ADVERTISEMENT

ಕಾರವಾರ: ‘ತೀಳಮಾತಿ’ಗೆ ತೂಗುಸೇತುವೆ ಮರೀಚಿಕೆ?

ಸ್ಥಳೀಯರಿಂದ ಹೆಚ್ಚಿದ ಬೇಡಿಕೆ: ಬಂದರು ನಿರ್ಮಾಣದಿಂದ ಅಡ್ಡಿಯಾಗುವ ಆತಂಕ

ಗಣಪತಿ ಹೆಗಡೆ
Published 9 ಜುಲೈ 2024, 5:47 IST
Last Updated 9 ಜುಲೈ 2024, 5:47 IST
ತೀಳಮಾತಿ ಕಡಲತೀರಕ್ಕೆ ತೂಗುಸೇತುವೆ ನಿರ್ಮಿಸಲು ಗುರುತಿಸಿದ್ದ ಗಾಬೀತವಾಡಾದ ಸ್ಥಳ
ತೀಳಮಾತಿ ಕಡಲತೀರಕ್ಕೆ ತೂಗುಸೇತುವೆ ನಿರ್ಮಿಸಲು ಗುರುತಿಸಿದ್ದ ಗಾಬೀತವಾಡಾದ ಸ್ಥಳ   

ಕಾರವಾರ: ದೇಶದಲ್ಲಿರುವ ಎರಡು ಅಪರೂಪದ ಕಪ್ಪು ಮರಳಿನ ಕಡಲತೀರಗಳಲ್ಲಿ ಒಂದೆನಿಸಿರುವ ತಾಲ್ಲೂಕಿನ ಮಾಜಾಳಿ ಸಮೀಪದ ‘ತೀಳಮಾತಿ ಕಡಲತೀರ’ಕ್ಕೆ ತೂಗು ಸೇತುವೆ ನಿರ್ಮಿಸುವ ಯೋಜನೆ ಈ ಹಿಂದೆ ರಾಜಕೀಯ ಮೇಲಾಟದಿಂದ ಸ್ಥಗಿತಗೊಂಡಿತ್ತು. ಈ ಬಾರಿ ಉದ್ದೇಶಿತ ಮೀನುಗಾರಿಕೆ ಬಂದರು ಯೋಜನೆಯಿಂದ ಸ್ಥಗಿತಗೊಳ್ಳಬಹುದು ಎಂಬ ಆತಂಕ ಶುರುವಾಗಿದೆ.

ಮಾಜಾಳಿಯ ಗಾಬೀತವಾಡಾದ ಕಡಲತೀರದಿಂದ ತೀಳಮಾತಿ ಸಂಪರ್ಕಿಸಲು ಗುಡ್ಡದ ಗುಂಟ ಸುಮಾರು 600 ಮೀ. ಉದ್ದದ ತೂಗು ಸೇತುವೆ ನಿರ್ಮಿಸುವ ಯೋಜನೆ ರೂಪುಗೊಂಡಿತ್ತು. 2013–14ನೇ ಸಾಲಿನಲ್ಲಿ ನಬಾರ್ಡ್ ವತಿಯಿಂದ ಪ್ರವಾಸೋದ್ಯಮ ಇಲಾಖೆಗೆ ಗ್ರಾಮೀಣ ಅಭಿವೃದ್ಧಿ ಅನುದಾನದಡಿ ₹2.30 ಕೋಟಿ ಮತ್ತು ಸಂಪರ್ಕ ರಸ್ತೆ ನಿರ್ಮಾಣಕ್ಕೆ ₹1.50 ಕೋಟಿ ಅನುದಾನ ಬಿಡುಗಡೆ ಆಗಿತ್ತು.

2016–17ನೇ ಸಾಲಿನಲ್ಲಿ ಯೋಜನೆಗೆ ಟೆಂಡರ್ ಕರೆಯಲಾಗಿತ್ತು. ಗುತ್ತಿಗೆ ಪಡೆದಿದ್ದ ಮಂಗಳೂರು ಮೂಲದ ಗುತ್ತಿಗೆದಾರ ಕಾಮಗಾರಿ ಆರಂಭಿಸಿರಲಿಲ್ಲ. ಹೀಗಾಗಿ ಟೆಂಡರ್ ರದ್ದುಪಡಿಸಲಾಗಿತ್ತು. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆದಿರಲಿಲ್ಲ. ಇದೇ ವಿಚಾರ ಮುಂದಿಟ್ಟು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ಯುದ್ಧ ನಡೆದಿದ್ದವು.

ADVERTISEMENT

ಸೇತುವೆ ಮಂಜೂರು ಮಾಡಿಸಿಕೊಳ್ಳುವಲ್ಲಿ ಪ್ರಯತ್ನಿಸಿದ್ದ ಸತೀಶ ಸೈಲ್ ಪುನಃ ಶಾಸಕರಾದ ಬಳಿಕ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾತಿಗೆ ಪ್ರಯತ್ನ ನಡೆಸಿದ್ದರು. ಹೀಗಾಗಿ, ಕಳೆದ ವರ್ಷದ ಅಕ್ಟೋಬರ್ ವೇಳೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸೇತುವೆ ನಿರ್ಮಿಸಲು ₹5 ಕೋಟಿ ಮೊತ್ತದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು.

ತೂಗು ಸೇತುವೆ ನಿರ್ಮಿಸಲು ಉದ್ದೇಶಿಸಿದ ಜಾಗದ ಸಮೀಪದಲ್ಲಿಯೇ ಮೀನುಗಾರಿಕೆ ಬಂದರು ಸ್ಥಾಪನೆಯಾಗಲಿದೆ ಎಂಬುದಾಗಿ ಬಂದರು ಇಲಾಖೆ ಅಧಿಕಾರಿಗಳು ಶಾಸಕರ ಗಮನಸೆಳೆದಿದ್ದಾರೆ. ಉದ್ದೇಶಿತ ಯೋಜನೆಯ ನೀಲ ನಕ್ಷೆಯಲ್ಲಿ ತೀಳಮಾತಿಗೆ ಸಂಪರ್ಕ ಕಲ್ಪಿಸುವ ಗುಡ್ಡದ ಪಕ್ಕದಲ್ಲಿರುವ ಹಳ್ಳದಿಂದಲೇ ಅಲೆ ತಡೆಗೋಡೆ ನಿರ್ಮಿಸುವ ಪ್ರಸ್ತಾಪವಿದೆ ಎಂದೂ ತಿಳಿಸಿದ್ದಾರೆ.

‘ಮಾಜಾಳಿಯಲ್ಲಿ ಮೀನುಗಾರಿಕೆ ಬಂದರು ಸ್ಥಾಪನೆಗೆ ವಿರೋಧವಿಲ್ಲ. ಆದರೆ ಬಂದರು ಯೋಜನೆ ನೆಪದಲ್ಲಿ ತೀಳಮಾತಿಗೆ ಸಂಪರ್ಕ ಕಲ್ಪಿಸುವ ಮಾರ್ಗಕ್ಕೆ ಅಡ್ಡಿಪಡಿಸಬಾರದು. ತೂಗುಸೇತುವೆ ನಿರ್ಮಾಣಕ್ಕೆ ಜಾಗ ಬಿಟ್ಟು ಬಂದರು ಯೋಜನೆ ಕೈಗೆತ್ತಿಕೊಳ್ಳಲಿ’ ಎಂದು ಸ್ಥಳೀಯ ಕೃಷ್ಣ ಮೇಥಾ ಒತ್ತಾಯಿಸುತ್ತಾರೆ.

ಕಾರವಾರ ತಾಲ್ಲೂಕಿನ ಮಾಜಾಳಿ ಸಮೀಪದಲ್ಲಿರುವ ಕಪ್ಪು ಮರಳಿನ ತೀಳಮಾತಿ ಕಡಲತೀರ
ತೀಳಮಾತಿ ಕಡಲತೀರಕ್ಕೆ ತೂಗುಸೇತುವೆಗೆ ಅನುದಾನ ಮಂಜೂರು ಮಾಡಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಲಾಗುವುದು. ಮೀನುಗಾರಿಕೆ ಬಂದರು ಯೋಜನೆಯಿಂದ ತೂಗುಸೇತುವೆಗೆ ಅಡ್ಡಿಯಾಗದಂತೆ ಯೋಜನೆಗೆ ಮಾರ್ಪಾಡು ಮಾಡಲು ಒತ್ತಾಯಿಸಲಾಗುವುದು
ಸತೀಶ ಸೈಲ್ ಶಾಸಕ
ತೂಗು ಸೇತುವೆ ಏಕೆ?
ತೀಳಮಾತಿ ಕಡಲತೀರಕ್ಕೆ ಸಾಗಲು ಮಾಜಾಳಿಯ ಗಾಬೀತವಾಡಾ ಕಡಲತೀರದಿಂದ ಸುಮಾರು ಒಂದೂವರೆ ಕಿ.ಮೀ. ದೂರ ಗುಡ್ಡ ಹತ್ತಿ ಸಾಗಬೇಕು. ಕಡಿದಾದ ರಸ್ತೆಯಲ್ಲಿ ಸಾಗುವುದು ಅಪಾಯಕಾರಿಯೂ ಹೌದು. ಸಮುದ್ರದ ಅಲೆಗಳು ಅಬ್ಬರಿಸಿದರೆ ರಸ್ತೆಯೂ ಕಡಿತಗೊಳ್ಳುತ್ತದೆ. ಅಲ್ಲದೆ ಮಕ್ಕಳು ವೃದ್ಧರು ಮಹಿಳೆಯರು ಕಡಿದಾದ ದಾರಿಯಲ್ಲಿ ಸಾಗುವುದೂ ಕಷ್ಟವಿದೆ. ಇದೇ ಕಾರಣಕ್ಕೆ ಸೇತುವೆ ಅಥವಾ ತೂಗು ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.