ಶಿರಸಿ: ಮಕರ ಸಂಕ್ರಮಣದ ಅಂಗವಾಗಿ ಬುಧವಾರ ತಾಲ್ಲೂಕಿನ ಸಹಸ್ರಲಿಂಗದಲ್ಲಿ ಸಹಸ್ರಾರು ಭಕ್ತರು ಸಂಕ್ರಾಂತಿಯ ಪುಣ್ಯ ಸ್ನಾನ ಮಾಡಿದರು.
ಪ್ರಕೃತಿಯ ಸೌಂದರ್ಯದ ಸೆಲೆಯಾಗಿರುವ ಶಾಲ್ಮಲಾ ನದಿಯ ನಡುವೆ ಇರುವ ಶಿವಲಿಂಗಗಳಿಗೆ ಪೂಜೆ ಸಲ್ಲಿಸಿ ಪುನೀತರಾದರು. ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಹಾವೇರಿ, ಬಿಜಾಪುರ ಮೊದಲಾದ ಭಾಗದಿಂದ ಕುಟುಂಬ ಸಮೇತರಾಗಿ ಜನರು ಬಂದಿದ್ದರು. ಪ್ರತಿ ವರ್ಷ ಸಂಕ್ರಾಂತಿಯಂದು ಇಲ್ಲಿಗೆ ಸಹಸ್ರಾರು ಜನರು ಭೇಟಿ ನೀಡುತ್ತಾರೆ.
ತಾಲ್ಲೂಕಿನ ಬನವಾಸಿಯ ಮಾರುತಿ ದೇವಸ್ಥಾನದ ನೂತನ ಕಳಸದ ಮೆರವಣಿಗೆ, ಮಧುಕೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿ ಉತ್ಸವ ಸಂಭ್ರಮದಿಂದ ನೆರವೇರಿತು. ಗುಡ್ನಾಪುರ ಬಂಗಾರೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿತು. ಭಕ್ತರು ಗುಡ್ನಾಪುರ ಕೆರೆಯಲ್ಲಿ ಪುಣ್ಯ ಸ್ನಾನ ಮಾಡಿದರು. ಶೀಗೇಹಳ್ಳಿಯ ಚನ್ನಕೇಶವ ದೇವಾಲಯದಲ್ಲಿ ಸಂಕ್ರಮಣದ ನಿಮಿತ್ತ 10ಸಾವಿರ ತುಳಸಿ ಅರ್ಚನೆ, ಪುರುಷಸೂಕ್ತ ಹವನ, ಕುಂಕುಮಾರ್ಚನೆ, ಸತ್ಯನಾರಾಯಣ ಪೂಜೆ, ಅಷ್ಟಾಂಗ ಸೇವೆ, ಪಲ್ಲಕ್ಕಿ ಉತ್ಸವ ಶ್ರದ್ಧಾಭಕ್ತಿಯ ನಡುವೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.