ADVERTISEMENT

ಹಾರವಾಡ: ನೆಮ್ಮದಿ ಕದಡಿದ ಅರಬ್ಬಿ ಅಲೆ

ಕಡಲತೀರದ ಊರಿನಲ್ಲಿ ನೀರಿಗೆ ಬರ, ಬಂಜರು ಬಿದ್ದ ನೆಲ

ಗಣಪತಿ ಹೆಗಡೆ
Published 28 ಆಗಸ್ಟ್ 2024, 4:19 IST
Last Updated 28 ಆಗಸ್ಟ್ 2024, 4:19 IST
ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಂಗಮೇಟದಲ್ಲಿ ಜನವಸತಿ ಪ್ರದೇಶದ ಸಮೀಪದಲ್ಲೇ ಕಡಲು ಕೊರೆತ ಉಂಟಾಗಿರುವುದು
ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಂಗಮೇಟದಲ್ಲಿ ಜನವಸತಿ ಪ್ರದೇಶದ ಸಮೀಪದಲ್ಲೇ ಕಡಲು ಕೊರೆತ ಉಂಟಾಗಿರುವುದು    

ಕಾರವಾರ: ‘ಮಳೆಗಾಲದಲ್ಲಿ ಸಮುದ್ರದ ಅಲೆಗಳು ಅಬ್ಬರಿಸಿ ಮನೆಗಳನ್ನು ಕೆಡವಿ ಹಾಕುತ್ತವೆ. ಬೇಸಿಗೆಯಲ್ಲಿ ಜಲಮೂಲಗಳಿಗೆ ನುಗ್ಗಿ ಕುಡಿಯಲು ನೀರು ಸಿಗದಂತೆ ಮಾಡುತ್ತವೆ’...

ಹೀಗೆ ಅರಬ್ಬಿ ಸಮುದ್ರ ಎಬ್ಬಿಸುವ ಹಾವಳಿಯ ಬಗ್ಗೆ ಅಂಕೋಲಾ ತಾಲ್ಲೂಕು ಹಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಂಗಮೇಟ್ ಗ್ರಾಮದ ಸದಾನಂದ ತಾಂಡೇಲ ಸಮಸ್ಯೆ ವಿವರಿಸಿದರು.

ಅರಬ್ಬಿ ಸಮುದ್ರದ ಅಲೆಗಳ ಅಬ್ಬರಕ್ಕೆ ಬಿದ್ದು ಹೋದ ಗ್ರಾಮದ ಹತ್ತಾರು ಮನೆಗಳ ಅವಶೇಷಗಳತ್ತ ಕೈತೋರಿಸಿದ ಅವರು, ‘ಗ್ರಾಮಸ್ಥರು ಪ್ರತಿ ವರ್ಷ ಮಳೆಗಾಲದಲ್ಲಿ ಎದುರಿಸುವ ಸ್ಥಿತಿ ಇದು’ ಎನ್ನುತ್ತ ಬೇಸರಿಸಿದರು.

ADVERTISEMENT

‘ಜೀವನೋಪಾಯಕ್ಕೆ ಮೀನುಗಾರಿಕೆ ಅವಲಂಬಿಸಿದ ತರಂಗಮೇಟ್, ಗಾಬೀತವಾಡಾ ಗ್ರಾಮಗಳ 250ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳು ಮಳೆಗಾಲದಲ್ಲಿ ಜೀವ ಕೈಲಿ ಹಿಡಿದು ದಿನ ಕಳೆಯಬೇಕಾಗುತ್ತದೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಊರು ಸಮುದ್ರ ಪಾಲಾಗಿಬಿಡಬಹುದು ಎಂಬ ಆತಂಕದಲ್ಲೇ ಪುರುಷರೆಲ್ಲ ಎಚ್ಚರ ಇದ್ದು ಕಾಯುತ್ತೇವೆ’ ಎಂದು ಗ್ರಾಮದ ಹಿರಿಯ ತೆಕ್ಕು ದುರ್ಗೇಕರ ಹೇಳುವಾಗ ಅವರ ಮುಖದಲ್ಲಿ ಆತಂಕದ ಛಾಯೆ ಎದ್ದು ಕಾಣುತ್ತಿತ್ತು.

ಕಡಲು ಕೊರೆತ ಹಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಸಮಸ್ಯೆ ಆಗಿದೆ. ತರಂಗಮೇಟ, ಗಾಬೀತವಾಡಾ, ಒಕ್ಕಲಕೇರಿ, ನಡುವಿನಕೇರಿ ಮಜರೆಗಳನ್ನು ಒಳಗೊಂಡ ಇಲ್ಲಿ 1,094 ರಷ್ಟು ಮನೆಗಳಿದ್ದು, 4,900ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬಹುಪಾಲು ಜನರು ಕಡಲತೀರದ ಸಮೀಪದಲ್ಲೇ ವಾಸವಿದ್ದಾರೆ.

‘ಕಡಲತೀರದಿಂದ ಸ್ವಲ್ಪ ದೂರದಲ್ಲಿರುವ ಕೃಷಿಭೂಮಿಯಲ್ಲಿ ಹಿಂದೆ ಭತ್ತ, ಈರುಳ್ಳಿ, ಶೇಂಗಾ ಮುಂತಾದ ಬೆಳೆ ಬೆಳೆಯುತ್ತಿದ್ದರು. ಸಮುದ್ರದ ಉಪ್ಪುನೀರು ಗದ್ದೆಗಳಿಗೆ ನುಗ್ಗಿ ಭೂಮಿ ಹಾಳಾಗಲು ಆರಂಭಿಸಿದ ನಂತರ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಕೃಷಿಗೆ ಭೂಮಿಯೂ ಯೋಗ್ಯವಾಗಿಲ್ಲ’ ಎನ್ನುತ್ತಾರೆ ಗಾಬೀತವಾಡಾದ ದಿನೇಶ ನಾಯ್ಕ.

‘ಖಾರಲ್ಯಾಂಡ್ ಒಡ್ಡು ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಕ್ಕೆ ಲೆಕ್ಕ ಇಲ್ಲ. ಪ್ರತಿ ಚುನಾವಣೆ ವೇಳೆ ಒಡ್ಡು ಭರವಸೆಯ ವಿಷಯವಾಗುತ್ತದೆ. ಮತ ಎಣಿಕೆ ಮುಗಿದ ಮೇಲೆ ಜನಪ್ರತಿನಿಧಿಗಿಗೆ ತಾವ ಕೊಟ್ಟ ಭರವಸೆಯೇ ಮರೆತುಹೋಗುತ್ತಿದೆ. ಇಲ್ಲಿನ ಜನರು ಕೃಷಿ ಮಾಡಲಾಗದೆ ಪಟ್ಟಣಗಳಿಗೆ ಕೂಲಿ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ತರಂಗಮೇಟ ಗ್ರಾಮದಲ್ಲಿ ಕಡಲು ಕೊರೆತದ ಪರಿಣಾಮ ಮನೆಯೊಂದು ಹಾನಿಗೆ ಒಳಗಾಗಿದೆ
ತರಂಗಮೇಟ ಗಾಬೀತವಾಡಾ ಭಾಗದಲ್ಲಿ ಕಡಲು ಕೊರೆತ ತಡೆಗೆ ಶೀಘ್ರವೇ ಅಲೆ ತಡೆಗೋಡೆ ನಿರ್ಮಿಸುವಂತೆ ಒತ್ತಾಯಿಸಲಾಗಿದೆ. ಕಾಮಗಾರಿ ನಡೆಯದಿದ್ದರೆ ಗ್ರಾಮಸ್ಥರೆಲ್ಲ ಸೇರಿ ಹೋರಾಟ ನಡೆಸುತ್ತೇವೆ.
ಸಂತೋಷ ದುರ್ಗೇಕರ ಹಾರವಾಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ

ನೀರಿಗೂ ಹಾಹಾಕಾರ

‘ಸಾಕಷ್ಟು ಜಲಮೂಲಗಳಿದ್ದರೂ ಮಳೆಗಾಲ ಮುಗಿದ ಬಳಿಕ ಉಪ್ಪುನೀರು ನುಗ್ಗುವ ಸಮಸ್ಯೆ ಆರಂಭಗೊಳ್ಳುತ್ತದೆ. ಗ್ರಾಮದ ಬಹುತೇಕ ಕಡೆಗಳಲ್ಲಿ ಕುಡಿಯಲು ನೀರಿನ ಅಭಾವ ತಲೆದೋರುತ್ತದೆ. ನೀರು ತರಲು ಕಿ.ಮೀ. ಗಟ್ಟಲೆ ದೂರಕ್ಕೆ ಸಾಗಬೇಕಾಗುತ್ತದೆ. ಕೆಲವೊಮ್ಮೆ ಟ್ಯಾಂಕರ್ ನೀರು ತಂದುಕೊಂಡ ಉದಾಹರಣೆಯೂ ಇದೆ. ಗ್ರಾಮದಲ್ಲಿನ ಹಲವೆಡೆ ಸುಸಜ್ಜಿತ ರಸ್ತೆಯೂ ಇಲ್ಲ. ಮಳೆಯ ಅಬ್ಬರಕ್ಕೆ ರಸ್ತೆಗಳು ಕಿತ್ತೆದ್ದು ಹೋಗಿವೆ’ ಎಂದು ಗಣರಾಜ ಸಾದಿಯೆ ದೂರಿದರು. ‘ಜಲಜೀವನ್ ಮಿಷನ್ ಅಡಿ ಮನೆ ಮನೆಗೆ ನೀರಿನ ಸಂಪರ್ಕ ನೀಡುವ ಕೆಲಸ ನಡೆಯುತ್ತಿದೆ. ವಿಶೇಷ ಅನುದಾನ ಗ್ರಾಮ ಪಂಚಾಯಿತಿ ಅನುದಾನ ಬಳಸಿ ರಸ್ತೆಯ ಅಗತ್ಯವಿದ್ದಲ್ಲಿ ನಿರ್ಮಾಣ ಕೆಲಸವೂ ನಡೆದಿದೆ’ ಎಂದು ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮಿ ಗೌಡ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.