ಕಾರವಾರ: ಜಿಲ್ಲೆಯ ಕರಾವಳಿ, ಘಟ್ಟದ ಮೇಲಿನ ಕೆಲ ಭಾಗಗಳಲ್ಲಿ ಉಪ ಆದಾಯದಲ್ಲಿ ಗರಿಷ್ಠ ಪಾಲು ತಂದುಕೊಡುವ ಗೇರು ಈ ಬಾರಿ ಉತ್ತಮ ಫಸಲು ದೊರೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಹದವಾದ ಚಳಿ, ಸೆಖೆ ಮಿಶ್ರಿತ ವಾತಾವರಣ ಇರುವುದರಿಂದ ಗೇರು ಮರಗಳು ಹೂವು ಭರಿತವಾಗಿವೆ.
ಮಲೆನಾಡಿನಲ್ಲಿ ಕೆಲವು ರೈತರು ಗೇರು ಬೆಳೆಯನ್ನು ವ್ಯಾಪಕ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಹೆಚ್ಚಿನ ಪಾಲು ರೈತರು ಉಪ ಆದಾಯಕ್ಕೆ ಗೇರು ಗಿಡಗಳನ್ನು ಬೆಳೆಸಿಕೊಂಡಿದ್ದಾರೆ. ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲ್ಲೂಕುಗಳಲ್ಲಿ ಹತ್ತಾರು ಎಕರೆಗೂ ಹೆಚ್ಚು ಗೇರು ಗಿಡಗಳನ್ನು ಬೆಳೆಸಿದ ರೈತರು ಸಾಕಷ್ಟಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅನಿಶ್ಚಿತತೆಯ ವಾತಾವರಣದ ಕಾರಣಕ್ಕೆ ಗೇರು ಫಸಲು ನಿರೀಕ್ಷಿತ ಮಟ್ಟದಲ್ಲಿ ಲಭಿಸಲಿಲ್ಲ. ಹೂವು ಅರಳಿದರೂ ಮೋಡ ಕವಿದ ವಾತಾವರಣ, ಹವಾಮಾನ ವೈಪರಿತ್ಯದಿಂದ ಎದುರಾಗುವ ಟೀ–ಸೊಳ್ಳೆಗಳ ಕಾಟಕ್ಕೆ ಹೂವುಗಳು ಉದುರಿ ಹೋಗುತ್ತಿದ್ದವು. ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ ಉಂಟಾಗುತ್ತಿತ್ತು.
ಈ ಬಾರಿ ಗೇರು ಬೆಳೆಗೆ ಸೂಕ್ತ ವಾತಾವರಣ ಇದೆ. ಇದರಿಂದ ಬಹುತೇಕ ಕಡೆಗಳಲ್ಲಿ ಪುಷ್ಪಭರಿತ ಮರಗಳೇ ಕಾಣಸಿಗುತ್ತಿವೆ. ಕಾಯಿಗಳು ಬೆಳೆಯಲು ಆರಂಭಿಸಿದ್ದು ರೈತರು ಮಂದಸ್ಮಿತರಾಗಿದ್ದಾರೆ.
‘ಬೇಸಿಗೆ ಅವಧಿಯಲ್ಲಿ ಕೃಷಿ ಬೆಳೆಗಳ ಉತ್ಪನ್ನ ಲಭಿಸದು. ಆಗ ಬೆಟ್ಟ ಪ್ರದೇಶ, ಬೇಣದಲ್ಲಿ, ಗುಡ್ಡಗಾಡುಗಳಲ್ಲಿರುವ ಬೆಳೆಸಿದ ಗೇರು ಬೆಳೆ ಸಂಗ್ರಹ ಮಾಡುತ್ತೇವೆ. ಹಸಿ ಗೋಡಂಬಿ ಒಣಗಿಸಿ ಮಾರಾಟವನ್ನೂ ಮಾಡಲಾಗುತ್ತದೆ. ಉತ್ತಮ ದರ ಲಭಿಸಿದರೆ ಒಳ್ಳೆಯ ಆದಾಯವೂ ಸಿಗುತ್ತಿದೆ. ಕೆಲವು ವರ್ಷದ ಗಿಡ ಖರೀದಿಸಿ ನೆಟ್ಟಿದ್ದೂ ಈ ಬಾರಿ ಹೂವುಗಳಿಂದ ತುಂಬಿಕೊಂಡಿದೆ. ಉತ್ತಮ ಫಸಲು ಸಿಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ರಾಗಿಹೊಸಳ್ಳಿಯ ಜನಾರ್ಧನ ನಾಯ್ಕ.
‘ಮೋಡ ಮುಸುಕಿದ ವಾತಾವರಣ ಈ ಬಾರಿ ಅಷ್ಟಾಗಿ ಉಂಟಾಗಿಲ್ಲ. ಹದವಾದ ಸೆಖೆ, ಚಳಿ ಗೇರು ಬೆಳೆಗೆ ಸೂಕ್ತವಾಗಿದೆ. ಈ ವಾತಾವರಣದಿಂದ ಟೀ–ಸೊಳ್ಳೆಗಳ ಉತ್ಪ್ಪತ್ತಿಗೂ ಅವಕಾಶ ಆಗಿಲ್ಲ. ಹೀಗಾಗಿ ನಿರೀಕ್ಷೆಗೂ ಹೆಚ್ಚು ಗೇರು ಬೆಳೆ ಈ ಬಾರಿ ಉತ್ಪಾದನೆಯಾಗಬಹುದು’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
10 ಸಾವಿರ ಟನ್ ನಿರೀಕ್ಷೆ
‘ಜಿಲ್ಲೆಯಲ್ಲಿ ಮೂರುವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆಯಲಾಗುತ್ತಿದ್ದು ಈ ಬಾರಿ ಮರಗಳಲ್ಲಿ ಹೂವುಗಳು ಚಿಗುರಿ ನಿಂತಿರುವುದನ್ನು ಆಧರಿಸಿದರೆ ಸುಮಾರು 10 ಸಾವಿರ ಟನ್‍ನಷ್ಟು ಗೇರು ಬೆಳೆ ದೊರೆಯಬಹುದು ಎಂಬ ನಿರೀಕ್ಷೆ ಇದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೆಳೆಯುವ ಗೋಡಂಬಿ ಅರಬ್ ರಾಷ್ಟ್ರಗಳಿಗೂ ರಫ್ತಾಗುತ್ತದೆ. ಕಡಿಮೆ ಫಸಲಿನ ಕಾರಣಕ್ಕೆ ಆಫ್ರಿಕಾ ಖಂಡದಿಂದ ಗೊಡಂಬಿ ಆಮದು ಮಾಡಿಕೊಳ್ಳುವ ಅನಿವಾರ್ಯತೆ ಉಂಟಾಗುತ್ತಿತ್ತು’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಬಿ.ಪಿ.ಸತೀಶ್.
------------------
ಗೇರು ಬೆಳೆಗೆ ಕಂಟಕವಾಗಿದ್ದ ಹೂವು ಉದುರುವ ಸಮಸ್ಯೆ ಈ ಬಾರಿ ಅಷ್ಟಾಗಿ ಕಾಣಿಸಿಲ್ಲ.
ಬಿ.ಪಿ.ಸತೀಶ್
ತೋಟಗಾರಿಕಾ ಇಲಾಖೆ ಉಪನಿರ್ದೇಶಕ
-------------------
ಗೇರು ಬೆಳೆ ಪ್ರದೇಶಗಳು
ತಾಲ್ಲೂಕು; ಪ್ರದೇಶ (ಹೆಕ್ಟೇರ್ ಗಳಲ್ಲಿ)
ಅಂಕೋಲಾ; 728.76
ಭಟ್ಕಳ; 298.21
ದಾಂಡೇಲಿ; 16.61
ಹಳಿಯಾಳ; 41.54
ಹೊನ್ನಾವರ; 1156.79
ಕಾರವಾರ; 98.30
ಕುಮಟಾ; 456.20
ಮುಂಡಗೋಡ; 71.16
ಸಿದ್ದಾಪುರ; 110.57
ಶಿರಸಿ; 221.02
ಜೋಯಿಡಾ; 298.82
ಯಲ್ಲಾಪುರ; 81.63
ಒಟ್ಟು; 3579.61
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.