ಗೋಕರ್ಣ: ಅತಿವೃಷ್ಟಿ ಮತ್ತು ಅಕಾಲಿಕ ಮಳೆಯಿಂದ ನಿರೀಕ್ಷೆಯಷ್ಟು ಫಸಲು ಸಿಗದಿದ್ದರೂ ಈ ಭಾಗದ ರೈತರು ಭತ್ತದ ಕಟಾವು ಮುಗಿಸಿ ನಿರಾಳರಾಗಿದ್ದಾರೆ.
ಮುಂಗಾರು ಅವಧಿಯಲ್ಲಿ ಹವಾಮಾನ ವೈಪರಿತ್ಯದ ಪರಿಣಾಮ ಭತ್ತದ ಕೃಷಿಯಿಂದ ಎದುರಾದ ನಷ್ಟವನ್ನು ಸರಿದೂಗಿಸಲು ಈಗ ರೈತರು ತರಕಾರಿ ಬೆಳೆಯತ್ತ ಮುಖ ಮಾಡಿದ್ದಾರೆ. ಕೆಲವರು ತರಕಾರಿ ಜತೆಗೆ ಶೇಂಗಾ, ಗೆಣಸನ್ನೂ ಬೆಳೆಯುವ ತವಕದಲ್ಲಿದ್ದಾರೆ. ಭತ್ತದ ಕಟಾವು ಮುಗಿದಿದ್ದು ಎಷ್ಟು ಲಾಭ, ಎಷ್ಟು ನಷ್ಟ ಎಂಬ ಲೆಕ್ಕಾಚಾರದೊಂದಿಗೆ ರೈತರು ಮುಂದಿನ ಅಡಿ ಇಟ್ಟಿದ್ದಾರೆ.
ಗೋಕರ್ಣ ಹೋಬಳಿಯಲ್ಲಿ ಬಹುತೇಕ ರೈತರು ತುಂಡು ತುಂಡು ಕೃಷಿ ಭೂಮಿಯ ಹಿಡುವಳಿದಾರರಾಗಿದ್ದಾರೆ. ಈ ಭಾಗದಲ್ಲಿ ಒಟ್ಟೂ 880.10 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತದ ಬೆಳೆ ಬೆಳೆಯಲಾಗಿದೆ.
‘ಭತ್ತದ ಕೃಷಿ ಇಲ್ಲಿಯ ರೈತರಿಗೆ ಕೇವಲ ಜೀವನೋಪಾಯವಾಗಿದೆ. ಇದನ್ನೇ ನಂಬಿಕೊಂಡು ಜೀವನ ಸಾಗಿಸುವುದು ಬಲು ಕಷ್ಟ. ಚಿಕ್ಕ ಹಿಡುವಳಿದಾರರು ಹೆಚ್ಚಿದ್ದರಿಂದ ಅಧಿಕ ಫಸಲು ಸಿಗಲಾರದು. ಉಳುಮೆ, ನಾಟಿ, ಸಸಿಗಳ ಆರೈಕೆ, ಕಟಾವಿಗೆ ಮಾಡಿದ ಖರ್ಚು ಕೂಡ ಹುಟ್ಟದು. ನಷ್ಟವಾದರೂ ಅಕ್ಕಿಗಾಗಿ ಭತ್ತ ಕೃಷಿ ಮುಂದುವರೆಸಬೇಕಾಗಿದೆ’ ಎಂದು ಬೇಲೆಹಿತ್ತಲ ಭಾಗದ ರೈತ ಶುಕ್ರು ಗೌಡ ಹೇಳುತ್ತಾರೆ.
‘ಭತ್ತದ ಬೀಜ ಬಿತ್ತನೆಯ ನಂತರ ಬಂದ ಅತಿಯಾದ ಮಳೆಯಿಂದ ಬೇಲೆಹಿತ್ತಲು ಸೇರಿದಂತೆ ಅನೇಕ ಕಡೆ ಮಳೆಯಲ್ಲಿ ಬೀಜ ಕೊಚ್ಚಿಕೊಂಡು ಹೋಗಿ ಬೆಳೆಯೇ ನಾಶವಾಗಿದೆ’ ಎಂದು ಬೇಲೆಹಿತ್ತಲ ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ರೈತ ಲಕ್ಷ್ಮೀಶ ಗೌಡ ಹೇಳಿದರು.
‘ಭತ್ತದ ಬೆಳೆಯಲ್ಲಿ ಕೆಲವರು ನಷ್ಟ ಅನುಭವಿಸಿದ್ದಾರೆ. ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಭತ್ತದ ಬೀಜದ ನಂತರ ಈಗ ಕೃಷಿ ಇಲಾಖೆ ಶೇಂಗಾ ಬೀಜ ವಿತರಿಸಲು ಸಜ್ಜಾಗಿದೆ. ಶೇಂಗಾ ಬೆಳೆಗೆ ಬೇಕಾದ ಗೊಬ್ಬರವನ್ನೂ ವಿತರಿಸಲಾಗುತ್ತಿದೆ. ವಿವಿಧ ನಮೂನೆಯ ಕೃಷಿ ಉಪಕರಣಗಳು ಲಭ್ಯವಿದ್ದು ಪ್ರೋತ್ಸಾಹ ದರದಲ್ಲಿ ರೈತರಿಗೆ ಕೊಡಲು ಕೃಷಿ ಇಲಾಖೆ ಯೋಜನೆ ರೂಪಿಸಿದೆ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶಮೂರ್ತಿ ಟಿ.ಸಿ.
ಭತ್ತದ ಬೆಳೆಯಲ್ಲಿ ಕೆಲವರು ನಷ್ಟ ಅನುಭವಿಸಿದ್ದಾರೆ. ಅದು ಇಲಾಖೆಯ ಗಮನಕ್ಕೆ ಬಂದಿದೆ. ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ರೈತರಿಗೆ ಪರಿಹಾರ ಸಿಗುವ ನಿರೀಕ್ಷೆ ಇದೆವೆಂಕಟೇಶಮೂರ್ತಿ ಟಿ.ಸಿ ಸಹಾಯಕ ಕೃಷಿ ನಿರ್ದೇಶಕ
ತರಕಾರಿ ಬೆಳೆಗೆ ಹೆಚ್ಚಿದ ಬೇಡಿಕೆ
ಭತ್ತ ಶೇಂಗಾ ಮುಂತಾದ ಬೆಳೆಗಿಂತ ಈ ಭಾಗದಲ್ಲಿ ಬೆಳೆಯುವ ತರಕಾರಿಗೆ ಹೆಚ್ಚಿನ ಬೇಡಿಕೆ ಇದೆ. ವಿವಿಧ ಜಾತಿಯ ತರಕಾರಿಗಳು ತಾಜಾ ಸಿಗುವುದರಿಂದ ಜನ ಇಷ್ಟ ಪಡಲು ಕಾರಣವಾಗಿದೆ. ಇಲ್ಲಿಯ ತರಕಾರಿಗಳನ್ನು ಶಿರಸಿ ಯಲ್ಲಾಪುರ ಕಾರವಾರ ಹಾಗೂ ಹುಬ್ಬಳ್ಳಿ ಮಾರುಕಟ್ಟೆಗೆ ಮಾರಾಟ ಮಾಡಲು ಪ್ರತಿ ದಿನ ನೂರಾರು ಕ್ವಿಂಟಲ್ ಒಯ್ಯಲಾಗುತ್ತದೆ. ಇಲ್ಲಿಯ ರೈತರು ವಿವಿಧ ಜಾತಿಯ ಸೊಪ್ಪು ಸದೆಗಳನ್ನು ಬದನೆಕಾಯಿ ಹಾಗಲಕಾಯಿ ಪಟ್ಟಲಕಾಯಿ ತೊಂಡೆಕಾಯಿ ಕುಂಬಳಕಾಯಿ ಸೌತೆಕಾಯಿ ಮೊಗ್ಗೆಕಾಯಿ ಮುಂತಾದವುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.