ADVERTISEMENT

ಹೊನ್ನಾವರ | ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ ಮನೆ: ಬೀದಿಗೆ ಬಿದ್ದ ಸಂಸಾರ

ಎಂ.ಜಿ.ಹೆಗಡೆ
Published 14 ಅಕ್ಟೋಬರ್ 2024, 5:25 IST
Last Updated 14 ಅಕ್ಟೋಬರ್ 2024, 5:25 IST
ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಗ್ರಾಮದ ಗುಂಡಿಬೈಲ್ ಸಮೀಪ ಮನೆಯೊಂದು ಬೆಂಕಿಗಾಹುತಿಯಾಗಿದೆ 
ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಗ್ರಾಮದ ಗುಂಡಿಬೈಲ್ ಸಮೀಪ ಮನೆಯೊಂದು ಬೆಂಕಿಗಾಹುತಿಯಾಗಿದೆ    

ಹೊನ್ನಾವರ: ತಾಲ್ಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಿಬೈಲ್ ಸಮೀಪದ ವಟಾರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮನೆ ಸುಟ್ಟು ಕರಕಲಾಗಿದ್ದು, ಮನೆಯಲ್ಲಿದ್ದ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದೆ.

ಪರಿಶಿಷ್ಟ ಜಾತಿಗೆ ಸೇರಿದ ಈರ ಗಿಡ್ಡ ಹಳ್ಳೀರ ಅವರು ಸೂರು ಕಳೆದುಕೊಂಡ ವ್ಯಕ್ತಿ. ಇವರಿಗೆ ಐವರು ಅವಿವಾಹಿತ ಹೆಣ್ಣುಮಕ್ಕಳಿದ್ದು,  ಕಷ್ಟದಲ್ಲಿಯೇ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಪತ್ನಿ ಮೃತಪಟ್ಟಿದ್ದಾರೆ. ನಿರ್ಗತಿಕರಾದ ಸಮಯದಲ್ಲಿ ಇವರಿಗೆ ಮನೆ ಇರಲಿಲ್ಲ. ಇವರ ಅಸಹಾಯಕತೆ ಕುರಿತು ಅಂದು ‘ಪ್ರಜಾವಾಣಿ’ ಲೇಖನ ಕೂಡ ಪ್ರಕಟಿಸಿತ್ತು.

ವರದಿಗೆ ಸ್ಪಂದಿಸಿ ಮಾನವೀಯತೆಯ ಆಧಾರದ ಮೇಲೆ ಅವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ ನವಗ್ರಾಮದ ಪಕ್ಕದ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅಧಿಕಾರಿಗಳು ಅವಕಾಶ ನೀಡಿದ್ದರು.  ಪಕ್ಕಾ ಮನೆ ನಿರ್ಮಿಸಿಕೊಳ್ಳಲು ಪಂಚಾಯಿತಿ ₹1.7ಲಕ್ಷ  ಅನುದಾನವನ್ನೂ ನೀಡಿತ್ತು.  ಮನೆ ನಿರ್ಮಾಣ ಹಂತದಲ್ಲಿರುವಾಗಲೇ ಅವರ ಮನೆ ಇದೀಗ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿದೆ.

ADVERTISEMENT

ಘಟನೆಗೆ ಕಾರಣ ತಿಳಿದುಬಂದಿಲ್ಲ. ಈರ ಅವರ ಇಬ್ಬರು ಹೆಣ್ಣುಮಕ್ಕಳು ಬೆಂಗಳೂರಿನಲ್ಲಿ ಸಣ್ಣ ಉದ್ಯೋಗದಲ್ಲಿದ್ದು, ಅವರು ಉಳಿತಾಯ ಮಾಡಿದ ಹಣವನ್ನು ಮನೆ ಕಟ್ಟಲು ತಂದೆಗೆ ಕಳಿಸಿದ್ದರು.

'ಮನೆ ಕಟ್ಟಲೆಂದು ಕೂಡಿಟ್ಟಿದ್ದ ₹70 ಸಾವಿರ ಹಣವೂ ಸುಟ್ಟು ಹೋಗಿದೆ' ಎಂದು ಈರಾ ಹಳ್ಳೀರ ಕಣ್ಣೀರಿಟ್ಟರು. ಮನೆಯಲ್ಲಿಟ್ಟಿದ್ದ ಅಲ್ಪ ಸ್ವಲ್ಪ ಧವಸ ಧಾನ್ಯ, ಹೊಲಿಗೆ ಯಂತ್ರ, ಪಾತ್ರೆ ಸಾಮಗ್ರಿ, ಮಕ್ಕಳ ಶೈಕ್ಷಣಿಕ ಪ್ರಮಾಣ ಪತ್ರಗಳು, ಮನೆಗೆ ಸಂಬಂಧಿಸಿದ ದಾಖಲೆಗಳು, ನಿತ್ಯ ತೆಗೆದುಕೊಳ್ಳಬೇಕಾದ ಔಷಧ ಹೀಗೆ ಎಲ್ಲವೂ ಬೆಂಕಿಯಲ್ಲಿ ಸುಟ್ಟಿವೆ. 

ಈರ ಹಳ್ಳೀರ ಅವರಿಗೆ ಕೃಷಿ ಭೂಮಿಯಿಲ್ಲ. ವಯಸ್ಸಾಗಿದ್ದು, ಅನಾರೋಗ್ಯ ಸಮಸ್ಯೆಯೂ ಕಾಡುತ್ತಿದೆ. ಹಳ್ಳೀರ ಸಮುದಾಯ ಭವನದಲ್ಲಿ ಸದ್ಯ ಈರ ಹಳ್ಳೀರ ಕುಟುಂಬ ಆಶ್ರಯ ಪಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ನಾಯ್ಕ ಪಂಚಾಯಿತಿ ವತಿಯಿಂದ ಚಾಪೆ, ಬಟ್ಟೆ, ದಿನಸಿ ನೀಡಿದ್ದನ್ನು ಬಿಟ್ಟರೆ ಕುಟುಂಬಕ್ಕೆ ಇನ್ನಾವುದೇ ರೀತಿಯ ಸಾಂತ್ವನ ದೊರೆತಿಲ್ಲ.

Quote - ಸುಟ್ಟಿರುವ ಮನೆಯನ್ನು ಪರಿಶೀಲಿಸಲಾಗಿದ್ದು ಒಂದೆರಡು ದಿನಗಳಲ್ಲಿ ಎಂಜಿನಿಯರ್ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವರು. ನಂತರ ಪರಿಹಾರದ ಕ್ರಮ ಕೈಗೊಳ್ಳಲಾಗುವುದು. ಎಂ.ವೈ.ತಳವಾರ ಕಂದಾಯ ನಿರೀಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.