬೆಳಕಾಗುವ ಕಾರ್ಯ ಆಗುತ್ತದೆ. ವೇದವೆಂಬ ಜ್ಞಾನವಿಜ್ಞಾನ, ಯೋಗವೆಂಬ ಜೀವ ವಿಜ್ಞಾನ, ಗೀತೆಯೆಂಬ ಮನೋವಿಜ್ಞಾನ, ಆಯುರ್ವೇದವೆಂಬ ಆರೋಗ್ಯವಿಜ್ಞಾನ, ಸಂಸ್ಕೃತವೆಂಬ ಭಾಷಾ ವಿಜ್ಞಾನವನ್ನು ಭಾರತದಿಂದ ಈ ಪ್ರಪಂಚ ಬಯಸುತ್ತಿದೆ. ಜಗತ್ತಿನ ಈ ನಿರೀಕ್ಷೆ ಇಂಗಿಸುವ ವ್ಯಕ್ತಿತ್ವ ನಿರ್ಮಿಸಬೇಕು. ಅದಕ್ಕೆ ಗುರುಕುಲಗಳು ಪೂರಕವಾಗಿವೆ’ ಎಂದು ಹೇಳಿದರು.
ಗುರುಕುಲ ವ್ಯವಸ್ಥಾಪಕ ಉಮೇಶ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಧಮಂಡಲೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಚ್.ಬಿ.ರಾಜಗೋಪಾಲ್, ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆ ನಿರ್ದೇಶಕ ಲೋಕೇಶ ಹೆಗಡೆ ಇದ್ದರು. ಆರ್.ಡಿ.ಹೆಗಡೆ ಜಾನ್ಮನೆ ಸ್ವಾಗತಿಸಿದರು. ಗುರುಪ್ರಸಾದ ಹೆಗಡೆ ಹರ್ತೆಬೈಲ್ ಗುರುಕುಲದ ಕುರಿತು ದೃಶ್ಯ ಮಾಹಿತಿ ನೀಡಿದರು. ಕೇಶವ ಮರಾಠೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.