ADVERTISEMENT

ಗುಡ್ಡ, ರಸ್ತೆ ಕುಸಿಯುವ ಅಪಾಯ

ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಜನರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 16:27 IST
Last Updated 26 ಜುಲೈ 2024, 16:27 IST
ಕುಮಟಾ ತಾಲ್ಲೂಕಿನ ಭಂಡಿವಾಳ ರಸ್ತೆಯ ಬದಿ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡು ಕುಸಿಯುವ ಅಪಾಯ ಉಂಟಾಗಿರುವುದು
ಕುಮಟಾ ತಾಲ್ಲೂಕಿನ ಭಂಡಿವಾಳ ರಸ್ತೆಯ ಬದಿ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡು ಕುಸಿಯುವ ಅಪಾಯ ಉಂಟಾಗಿರುವುದು   

ಕುಮಟಾ: ತಾಲ್ಲೂಕಿನ ಅಳಕೋಡ ಗ್ರಾಮ ಪಂಚಾಯ್ತಿಯ ಭಂಡಿವಾಳ ಗ್ರಾಮಕ್ಕೆ ಹೋಗುವ ರಸ್ತೆ ಹಾಗೂ ಅದರ ಮೇಲ್ಭಾಗದ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡು ಕುಸಿಯುವ ಸಾಧ್ಯತೆ ಇರುವುದರಿಂದ ತಹಶೀಲ್ದಾರ್ ಸೂಚನೆಯ ಮೇರೆಗೆ ತಗ್ಗು ಪ್ರದೇಶದ ಕೆಲ ಕುಟುಂಬಗಳಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಸ್ಥಳೀಯ ಗ್ರಾಮ ಪಂಚಾಯಿತಿ ನೋಟಿಸ್‌ ನೀಡಿದೆ.

ಶುಕ್ರವಾರ ಸ್ಥಳಕ್ಕೆ ಭೇಟಿ ನಿಡಿದ ಶಾಸಕ ದಿನಕರ ಶೆಟ್ಟಿ ಅವರಿಗೆ, ಅಳಕೋಡ ಗ್ರಾಮ ಪಂಚಾಯ್ತಿ ಪಿಡಿಒ ವಿ.ಎ. ಪಟಗಾರ ಮಾಹಿತಿ ನೀಡಿದರು. ಕತಗಾಲ ಆರ್.ಎಫ್.ಒ ಹಾಗೂ ಸ್ಥಳೀಯ ನೋಡಲ್ ಅಧಿಕಾರಿ ಪ್ರೀತಿ ನಾಯ್ಕ,  ‘ಭಂಡಿವಾಳ ರಸ್ತೆ ಕುಸಿಯುವ ಲಕ್ಷಣಗಳು ಕಂಡುಬಂದಿದ್ದು, ಅದರ ಸಮೀಪದ ಗುಡ್ಡ ಕೂಡ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಎಸ್.ಕೆ.ಪಿ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

‘ಭಂಡಿವಾಳ ಗ್ರಾಮಕ್ಕೆ ಹೊಸ ರಸ್ತೆ ನಿರ್ಮಿಸಲಾಗಿತ್ತು. ರಸ್ತೆ ಕುಸಿಯುವ ಸಾಧ್ಯತೆ ಇರುವ ಜಾಗದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ₹ 1 ಕೋಟಿ ವೆಚ್ಚದಲ್ಲಿ ತಡೆಗೋಡೆ ಸಹ ನಿರ್ಮಾಣ ಮಾಡಲಾಗಿತ್ತು. ಅದು ಸಾಕಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿತ ಸಾಧ್ಯತೆಯನ್ನು ಇಷ್ಟು ಕಾಲ ತಡೆದಿತ್ತು’ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ADVERTISEMENT

‘ರಸ್ತೆ ಕೆಳಗೆ ಕೆಲವು ಮನೆಗಳಿದ್ದು, ರಸ್ತೆ ಸಹಿತ ಗುಡ್ಡ ಕುಸಿದರೆ ಮನೆಗಳ ಮೇಲೆ ಮಣ್ಣು ಬಿದ್ದು ತಳಭಾಗದಲ್ಲಿ ಹರಿಯುವ ಚಂಡಿಕಾ ಹೊಳೆ ಮುಚ್ಚಿ ಅದರ ಹರಿವಿನ ಪಥವೇ ಬದಲಾಗುವ ಅಪಾಯವಿದೆ. ಸ್ಥಳೀಯರಿಗೆ ಎಚ್ಚರಿಕೆ ನೀಡಿ, ಅಧಿಕಾರಿಗಳಿಗೆ ನಿಗಾ ಇಡಲು ಸೂಚಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಗಜಾನನ ಪೈ, ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವು ಗೌಡ, ಸದಸ್ಯ ಮಹೇಶ ದೇಶಭಂಡಾರಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಎಂ.ಪಿ.ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.