ADVERTISEMENT

ಗಟಾರ ಸಮಸ್ಯೆ; ಕೆಡುತ್ತಿದೆ ರಸ್ತೆ

ಮೂಲಸೌಲಭ್ಯ ಕೊರತೆಯಿಂದ ಕಂಗೆಟ್ಟಿದೆ ಸನವಳ್ಳಿ

​ಶಾಂತೇಶ ಬೆನಕನಕೊಪ್ಪ
Published 25 ಸೆಪ್ಟೆಂಬರ್ 2024, 6:33 IST
Last Updated 25 ಸೆಪ್ಟೆಂಬರ್ 2024, 6:33 IST
ಮುಂಡಗೋಡ ತಾಲ್ಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸನವಳ್ಳಿ ಗ್ರಾಮದ ಮುಖ್ಯ ರಸ್ತೆಯ ಎಡ–ಬಲದಲ್ಲಿ ಪಕ್ಕಾ ಗಟಾರ ಇಲ್ಲ
ಮುಂಡಗೋಡ ತಾಲ್ಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸನವಳ್ಳಿ ಗ್ರಾಮದ ಮುಖ್ಯ ರಸ್ತೆಯ ಎಡ–ಬಲದಲ್ಲಿ ಪಕ್ಕಾ ಗಟಾರ ಇಲ್ಲ   

ಮುಂಡಗೋಡ: ಊರ ಆರಂಭದಲ್ಲಿಯೇ ಗೋಡೆ ಬಿದ್ದು ಹಾನಿಯಾಗಿರುವ ಬಸ್‌ ನಿಲ್ದಾಣ ಸ್ವಾಗತಿಸುತ್ತಿದೆ. ಕಿತ್ತು ಹೋದ ಡಾಂಬರು ರಸ್ತೆಯಲ್ಲಿ ಓಡಾಟ ಜನರಿಗೆ ಅನಿವಾರ್ಯ. ಊರಿನ ಮುಖ್ಯ ರಸ್ತೆಯ ಎಡ–ಬಲದಲ್ಲಿ ಪಕ್ಕಾ ಗಟಾರವೇ ಇಲ್ಲ. ಅಸಮರ್ಪಕ ಜೆಜೆಎಂ ಕಾಮಗಾರಿಯಿಂದ ರಸ್ತೆಗಳು ಅಧ್ವಾನಗೊಂಡಿವೆ. ಇದು ತಾಲ್ಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸನವಳ್ಳಿ ಗ್ರಾಮದ ಚಿತ್ರಣ.

ಪಟ್ಟಣದಿಂದ ನಾಲ್ಕೈದು ಕಿಮೀ ಅಂತರದಲ್ಲಿರುವ ಈ ಗ್ರಾಮದಲ್ಲಿ, ಇನ್ನೂ ಮೂಲಸೌಕರ್ಯಗಳು ಬೇಡಿಕೆ ಪಟ್ಟಿಯಲ್ಲೇ ಇವೆ. ಬೀದಿ ದೀಪಗಳು ಹಗಲಿನಲ್ಲಿಯೂ ಉರಿಯುವುದು ಈ ಗ್ರಾಮದ ವಿಶೇಷ. ಅಸಮರ್ಪಕ ಚರಂಡಿ ವ್ಯವಸ್ಥೆ ಗ್ರಾಮದ ರಸ್ತೆಗಳನ್ನು ಹಾಳು ಮಾಡುತ್ತಿದೆ. ಗುಣಮಟ್ಟದ ಕಾಂಕ್ರೀಟ್‌ ರಸ್ತೆಗಳ ಕೊರತೆ ಎದ್ದು ಕಾಣುತ್ತಿದೆ. ಕಾಂಕ್ರೀಟ್‌ ರಸ್ತೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ.

‘ರಾಜ್ಯ ಹೆದ್ದಾರಿಗೆ ತಾಗಿಯೇ ಇರುವ ಸನವಳ್ಳಿ ಪ್ಲಾಟ್‌ನ ಬಸ್‌ ನಿಲ್ದಾಣ ಸೂಕ್ತ ನಿರ್ವಹಣೆಯಿಲ್ಲದೇ ಪಾಳು ಬಿದ್ದಂತಾಗಿದೆ. ಜನರು ನಿಲ್ದಾಣದ ಹೊರಗೆ ನಿಂತು ಬಸ್‌ಗಾಗಿ ಕಾಯುವ ಪರಿಸ್ಥಿತಿ ಇದೆ. ಸನವಳ್ಳಿ ಜಲಾಶಯದಿಂದ ಹೊಲಗದ್ದೆಗಳಿಗೆ ನೀರು ಹರಿಯಲು ಪೂರಕ ಕಾಲುವೆಯಿದ್ದು, ಅದರ ಪಕ್ಕದಲ್ಲಿ ಇರುವ ಕಚ್ಚಾ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಹೊಲಗದ್ದೆಗಳಿಗೆ ತೆರಳಲು ಸೂಕ್ತ ರಸ್ತೆ ಇಲ್ಲದೇ ರೈತರು ಮಳೆಗಾಲದಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥ ಸಂತೋಷ.

ADVERTISEMENT

‘ಸನವಳ್ಳಿ ಗ್ರಾಮವು ಜಲಾಶಯದಿಂದ ಹೆಚ್ಚು ಹೆಸರು ಪಡೆದಿದೆ. ಜಲಾಶಯದ ದಡಭಾಗದಲ್ಲಿ ಇರುವ ಉದ್ಯಾನ ಪಾಳುಬಿದ್ದಿದೆ. ಇನ್ನೊಂದು ಬದಿಗೆ ಬಸ್‌ ನಿಲ್ದಾಣದ ಗೋಡೆಗಳು ಬೀಳಲು ದಿನಗಳನ್ನು ಎಣಿಸುತ್ತಿವೆ. ಜಲಾಶಯದ ಸೌಂದರ್ಯ ಹೆಚ್ಚಿಸಲು ಇವೆರಡೂ ಅಡ್ಡಿಯಾಗಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಗಮನಹರಿಸದಿರುವುದು ನೋವಿನ ಸಂಗತಿ. ಕಾಲ ಕಾಲಕ್ಕೆ ಸನವಳ್ಳಿ ಜಲಾಶಯದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿದರೆ, ಪ್ರವಾಸೋದ್ಯಮ ದೃಷ್ಟಿಯಿಂದ ಹೆಚ್ಚು ಅನುಕೂಲವಾಗುತ್ತದೆ’ ಎಂದು ದಲಿತ ಸಂಘರ್ಷ ಸಮಿತಿಯ ಯುವಮುಖಂಡ ಪರುಶುರಾಮ ಹೇಳಿದರು.

‘ಗ್ರಾಮದಲ್ಲಿ ಹಾದು ಹೋಗಿರುವ ಮುಖ್ಯ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದಾಗಿದೆ. ನಿರ್ವಹಣೆ ಕೊರತೆಯಿಂದ ಡಾಂಬರು ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ. ಈ ರಸ್ತೆಗೆ ತಾಗಿಯೇ ಪಕ್ಕಾ ಗಟಾರ ನಿರ್ಮಾಣ ಮಾಡುವುದು ಬಾಕಿಯಿದೆ. ಸನವಳ್ಳಿಯಿಂದ ಅಜ್ಜಳ್ಳಿವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಜನರಿಗೆ ಅನುಕೂಲ’ ಎಂದು ಗ್ರಾಮಸ್ಥ ರಾಜು ಗುಬ್ಬಕ್ಕನವರ ಹೇಳಿದರು.

ಹೀಗೆ ಸುಮಾರು ಇನ್ನೂರರಷ್ಟು ಕುಟುಂಬಗಳಿರುವ ಗ್ರಾಮದಲ್ಲಿ, ಎಲ್ಲವೂ ಇದೆ ಎಂದು ಅನಿಸಿದರೂ, ಇನ್ನಷ್ಟು ಬೇಕು ಎಂದು ಅನಿಸದೇ ಇರಲಾರದು.

ಸನವಳ್ಳಿ ಗ್ರಾಮದ ಮುಖ್ಯ ರಸ್ತೆಯು ಪಿಡಬ್ಲುಡಿ ಅವರಿಗೆ ಸಂಬಂಧಿಸಿದ್ದು ರಸ್ತೆ ದುರಸ್ತಿಯಾಗದ ಹೊರತು ಪಕ್ಕಾ ಗಟಾರ ಮಾಡಲು ಸಾಧ್ಯವಾಗುವುದಿಲ್ಲ.
– ಗುರುಪ್ರಸನ್ನ, ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.