ಮುಂಡಗೋಡ: ತಾಲ್ಲೂಕಿನ ವಿವಿಧ ಸರ್ಕಾರಿ ಇಲಾಖೆಗಳು, ಗ್ರಾಮ ಪಂಚಾಯಿತಿಗಳು ಕೋಟ್ಯಂತರ ರೂಪಾಯಿ ವಿದ್ಯುತ್ ಬಾಕಿ ಉಳಿಸಿಕೊಂಡಿದ್ದು, ಶುಲ್ಕ ಬಾಕಿ ಇರಿಸಿಕೊಂಡ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಹೆಸ್ಕಾಂ ಮುಂದಾಗಿದೆ.
ಇಲ್ಲಿನ ಉಪನೋಂದಣಿ ಅಧಿಕಾರಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಗುರುವಾರ ಕಡಿತಗೊಳಿಸಲಾಗಿದೆ. ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಮುಖ್ಯಸ್ಥರಿಗೆ ವಿದ್ಯುತ್ ಕಡಿತದ ಎಚ್ಚರಿಕೆ ನೀಡುತ್ತಿರುವುದು ಕಂಡುಬಂದಿದೆ.
‘ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳಿಂದ ₹2.60 ಕೋಟಿ ವಿದ್ಯುತ್ ಬಿಲ್ ವಸೂಲಿ ಆಗಬೇಕಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿಗೆ ಬಳಸಿರುವ ವಿದ್ಯುತ್ ಹಾಗೂ ಬೀದಿ ದೀಪಗಳ ಬಿಲ್ ಬಾಕಿ ಉಳಿಸಿಕೊಂಡಿರುವುದರಿಂದ, ಹೆಸ್ಕಾಂಗೆ ಹೆಚ್ಚಿನ ಹೊಡೆತ ಬೀಳುತ್ತಿದೆ. ಕೆಲವೊಂದು ಗ್ರಾಮ ಪಂಚಾಯಿತಿಗಳು ಆರು ತಿಂಗಳಿಂದ ಹಿಡಿದು ಒಂದು ವರ್ಷದವರೆಗೆ ಬಿಲ್ ತುಂಬುತ್ತಿಲ್ಲ’ ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.
‘ಅ.31ರವರೆಗೆ ವಿದ್ಯುತ್ ಬಾಕಿ ಉಳಿಸಿಕೊಂಡಿರುವ ಪಂಚಾಯಿತಿಗಳ ಪೈಕಿ, ಇಂದೂರ ಗ್ರಾಮ ಪಂಚಾಯಿತಿ ₹39 ಲಕ್ಷ, ಚಿಗಳ್ಳಿ ₹38 ಲಕ್ಷ, ಕಾತೂರ ₹32 ಲಕ್ಷ , ಹುನಗುಂದ ₹29 ಲಕ್ಷ ಬಾಕಿ ಉಳಿಸಿಕೊಂಡಿವೆ. ಮೈನಳ್ಳಿ ₹26 ಲಕ್ಷ, ಬಾಚಣಕಿ ₹23 ಲಕ್ಷ. ಪಾಳಾ ₹16 ಲಕ್ಷ, ಸಾಲಗಾಂವ ₹14 ಲಕ್ಷ, ನಂದಿಕಟ್ಟಾ ₹13 ಲಕ್ಷ, ಚವಡಳ್ಳಿ ₹11 ಲಕ್ಷ, ಗುಂಜಾವತಿ ಗ್ರಾಮ ಪಂಚಾಯಿತಿ ₹10 ಲಕ್ಷದಷ್ಟು ಬಾಕಿ ಉಳಿಸಿಕೊಂಡಿವೆ’ ಎಂದು ತಿಳಿಸಿದರು.
ಬಾಕಿ ಉಳಿಸಿಕೊಂಡಿರುವ ಇಲಾಖೆಗಳು ಪಂಚಾಯಿತಿಗಳಿಗೆ ನೋಟಿಸ್ ನೀಡಲಾಗಿದ್ದು ನಿಗದಿತ ಅವಧಿಯೊಳಗೆ ತುಂಬದಿದ್ದರೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದ್ದೇವೆ.–ಧರ್ಮರಾಜ ಬೆಡಸಗಾಂವ್, ಹೆಸ್ಕಾಂ ಎಇಇ
‘ವಿವಿಧ ಇಲಾಖೆಗಳು ಸಹ ಸುಮಾರು ₹16 ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಅದರಲ್ಲಿ ಪ್ರಮುಖವಾಗಿ, ಶಿಕ್ಷಣ ಇಲಾಖೆ ₹4.21 ಲಕ್ಷ, ಪೊಲೀಸ್ ಇಲಾಖೆ ₹2.74 ಲಕ್ಷ, ಆರೋಗ್ಯ ಇಲಾಖೆ ₹2.94 ಲಕ್ಷ, ಕಂದಾಯ ಇಲಾಖೆ ₹1.66 ಲಕ್ಷ, ಅರಣ್ಯ ಇಲಾಖೆ ₹1.32 ಲಕ್ಷ ವಿದ್ಯುತ್ ಬಿಲ್ ತುಂಬಬೇಕಾಗಿದೆ. ಇನ್ನುಳಿದ ಇಲಾಖೆಗಳು ₹10 ಸಾವಿರದಿಂದ ₹1 ಲಕ್ಷದವರೆಗೆ ಬಾಕಿ ಉಳಿಸಿಕೊಂಡಿವೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.