ADVERTISEMENT

ಹೊನ್ನಾವರ | ಕಾಡು ಹಂದಿ ಸರಣಿ ಸಾವು: ಕಾರಣ ನಿಗೂಢ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:31 IST
Last Updated 9 ಸೆಪ್ಟೆಂಬರ್ 2024, 15:31 IST
ಹೊನ್ನಾವರ ತಾಲ್ಲೂಕಿನ ಹೆರಾವಲಿ ಗ್ರಾಮದ ಹಾಚಲಮಕ್ಕಿ ಸಮೀಪ ಸೋಮವಾರ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಕಾಡುಹಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಉಪಚರಿಸಿ ಚಿಕಿತ್ಸೆಗೆ ಕೊಂಡೊಯ್ದರು.                
ಹೊನ್ನಾವರ ತಾಲ್ಲೂಕಿನ ಹೆರಾವಲಿ ಗ್ರಾಮದ ಹಾಚಲಮಕ್ಕಿ ಸಮೀಪ ಸೋಮವಾರ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಕಾಡುಹಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಉಪಚರಿಸಿ ಚಿಕಿತ್ಸೆಗೆ ಕೊಂಡೊಯ್ದರು.                   

ಹೊನ್ನಾವರ: ತಾಲ್ಲೂಕಿನ ಹೆರಾವಲಿ ಗ್ರಾಮದಲ್ಲಿ ಕಳೆದ ಎರಡು ದಿನಗಳಲ್ಲಿ ಸುಮಾರು 4 ಕಾಡು ಹಂದಿಗಳು ಸತ್ತಿರುವ ವರದಿಯಾಗಿದ್ದು, ಸಾವಿನ ಕಾರಣ ನಿಗೂಢವಾಗಿದೆ.

ಸೋಮವಾರ ಹಾಚಲಮಕ್ಕಿ ಎಂಬಲ್ಲಿ ರಸ್ತೆಯ ಮೇಲೆ ಕಾಡು ಹಂದಿಯೊಂದು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಗಾರ್ಡ್ (Guard)ಗುರು ತಕ್ಷಣ ತನ್ನ ಸಹಾಯಕರೊಂದಿಗೆ ಸ್ಥಳಕ್ಕೆ ಧಾವಿಸಿ ಬಂದು ಅಸ್ವಸ್ಥ ಸ್ಥಿತಿಯಲ್ಲಿದ್ದ ಕಾಡು ಹಂದಿಯನ್ನು ಉಪಚರಿಸಿ ಚಿಕಿತ್ಸೆಗೆ ಕೊಂಡೊಯ್ದರಾದರೂ ಅದು ಮಾರ್ಗ ಮಧ್ಯೆಯೇ ಕೊನೆಯುಸಿರೆಳೆಯಿತು.

ಇಂಥದೇ ಕೆಲ ಪ್ರಕರಣಗಳು ಗ್ರಾಮದಲ್ಲಿ ನಡೆದಿವೆ. ಅಪಗಾಲಿನಲ್ಲಿ ಎರಡು ದಿನಗಳ ಹಿಂದೆ ತೀರ ಅಸ್ವಸ್ಥ ಸ್ಥಿತಿಯಲ್ಲಿದ್ದ ಎರಡು ಹಂದಿಗಳು ಕೆಲ ಹೊತ್ತಿನ ನಂತರ ಅಸು ನೀಗಿದವು. ಯಾವುದೋ ಕಾಯಿಲೆಯಿಂದ ಸತ್ತಿರಬೇಕು ಎಂದು ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದರು.

ADVERTISEMENT

ರಾತ್ರಿ ವೇಳೆಯಲ್ಲಿ ರೈತರ ತೋಟಗಳಿಗೆ ನುಗ್ಗುವ ಹಂದಿ ಅಲ್ಲಿನ ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ತೋಟದ ಸುತ್ತಲಿನ ಕಿರು ಅರಣ್ಯ ಪ್ರದೇಶಗಳನ್ನು ಅತಿಕ್ರಮಿಸಿ ಅಲ್ಲಿಯೂ ತೋಟಗಳನ್ನು ಮಾಡಿರುವುದು ಕಾಡುಪ್ರಾಣಿಗಳು ನಾಡಿಗೆ ಮುಖ ಮಾಡಲು ಕಾರಣವೆನ್ನಲಾಗಿದೆ. ಈಗ ಕಾಡು ಹಂದಿಗಳು ಒಮ್ಮೆಲೇ ಸಾಯುತ್ತಿರುವ ಘಟನೆ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.

'ಸತ್ತ ಹಂದಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ' ಎಂದು ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.