-ಸಂತೋಷಕುಮಾರ್ ಹಬ್ಬು
ಹಳಿಯಾಳ: ಅತ್ತ ಸಾಕಷ್ಟು ಜಮೀನು ಇದ್ದು ಮಲಪ್ರಭಾ ನದಿಯಿಂದ ಮುಳುಗಡೆ ಹೊಂದಿ ನಿರಾಶ್ರಿತರಾಗಿ ತಾಲ್ಲೂಕಿನ ಹೊಸಹಡಗಲಿ ಗ್ರಾಮಕ್ಕೆ ಬಂದು ನೆಲೆಸಿದರೂ ಇಲ್ಲಿನ ಗ್ರಾಮಸ್ಥರು ಸೂಕ್ತ ಮೂಲ ಸೌಕರ್ಯ ಸಿಗದೆ ವಂಚಿತರಾಗಿದ್ದಾರೆ.
1975ರ ಪೂರ್ವದಲ್ಲಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಹಡಗಲಿ ಗ್ರಾಮದಲ್ಲಿ ಮಲಪ್ರಭಾ ನದಿಯ ಭೋರ್ಗರೆತದಿಂದ ನೆಲೆ ಕಳೆದುಕೊಂಡ ನೂರಾರು ಕುಟುಂಬಗಳು ಬಿ.ಕೆ.ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗಶೆಟ್ಟಿ ಕೊಪ್ಪ ಗ್ರಾಮದ ಹತ್ತಿರ ಆಶ್ರಯ ಪಡೆದಿದ್ದರು. ಈಗ ಇದೇ ಗ್ರಾಮಕ್ಕೆ ಹೊಸ ಹಡಗಲಿ ಎಂಬ ನಾಮಕರಣ ಮಾಡಲಾಗಿದೆ. ಗ್ರಾಮದಲ್ಲಿ 1,103 ಜನಸಂಖ್ಯೆ ಇದೆ.
‘ಹಲವು ಬಡಾವಣೆಗಳಿಗೆ ಈಗಲೂ ರಸ್ತೆ ಇಲ್ಲ. ಕೆಸರುಮಯ ರಸ್ತೆಯಲ್ಲೇ ಸಾಗಬೇಕು. ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಕೊಳವೆಬಾವಿಯೂ ಹಾಳಾಗಿದ್ದು ನೀರಿಗಾಗಿ ಪರದಾಡಬೇಕಾಗಿದೆ. ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಕೊರತೆಯೂ ಇರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗುತ್ತಿದೆ’ ಎಂದು ಸಾಲು ಸಾಲು ದೂರು ಹೇಳುತ್ತಾರೆ ಗ್ರಾಮಸ್ಥರು.
‘ಗ್ರಾಮದ ಜನರು ಕೆಲಸಕ್ಕಾಗಿ ಬಹುತೇಕ ವಲಸೆ ಹೋಗುವುದರಿಂದ ಅವರ ಜೊತೆ ಮಕ್ಕಳು ಸಹ ತೆರಳುತ್ತಿದ್ದಾರೆ. ಇದರಿಂದ ಶಿಕ್ಷಣದಿಂದ ವಂಚಿತರಾಗುವವರ ಸಂಖ್ಯೆಯೂ ಹೆಚ್ಚಿದೆ. ಗರ್ಭಿಣಿಯರಿಗೆ ಸಕಾಲಕ್ಕೆ ಭೇಟಿಯಾಗಿ ಔಷಧ, ಪೌಷ್ಟಿಕ ಆಹಾರ ನೀಡಲು ಸಹ ತೊಂದರೆ ಆಗುತ್ತಿದೆ’ ಎಂದು ಅಂಗನವಾಡಿ ಕಾರ್ಯಕರ್ತೆ ಅನಿತಾ ದೇಮಾಣ್ಣಾ ಬಾರ್ಕಿ ಹೇಳಿದರು.
‘ಗ್ರಾಮದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮನೆಗಳಿಗೆ ಶೌಚಾಲಯವಿಲ್ಲದೇ ಬಯಲಿನಲ್ಲಿ ಬಹಿರ್ದೆಸೆಗೆ ತೆರಳುವ ಸ್ಥಿತಿ ಇದೆ. ಪ್ರತಿಯೊಂದು ದಾಖಲಾತಿ ಪಡೆಯಲು ಹಳಿಯಾಳ ತಹಶೀಲ್ದಾರ್ ಕಚೇರಿಗೆ ತೆರಳಬೇಕು. ಪಡಿತರ ಪಡೆಯಲು 6 ಕಿ.ಮೀ. ದೂರದ ಬಿ.ಕೆ.ಹಳ್ಳಿಗೆ ಹೋಗಬೇಕು. ಹೊಸ ಹಡಗಲಿಯನ್ನು ಇನ್ನೂ ಕಂದಾಯ ಗ್ರಾಮವಾಗಿ ಪರಿಗಣಿಸಿಲ್ಲ’ ಎಂದು ಗ್ರಾಮಸ್ಥರು ದೂರಿದರು.
ಬಿ.ಕೆ.ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೂರು ಎಕರೆ ಜಮೀನನ್ನು ಛತ್ರನಾಳ ಗ್ರಾಮದಲ್ಲಿ ಹೆಳವರ ಜನಾಂಗಕ್ಕೆ ಹೆಚ್ಚುವರಿ ಮನೆ ನಿರ್ಮಾಣ ಮಾಡಲು ಪಂಚಾಯ್ತಿಯಿಂದ ಠರಾವು ಮಾಡಲಾಗಿದೆ.–ಯಲ್ಲಪ್ಪ ಬಸಪ್ಪ, ಹೆಳವರ ಬಿ.ಕೆ.ಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.