ADVERTISEMENT

ಮಾಜಾಳಿ ಕಡಲತೀರದಲ್ಲಿ ಮಾಘ ಸ್ನಾನ; 7 ಪಲ್ಲಕ್ಕಿಗೆ ಪೂಜೆ ಸಲ್ಲಿಸಿದ ನೂರಾರು ಭಕ್ತರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 16:20 IST
Last Updated 20 ಫೆಬ್ರುವರಿ 2023, 16:20 IST
ಕಾರವಾರದ ಮಾಜಾಳಿ ಕಡಲತೀರದಲ್ಲಿ ಮಾಘ ಪುಣ್ಯಸ್ನಾನದ ಅಂಗವಾಗಿ ನೂರಾರು ಜನ ಸೇರಿದ್ದರು.
ಕಾರವಾರದ ಮಾಜಾಳಿ ಕಡಲತೀರದಲ್ಲಿ ಮಾಘ ಪುಣ್ಯಸ್ನಾನದ ಅಂಗವಾಗಿ ನೂರಾರು ಜನ ಸೇರಿದ್ದರು.   

ಕಾರವಾರ: ತಾಲ್ಲೂಕಿನ ಮಾಜಾಳಿ ಕಡಲತೀರದಲ್ಲಿ ಸೋಮವಾರ ಮಾಘ ಸ್ನಾನ ಮಾಡುವ ಮೂಲಕ ನೂರಾರು ಭಕ್ತರು ಕೃತಾರ್ಥರಾದರು. ಏಳು ಪಲ್ಲಕ್ಕಿಗಳನ್ನು ಪೂಜಿಸುವುದರ ಜತೆಗೆ ಪೂರ್ವಜನರಿಗೆ ಪಿಂಡ ಪ್ರಧಾನ ಮಾಡಿದರು.

ಶಿವರಾತ್ರಿ ಮುಗಿದ ಎರಡು ದಿನಗಳ ಬಳಿಕ ಎದುರಾಗುವ ಮಾಘ ಮಾಸದ ಅಮವಾಸ್ಯೆ ದಿನ ಸಮುದ್ರ ಸ್ನಾನ ಮಾಡಿದರೆ ಪಾಪಗಳು ಪರಿಹಾರ ಆಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಾಜಾಳಿ, ಚಿತ್ತಾಕುಲ, ದೇವಬಾಗ, ಅಸ್ನೋಟಿ, ಮುಡಗೇರಿ ಸೇರಿದಂತೆ ರಾಮನಾಥ ದೇವರ ಪರಿವಾರ ದೇವರುಗಳಿರುವ ಗ್ರಾಮಗಳ ವ್ಯಾಪ್ತಿಯ ಜನರು ಪಾಲ್ಗೊಂಡಿದ್ದರು.

ರಾಮನಾಥ ದೇವರು ಹಾಗೂ ಆರು ಪರಿವಾರ ದೇವರನ್ನು ಛತ್ರ, ಚಾಮರ, ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿಯಲ್ಲಿ ಸಾಲು ಸಾಲಾಗಿ ಕರೆತರಲಾಯಿತು. ಇಲ್ಲಿ ಪೂಜೆ ಸಲ್ಲಿಸಿ ದೇವರಿಗೂ ಸಮುದ್ರ ಸ್ನಾನ ಮಾಡಿಸುವ ಪದ್ಧತಿ ಇದೆ. ಭಕ್ತರು ದೇವರಿಗೆ ಹಣ್ಣು ಕಾಯಿ ಸಮರ್ಪಿಸುವ ಸಂಪ್ರದಾಯ ಇದೆ.

ADVERTISEMENT

ಕಡಲತೀರದಲ್ಲಿ ಮರಳಿನ ಶಿವಲಿಂಗಗಳನ್ನು ರಚಿಸಿ ಅದಕ್ಕೆ ಪೂಜಿಸಿರುವುದು ಅಲ್ಲಲ್ಲಿ ಕಂಡುಬಂತು. ಪುಣ್ಯ ಸ್ನಾನ ಮಾಡಿ ಮನೆಗೆ ಮರಳುವ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಹಾಸಿಟ್ಟ ಸೀರೆಯಲ್ಲಿ ಪಡಿ ಬೀರುತ್ತ ಸಾಗಿದರು. ಟ್ಯಾಗೋರ್ ಕಡಲತೀರ, ದೇವಬಾಗ ಕಡಲತೀರದಲ್ಲೂ ಮಾಘ ಸ್ನಾನ ಪದ್ಧತಿ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.