ADVERTISEMENT

ಭಟ್ಕಳದಲ್ಲಿ ಪ್ರವಾಹ ಪರಿಸ್ಥಿತಿ: ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 1:59 IST
Last Updated 2 ಆಗಸ್ಟ್ 2022, 1:59 IST
ಭಟ್ಕಳದ ಜನವಸತಿ ಪ್ರದೇಶದಲ್ಲಿ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿ
ಭಟ್ಕಳದ ಜನವಸತಿ ಪ್ರದೇಶದಲ್ಲಿ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿ    

ಭಟ್ಕಳ/ ಕಾರವಾರ: ಭಟ್ಕಳ ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಪಟ್ಟಣದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ನೀಡಿ ಆದೇಶಿಸಿದ್ದಾರೆ.

ತಾಲ್ಲೂಕಿನ ಮುಟ್ಟೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿದ್ದು, ಮನೆಯೊಂದರ ಮೇಲೆ ಮಣ್ಣು ಬಿದ್ದಿದೆ. ಮನೆಯಲ್ಲಿದ್ದವರ ಮಾಹಿತಿ ತಿಳಿದುಬರಬೇಕಿದೆ.

ಪಟ್ಟಣ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ಹಾಗೂ ಸುತ್ತಮುತ್ತಲಿನ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಸದ್ಯಕ್ಕೆ ಅಸಾಧ್ಯವಾಗಿದೆ. ಹಾಗಾಗಿ ಮುಂದಿನ ಸೂಚನೆಯ ತನಕ ಭಟ್ಕಳದ ಮೂಲಕ ಪ್ರಯಾಣ ಮಾಡುವುದು ಬೇಡ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.

ADVERTISEMENT

ಭಟ್ಕಳ ಪಟ್ಟಣ ಸಂಪೂರ್ಣ ಪ್ರದೇಶ, ಮುಂಡೊಳ್ಳಿ, ಚೌಥನಿ, ಮಣ್ಕುಳಿ, ಮೂಡುಭಟ್ಕಳ, ತಲಾಂದ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರವಾಹ ಉಂಟಾಗಿದೆ. ತಡರಾತ್ರಿಯಿಂದ ನಿರಂತರವಾಗಿ ಭಾರಿ ಮಳೆಯಿಂದ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಆತಂಕಗೊಂಡ ಸಾರ್ವಜನಿಕರು ಬೆಳಗಾಗುವುದನ್ನು ನಿದ್ದೆಗೆಟ್ಟು ಎದುರು ನೋಡಿದ್ದಾರೆ. ಹಲವು ದಶಕಗಳ ನಂತರ ಒಂದೇ ರಾತ್ರಿಯಲ್ಲಿ ಈ ಪ್ರಮಾಣದ ಮಳೆಯಾಗಿದೆ ಎಂದು ಹಿರಿಯರು ಹೇಳುತ್ತಾರೆ.

ರಕ್ಷಣಾ ಕಾರ್ಯಾಚರಣೆಗೆ ಕುಮಟಾದಿಂದ ಎಸ್.ಡಿ.ಆರ್.ಎಫ್ ತಂಡ ಬಂದಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ತಂಡದ ಹಲವು ಸದಸ್ಯರ ತಂಡವೂ ಬರುತ್ತಿದೆ. ಶಾಸಕ ಸುನೀಲ ನಾಯ್ಕ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ‌್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಆ.2ರಿಂದ ಆ.5ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಜಿಲ್ಲೆಯಾದ್ಯಂತ 'ಆರೆಂಜ್ ಅಲರ್ಟ್' ಪ್ರಕಟಿಸಿದೆ.

ಹಲವು ದಿನಗಳ ಬಿಡುವಿನ ನಂತರ ಭಾರಿ ಮಳೆಯಾಗುತ‌್ತಿದೆ. ಬಿತ್ತನೆ ಮಾಡಿದ್ದ ಹೊಲಗಳಲ್ಲಿ ಬೀಜ ಮೊಳಕೆಯೊಡೆದಿವೆ. ನೀರು ಅಗತ್ಯವಿರುವ ಸಮಯದಲ್ಲೇ ಮಳೆ ದೂರವಾಗಿತ್ತು. ಮುಂಡಗೋಡ, ಶಿರಸಿ ತಾಲ್ಲೂಕುಗಳ ಹಲವೆಡೆ ರೈತರು ಬೆಳೆಗೆ ಪೈಪ್ ಮೂಲಕ ನೀರು ಹಾಯಿಸಿದ್ದರು. ಅಷ್ಟರಲ್ಲಿ ಮತ್ತೆ ಮಳೆಯಾಗಿದ್ದು ರೈತರಿಗೆ ಅನುಕೂಲವಾಗಿದೆ.

ಮೀನುಗಾರಿಕೆಗೆ ತೊಂದರೆ

ಈ ಬಾರಿಯ ಮುಂಗಾರು ಅವಧಿಯ ಯಾಂತ್ರೀಕೃತ ಮೀನುಗಾರಿಕಾ ನಿಷೇಧವು ಭಾನುವಾರವಷ್ಟೇ (ಜುಲೈ 31) ಮುಕ್ತಾಯವಾಗಿತ್ತು. ಸೋಮವಾರದಿಂದ ಮೀನುಗಾರಿಕೆಗೆ ಪುನಃ ಆರಂಭವಾಗಿದೆ. ಹಲವು ದೋಣಿಗಳು ಆಳಸಮುದ್ರಕ್ಕೆ ಹೋಗಿದ್ದವು. ಮೀನುಗಾರರು ಹೆಚ್ಚಿನ ಪ್ರಮಾಣದಲ್ಲಿ ಮೀನು ಸಿಗುವ ನಿರೀಕ್ಷೆಯಲ್ಲಿರುವಾಗಲೇ ಭಾರಿ ಮಳೆ ಮತ್ತೆ ಆರಂಭವಾಗಿದೆ.

ಮಳೆ ಕಡಿಮೆಯಾಗಿ, ಬಿಸಿಲು ಮೂಡಿದ್ದ ಕಾರಣ ಅಡಿಕೆ ತೋಟಗಳಿಗೆ ಬೆಳೆಗಾರರು ಕೊಳೆ ರೋಗ ನಿಯಂತ್ರಣದ ಔಷಧಿ ಸಿಂಪಡಿಸುತ್ತಿದ್ದಾರೆ. ಈ ಬಾರಿ ರೋಗವೂ ಹತೋಟಿಯಲ್ಲಿದೆ. ಆದರೆ, ಭಾರಿ ಮಳೆ ಮುಂದುವರಿದರೆ ತೊಡಕಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.