ಪ್ರವೀಣಕುಮಾರ ಸುಲಾಖೆ
ದಾಂಡೇಲಿ: ಮಕ್ಕಳು, ವೃದ್ಧರು ಕಾಯಿಲೆಗೆ ಬಿದ್ದರೆ ಆಸ್ಪತ್ರೆ ಸೇರಿಸಲು ಸರಿಯಾದ ರಸ್ತೆ, ಸಂಪರ್ಕ ಸೇತುವೆ ಕೊರತೆಯಿಂದಾಗಿ ಹೊಸ ಕೊಂಡಪಾ ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ದಾಂಡೇಲಿ ನಗರಕ್ಕೆ ಸುಮಾರು 6 ಕಿ.ಮೀ ದೂರವಿರುವ, ಜೊಯಿಡಾ ತಾಲ್ಲೂಕಿನ ಅವೆಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮದಲ್ಲಿ 250ಕ್ಕೂ ಹೆಚ್ಚು ಮನೆಗಳಿವೆ. 400 ರಿಂದ 500 ಜನಸಂಖ್ಯೆ ಹೊಂದಿದ್ದು, ಶೇ 60 ರಷ್ಟು ಜನರಿಗೆ ಕೃಷಿ ಹಾಗೂ ಗ್ರಾಮದ ಹತ್ತಿರದಲ್ಲಿ ಇರುವ ಇಟ್ಟಂಗಿ ಭಟ್ಟಿಯಲ್ಲಿನ ದುಡಿಮೆ ಆದಾಯ ಮೂಲವಾಗಿದೆ.
‘ಅನತಿ ದೂರದಲ್ಲಿ ಕಾಳಿ ನದಿ ಹರಿಯುತ್ತಿದ್ದರೂ ನದಿ ನೀರು ಗ್ರಾಮಕ್ಕೆ ಸಿಗುತ್ತಿಲ್ಲ. ಮಳೆಗಾಲದಲ್ಲಿ ನೀರು ಶುದ್ಧೀಕರಣಕ್ಕೆ ಪ್ರತ್ಯೇಕ ಶುದ್ಧೀಕರಣ ಘಟಕ ಇಲ್ಲ. ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆ ಅನುಷ್ಠಾನವಾಗಿದ್ದು ಇದಕ್ಕೆ ಕೊಳವೆ ಬಾವಿ ನೀರನ್ನು ನಿತ್ಯ ಪೂರೈಸಲಾಗುತ್ತಿದೆ. ಆದರೆ, ನದಿ ನೀರನ್ನು ಪೂರೈಸಲು ಬೇಡಿಕೆಯಿದೆ’ ಎನ್ನುತ್ತಾರೆ ಗ್ರಾಮಸ್ಥರು.
‘ಗ್ರಾಮಕ್ಕೆ 200 ಮೀಟರ್ ರಸ್ತೆ ಹಾಗೂ ಎರಡು ಸೇತುವೆ ನಿರ್ಮಾಣಕ್ಕೆ ಶಾಸಕರಿಗೆ ಎರಡು ವರ್ಷದ ಹಿಂದೆಯೇ ಮನವಿ ನೀಡಲಾಗಿತ್ತು. ಈವರೆಗೆ ರಸ್ತೆ ನಿರ್ಮಾಣ ಆಗಿಲ್ಲ. ಮಕ್ಕಳು ಶಾಲೆಗೆ ಹೋಗಲು ಹಾಗೂ ವಯೋವೃದ್ಧರಿಗೆ ಕಾಯಿಲೆ ಬಂದರೆ ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡಬೇಕಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥ ಸುರೇಶ್ ಬಾಬು ಕೇದಾರಿ.
‘ಮೌಳಂಗಿಯ ಮುಖ್ಯ ರಸ್ತೆಯಿಂದ ಗ್ರಾಮವನ್ನು ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯುತ್ ದೀಪಗಳಲ್ಲಿ ಹಾಗೂ ಗ್ರಾಮದಲ್ಲಿ ಅನೇಕ ಬಾರಿ ದಿನಗಟ್ಟಲೆ ವಿದ್ಯುತ್ ಕೈ ಕೊಡುತ್ತದೆ. ನಿತ್ಯದ ಕೆಲಸಗಳಿಗೆ ತೊಂದರೆ ಆಗುತ್ತಿದೆ’ ಎಂಬುದೂ ಅವರ ದೂರು.
‘ರಸ್ತೆ ಮತ್ತು ಸೇತುವೆ ಇಲ್ಲದ ಕಾರಣ ಬಸ್ ಬರುತ್ತಿಲ್ಲ. ಇದರಿಂದಾಗಿ ನಿತ್ಯದ ಕೆಲಸಗಳಿಗೆ ನಡೆದುಕೊಂಡು ಹೋಗುವ ಸ್ಥಿತಿ ಉಂಟಾಗಿದೆ. ಕೆಲಸ ಮುಗಿಸಿಕೊಂಡು ವಾಪಸ್ ಊರಿಗೆ ಬರುವಾಗ ರಾತ್ರಿ ಕಾಡು ಪ್ರಾಣಿ ಭಯ ಇದ್ದೆ ಇರುತ್ತದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
‘ಮನೆಯ ಅಂಗಳದಲ್ಲಿನ ನಾಯಿಗಳನ್ನು ಚಿರತೆ ಎತ್ತಿಕೊಂಡು ಹೋಗುವುದು, ರಸ್ತೆಯಲ್ಲಿ ಕರಡಿ ಕಾಣಿಸಿಕೊಳ್ಳುವುದು, ಹೊಲಗಳಿಗೆ ಆನೆ ದಾಳಿ ಆಗಾಗ ಕಂಡುಬರುತ್ತದೆ’ ಎನ್ನುತ್ತಾರೆ ಅವರು.
‘ಗೌಳಿವಾಡಾ ಮುಖ್ಯ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಹಲವಾರು ಮನವಿ ನೀಡಲಾಗಿದೆ. ಸೇತುವೆ ನಿರ್ಮಾಣಕ್ಕೆ ₹1.5 ಕೋಟಿ ಕ್ರಿಯಾ ಯೋಜನೆ ಸಿದ್ಧವಾಗಿದೆ ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ, ಇನ್ನು ಸೇತುವೆ ನಿರ್ಮಾಣವಾಗಿಲ್ಲ. ನದಿ ನೀರನ್ನು ಶುದ್ಧೀಕರಿಸಲು ಪ್ರತ್ಯೇಕ ಶುದ್ಧೀಕರಣ ನಿರ್ಮಾಣಕ್ಕೆ ಜನರ ಬೇಡಿಕೆ ಇದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಸುನೀಲ ಕಾಂಬಳೆ.
Cut-off box - ದಾಂಡೇಲಿ ತಾಲ್ಲೂಕು ಸೇರ್ಪಡೆಗೆ ಪರ–ವಿರೋಧ ಹೊಸ ಕೊಂಡಪ ಗ್ರಾಮವು ಜೊಯಿಡಾ ತಾಲ್ಲೂಕು ವ್ಯಾಪ್ತಿಯಲ್ಲಿದೆ. ತಾಲ್ಲೂಕು ಕೇಂದ್ರವು ಗ್ರಾಮಸ್ಥರು ಬಹುದೂರವಿದೆ. ಆದರೆ ದಾಂಡೇಲಿ ಕೇವಲ ಆರು ಕಿ.ಮೀ ದೂರವಿದೆ. ಹೀಗಾಗಿ ದಾಂಡೇಲಿ ತಾಲ್ಲೂಕಿಗೆ ಸೇರ್ಪಡೆಗೊಳಿಸಬೇಕು ಎಂಬುದಾಗಿ ಗ್ರಾಮದ ಹಲವು ಮುಖಂಡರು ಬೇಡಿಕೆ ಇಡುತ್ತಿದ್ದಾರೆ. ಕೆಲ ಗ್ರಾಮಸ್ಥರು ಅದನ್ನು ವಿರೋಧಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.