ಶಿರಸಿ: ಉಳಿದ ಸಮುದಾಯಗಳಿಗೆ ಹೋಲಿಕೆ ಮಾಡಿದರೆ ಹಿಂದೂಗಳ ಜನಸಂಖ್ಯೆ ಪ್ರಮಾಣ ಇಳಿಕೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಹಿಂದೂ ಸಮಾಜ ಸಂಘಟಿತಗೊಳ್ಳಬೇಕಾದ ಅಗತ್ಯವಿದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಇಲ್ಲಿನ ಗಾಣಿಗರ ಸಮುದಾಯ ಭವನದ ಆವರಣದಲ್ಲಿ ಸೋಮವಾರ ನಡೆದ ಲಕ್ಷ್ಮೀನಾರಾಯಣ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಗಾಣಿಗ ಸಮಾಜ ಅಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಕಥೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಪರಿಸ್ಥಿತಿ ಹೀಗೆಯೇ ಮುಂದುವರೆದರೆ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಬೇಕಾಗುತ್ತದೆ. ಹಿಂದೂಗಳ ಸಂಖ್ಯೆ ವೃದ್ಧಿಗೊಳ್ಳಬೇಕಾಗಿದೆ. ಪರಸ್ಪರ ಒಗ್ಗಟ್ಟು ಮೂಡಬೇಕಾದ ಅಗತ್ಯವೂ ಇದೆ’ ಎಂದರು.
‘ಪ್ರತಿಯೊಬ್ಬರಲ್ಲೂ ದೇವರ ಬಗೆಗೆ ಶೃದ್ಧೆ, ನಿಷ್ಕಲ್ಮಶ ಭಕ್ತಿ ಇರಬೇಕು. ಅದರಿಂದ ಸಚ್ಚಾರಿತ್ರ್ಯದ ವ್ಯಕ್ತಿತ್ವ ನಿರ್ಮಾಣಗೊಂಡು ಸಮಾಜವೂ ಸುಭೀಕ್ಷವಾಗಿರುತ್ತದೆ’ ಎಂದರು.
ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಗಾಣಿಗ ಸಮುದಾಯದವರಿಗೆ ದೂರದೃಷ್ಟಿತ್ವ ಇದೆ. ಧರ್ಮ, ಸಂಸ್ಕೃತಿಯ ಮೇಲೆ ದೃಢವಾದ ನಂಬಿಕೆಯೊಂದಿಗೆ ಬದುಕುವ ಸಮಾಜವಾಗಿದೆ. ಇದೇ ಗುಣವನ್ನು ಮುಂದಿನ ಪೀಳಿಗೆಗೂ ಕಲಿಸಬೇಕು’ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸದಸ್ಯರಾದ ರಾಘವೇಂದ್ರ ಶೆಟ್ಟಿ, ರಮಾಕಾಂತ ಭಟ್ಟ, ಗಾಣಿಗ ಸಮಾಜದ ಪ್ರಮುಖರಾದ ಚಂದ್ರಶೇಖರ ಶೆಟ್ಟಿ, ಗಣೇಶ ಶೆಟ್ಟಿ, ಆರ್.ಪಿ.ಶೆಟ್ಟಿ, ಗಜಾನನ ಶೆಟ್ಟಿ, ರಾಮದಾಸ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.