ಶಿರಸಿ: ನಗರ ಕುಡಿಯುವ ನೀರಿನ ಮೂಲವಾದ ಕೆಂಗ್ರೆ ಜಾಕ್ ವೆಲ್ ಬಳಿ ನೀರು ಕ್ಷೀಣಿಸಿದ ಹಿನ್ನೆಲೆ ಸ್ಥಳ ವೀಕ್ಷಣೆಗೆ ತೆರಳಿದ್ದ ಶಾಸಕ ಭೀಮಣ್ಣ ನಾಯ್ಕ ಹಾಗೂ ಪೌರಾಯುಕ್ತ ಕಾಂತರಾಜ್ ಮೇಲೆ ಜೇನು ದಾಳಿ ನಡೆಸಿದ ಘಟನೆ ನಡೆದಿದೆ.
ಬುಧವಾರ ಕೆಂಗ್ರೆ ಜಾಕ್ ವೆಲ್ ವೀಕ್ಷಣೆಗೆ ತೆರಳಿದ್ದ ವೇಳೆ ಜೇನು ಹಿಂಡು ಭೀಮಣ್ಣ ನಾಯ್ಕ ಹಾಗೂ ಕಾಂತರಾಜ್ ಅವರ ಮೇಲೆ ಹಠಾತ್ ದಾಳಿ ನಡೆಸಿವೆ. ಈ ವೇಳೆ ಸ್ಥಳದಲ್ಲಿದ್ದವರು ಇಬ್ಬರನ್ನೂ ವಾಹನದಲ್ಲಿ ಕುಳ್ಳಿರಿಸಿ ಬಾಗಿಲು ಮುಚ್ಚಿದ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ. ತಕ್ಷಣ ನಗರದ ಟಿ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜಲಮೂಲವಾದ ಕೆಂಗ್ರೆ ಹೊಳೆ ಬತ್ತಿದೆ. ಶಾಸಕ ಭೀಮಣ್ಣ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಕುಡಿಯುವ ನೀರಿನ ಸಮಸ್ಯೆ ಕೇಳುವವರಿಲ್ಲದಂತಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಸ್ವತಃ ಅವರು ಅಧಿಕಾರಿಗಳ ಜತೆಗೂಡಿ ಸ್ಥಳ ವೀಕ್ಷಣೆಗೆ ತೆರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.