ಭಟ್ಕಳ: 2 ವರ್ಷಗಳ ಹಿಂದೆ ಮಳೆಗಾಲದಲ್ಲಿ ಇಲ್ಲಿನ ಮುಟ್ಟಳ್ಳಿಯಲ್ಲಿ ಗುಡ್ಡ ಜಾರಿ ಮೂವರು ಸಮಾಧಿಯಾದ ಸುದ್ದಿ ಮರೆಮಾಚುವ ಮುನ್ನವೇ ಈ ಬಾರಿ ಮಳೆಗಾಲದಲ್ಲಿ ಅಂಕೋಲದ ಶಿರೂರಿನಲ್ಲಿ ಗುಡ್ಡ ಕುಸಿದು 6 ಜನ ಮೃತರಾಗಿದ್ದಾರೆ. ಇಲ್ಲಿನ ಗುಡ್ಡದ ತಪ್ಪಲಿನ ನಿವಾಸಿಗಳಿಗೆ ಮತ್ತೆ ಆತಂಕ ಮೂಡಿಸಿದೆ. ಒಮ್ಮೆಮ್ಮೆ ಜೋರಾದ ಮಳೆಯೂ ಮನೆಮಂದಿಯ ನಿದ್ರೆಯನ್ನು ಕೆಡಿಸುತ್ತಿದೆ.
ಪರವಾನಿಗೆ ಇಲ್ಲದ ಕೆಂಪು ಕಲ್ಲು ಗಣಿಗಾರಿಕೆ ಅವಾಂತರಕ್ಕೆ ಮೂಲ ಕಾರಣ: ತಾಲ್ಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆ ಭೂಕುಸಿತ ಸಂಭವಿಸಲು ಮೂಲ ಕಾರಣ. ಕೆಂಪು ಕಲ್ಲು ಗಣಿಗಾರಿಕೆ ಮಾಡಿದ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡ ಕುಟುಂಬವೇ ಮುಟ್ಟಳ್ಳಿಯಲ್ಲಿ ಭೂಕುಸಿತದಿಂದ ಮಣ್ಣಿನ ಅಡಿ ಸಿಲುಕಿ ಪ್ರಾಣ ಬಿಟ್ಟಿದ್ದರು. ಇಂತಹದೇ ಗುಡ್ಡದ ತಪ್ಪಲಿನಡಿ ಮನೆ ನಿರ್ಮಿಸಿ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳು ತಾಲ್ಲೂಕಿನಲ್ಲಿ ಇವೆ.
ಗುಡ್ಡದ ತಪ್ಪಲಿನ ಕೆಳಗಡೆ ಕೆಂಪುಕಲ್ಲು ಗಣಿಗಾರಿಕೆ ನಡೆಸಿ ಸಮತಟ್ಟಾದ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಈಗ ಅದರಲ್ಲಿ ಉಳಿಯಲು ಜೀವಭಯ ಕಾಡಿದರೆ ಬಿಟ್ಟು ಹೋಗಲು ಪರ್ಯಾಯ ವ್ಯವಸ್ಥೆ ಇಲ್ಲದಾಗಿದೆ. ಕೆಂಪು ಚಿರೆಕಲ್ಲು ಗಣಿಗಾರಿಕೆ ನಡೆಸುವವರು ಗಟ್ಟಿ ಕಲ್ಲು ಇರುವ ಕಡೆ ಮಾತ್ರ ಗಣಿಗಾರಿಕೆ ಮಾಡಿ ಮೃದು ಕಲ್ಲು ಇರುವ ಗುಡ್ಡವನ್ನು ಹಾಗೆಯೇ ಬಿಟ್ಟು ಹೋಗುತ್ತಾರೆ.
ಈ ಗುಡ್ಡವು ವರ್ಷದಿಂದ ವರ್ಷಕ್ಕೆ ಸುರಿಯುವ ಮಳೆಯ ನೀರು ಕುಡಿದು ಮಣ್ಣು ಸಡಿಲವಾಗಿ ಕ್ರಮೇಣ ಭೂಕಸಿತಗೊಳ್ಳುತ್ತದೆ ಎಂದು ಕಳೆದ ಎರಡು ವರ್ಷದ ಹಿಂದೆ ಭೂಕುಸಿತವಾದಾಗ ಭಟ್ಕಳಕ್ಕೆ ಭೇಟಿ ನೀಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಈಗ ಅಂಕೋಲದಲ್ಲಿ ನಡೆದ ಘಟೆನಯೂ ಇದಕ್ಕೆ ಪುಷ್ಠಿ ನೀಡಿದೆ ಎನ್ನುವುದು ಸ್ಥಳೀಯರ ಮಾತು.
ತಾಲ್ಲೂಕು ಆಡಳಿತದಿಂದ ಬಿಗಿ ಕ್ರಮಕ್ಕೆ ಆಗ್ರಹ: ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ ಅನೇಕರು ಪ್ರಾಣತೆತ್ತರೂ ಪರಿಹಾರ ಕ್ರಮಕ್ಕೆ ಜಿಲ್ಲಾಡಳಿತ ಮುದಾಗುತ್ತಿಲ್ಲ. ಗುಡ್ಡದ ತಪ್ಪಲಿನಲ್ಲಿ ಮನೆ ಕಟ್ಟಿಕೊಳ್ಳುವರರಿಗೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಅಧಿಕಾರಿಗಳು ಗಮನಹರಿಸಿಬೇಕು. ತಾಲ್ಲೂಕಿನಲ್ಲಿ ಜನವಸತಿ ಪ್ರದೇಶಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕೆಂಪುಕಲ್ಲು ಗಣಿಗಾರಿಕೆ ಮಾಡುವವರ ವಿರುದ್ದ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎನ್ನುವುದು ಸ್ಥಳೀಯರಾದ ಶಂಕರ ನಾಯ್ಕ ಅವರ ಮನವಿ.
ತಾಲ್ಲೂಕು ಆಡಳಿತದಿಂದ ಕ್ರಮ: ಗುಡ್ಡದ ತಪ್ಪಲಿನ ವಾಸಿಗಳಿಗೆ ಉಪವಿಬಾಗಾಧಿಕಾರಿ ಜೊತೆ ತೆರಳಿ ಮನೆ ಖಾಲಿ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಮುಟ್ಟಳ್ಳಿ ಭೂಕುಸಿತ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕ್ರೀಯಾಯೋಜನೆ ರೂಪಿಸಿ ಪ್ರಸ್ತಾವನೆಗೆ ಕಳುಹಿಸಲಾಗಿದೆ.
ಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪರ್ಯಾಯ ಜಾಗ ಮಂಜೂರಿಗೆ ಬಗ್ಗೆ ಕೇಳಲಾಗಿದ್ದು, ಮುಟ್ಟಳ್ಳಿ ವಾಸಿಗಳು ವ್ಯವಹಾರ ದೂರವಾಗುತ್ತದೆ ಎನ್ನುವ ಕಾರಣಕ್ಕೆ ತೀರಸ್ಕರಿಸಿದ್ದಾರೆ. ಅಕ್ರಮ ಕಲ್ಲು ಕ್ವಾರಿಗಳ ಮೇಲೆ ಕ್ರಮವಹಸಿಲಾಗುವುದು ಎಂದು ಭಟ್ಕಳ ತಹಶೀಲ್ದಾರ್ ನಾಗರಾಜ ನಾಯ್ಕಡ ಪ್ರಜಾವಾಣಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.