ADVERTISEMENT

Karnataka Rains | ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತ: 6 ಸಾವು

ಶೃಂಗೇರಿಯಲ್ಲಿ ಪ್ರವಾಹದ ಸ್ಥಿತಿ * ಆಲಮಟ್ಟಿ ಜಲಾಶಯದ 14 ಗೇಟ್‌ಗಳ ಮೂಲಕ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 19:05 IST
Last Updated 16 ಜುಲೈ 2024, 19:05 IST
ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ–66ರ ಮೇಲೆ ಗುಡ್ಡ ಕುಸಿದು ಬಿದ್ದು ಲಾರಿ, ಟ್ಯಾಂಕರ್ ಸಿಲುಕಿದ್ದವು.
ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ–66ರ ಮೇಲೆ ಗುಡ್ಡ ಕುಸಿದು ಬಿದ್ದು ಲಾರಿ, ಟ್ಯಾಂಕರ್ ಸಿಲುಕಿದ್ದವು.   

ಕಾರವಾರ/ಅಂಕೋಲಾ/ಗೋಕರ್ಣ: ರಾಜ್ಯದ ವಿವಿಧೆಡೆ ಮಂಗಳವಾರವೂ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡಚಣೆಯಾಗಿದ್ದರೆ, ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ–66ರ ಅಂಚಿನ ಗುಡ್ಡ ಕುಸಿದು, ಒಂದೇ ಕುಟುಂಬದ ಐವರು ಸೇರಿ ಆರು ಮಂದಿ ಮೃತಪಟ್ಟಿದ್ದು, 11 ಜನ ನಾಪತ್ತೆ ಆಗಿದ್ದಾರೆ. ಮತ್ತೊಂದು ಘಟನೆಯಲ್ಲಿ, ಕಾರವಾರ ತಾಲ್ಲೂಕಿನ ಕಿನ್ನರ ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

‘ಹೆದ್ದಾರಿ ನಿರ್ಮಾಣಕ್ಕೆ ಕಡಿದಿದ್ದ ಗುಡ್ಡ ಏಕಾಏಕಿ ಮುಂಜಾನೆ 8.45ರ ಸುಮಾರಿಗೆ ಕುಸಿದಿದೆ. ಅದರ ರಭಸಕ್ಕೆ ಹೆದ್ದಾರಿಯಲ್ಲಿದ್ದ ಗ್ಯಾಸ್ ಟ್ಯಾಂಕರ್ ಸೇರಿ ಕೆಲ ವಾಹನಗಳು ಮಣ್ಣಿನ ಸಮೇತ ಪಕ್ಕದಲ್ಲಿದ್ದ ಗಂಗಾವಳಿ ನದಿಗೆ ಕೊಚ್ಚಿ ಹೋಗಿವೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಡುಗೆ ಅನಿಲ (ಎಲ್‌ಪಿಜಿ) ತುಂಬಿಕೊಂಡಿರುವ ಟ್ಯಾಂಕರ್ ನದಿಯಲ್ಲಿ ತೇಲುತ್ತಿರುವುದನ್ನು ಕಂಡು ಜನ ಆತಂಕಗೊಂಡರು.

ಹೆದ್ದಾರಿ ಪಕ್ಕದಲ್ಲಿ ಚಹಾ ಅಂಗಡಿ ಹೊಂದಿದ್ದ ಲಕ್ಷ್ಮಣ ನಾಯ್ಕ (47), ಅವರ ಪತ್ನಿ ಶಾಂತಿ (36), ಮಗ ರೋಶನ್ (11) ಮತ್ತು ಒಬ್ಬ ಅಪರಿಚಿತ ಪುರುಷನ ಮೃತದೇಹ ಗೋಕರ್ಣದ ದುಬ್ಬನಸಸಿ ಕಡಲತೀರದಲ್ಲಿ ಸಿಕ್ಕಿದೆ. ಲಕ್ಷ್ಮಣ ಪುತ್ರಿ ಅವಂತಿಕಾ (6), ಸಂಬಂಧಿ ಉಪೇಂದ್ರ (50) ಮತ್ತು ಚಾಲಕರೊಬ್ಬರ ಮೃತದೇಹ ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ.

ADVERTISEMENT

‘ಗುಡ್ಡ ಕುಸಿದ ಸ್ಥಳದಲ್ಲಿ ನಿತ್ಯ ಹತ್ತಾರು ಲಾರಿ, ಟ್ಯಾಂಕರ್‌ ನಿಲುಗಡೆಯಾಗುತ್ತಿದ್ದವು. ಇಲ್ಲಿನ ಗುಡ್ಡದ ಬುಡದಲ್ಲಿ ಬೀಳುವ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಚಾಲಕರು ಚಹಾದಂಗಡಿಯಲ್ಲಿ ಉಪಾಹಾರಕ್ಕಾಗಿ ನಿಲ್ಲುತ್ತಿದ್ದರು’ ಎಂದು ಸ್ಥಳೀಯರೊಬ್ಬರು ಹೇಳಿದರು.

‘ಗುಡ್ಡ ಕುಸಿದು ಬೀಳುವುದು ಕಣ್ಣೆದುರೇ ಕಾಣುತ್ತಿತ್ತು. ಅಂಗಡಿ ಎದುರು ನಿಂತಿದ್ದವರು, ರಸ್ತೆ ಪಕ್ಕ ವಾಹನ ನಿಲ್ಲಿಸಿಕೊಂಡಿದ್ದ ಚಾಲಕರು ಮಣ್ಣಿನ ರಾಶಿಯಡಿ ಸಿಲುಕಿದ್ದನ್ನು ನೋಡಿದೆ. ತಕ್ಷಣವೇ ಲಾರಿಯನ್ನು ಹಿಮ್ಮುಖವಾಗಿ ಚಲಾಯಿಸಿ, ಜೀವ ಉಳಿಸಿಕೊಂಡೆ’ ಎಂದು ಲಾರಿ ಚಾಲಕ ರಾಜು ಹುಲಿದೇವರವಾಡಾ ವಿವರಿಸಿದರು.

ಸಾವಿರಾರು ಟನ್ ಮಣ್ಣು ಬಿದ್ದ ರಭಸಕ್ಕೆ ನದಿಯ ಇನ್ನೊಂದು ಬದಿಯಲ್ಲಿರುವ ಉಳುವರೆ ಗ್ರಾಮದ ನಾಲ್ಕು ಮನೆಗಳಿಗೂ ಹಾನಿಯಾಗಿದೆ. ಅಲ್ಲಿನ ಆರಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದು, ಕುಮಟಾದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಣ್ಣಿನಡಿ ಸಿಲುಕಿದವರ ಶೋಧ ಕಾರ್ಯವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್) ತಂಡವು ಕೈಗೊಂಡಿದೆ. ಹೆದ್ದಾರಿಯ ಮೇಲೆರಗಿರುವ ಮಣ್ಣಿನ ರಾಶಿ ತೆರವುಗೊಳಿಸಲು 12ಕ್ಕೂ ಹೆಚ್ಚು ಜೆಸಿಬಿ ಕಾರ್ಯಾಚರಣೆ ನಡೆಸಿವೆ. ಗಂಗಾವಳಿ ನದಿಯಲ್ಲೂ ಶೋಧ ಮುಂದುವರೆದಿದೆ.

ಮಣ್ಣಿನ ರಾಶಿ ತೆರವುಗೊಳಿಸಿದಂತೆ ಇನ್ನಷ್ಟು ಮಣ್ಣು ಕುಸಿಯುವ ಅಪಾಯದ ಹಿನ್ನೆಲೆಯಲ್ಲಿ ಆತಂಕದಲ್ಲಿಯೇ ಶೋಧ ಕಾರ್ಯ ನಡೆದಿದೆ. ದುರ್ಘಟನೆ ನಡೆದ ಸ್ಥಳದ ಬಳಿ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿದೆ.

ಮತ್ತೊಬ್ಬ ವ್ಯಕ್ತಿ ಸಾವು: ಸತತ ಮಳೆಯಿಂದ ಕಾರವಾರ ತಾಲ್ಲೂಕಿನ ಕಿನ್ನರ ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿದು, ತಿಕರ್ಸ್ ಗುರವ (65) ಎಂಬುವರು ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ವರದಿ: ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಿದ್ದು, ಅಲ್ಲಲ್ಲಿ ಭೂಕುಸಿತ, ಮನೆ ಕುಸಿತ, ಮರ ಬೀಳುವುದು ಮುಂದುವರಿದಿದೆ. ವಿಪರೀತ ಮಳೆಯಿಂದ ಶೃಂಗೇರಿಯ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭೂಕುಸಿತದಿಂದ ಚಿಕ್ಕಮಗಳೂರು– ಕೊಪ್ಪ ಸಂಪರ್ಕ ಕಡಿತಗೊಂಡಿದೆ.

ತುಂಗಾನದಿ ಉಕ್ಕಿ ಹರಿಯುತ್ತಿದ್ದು, ಶಾರದ ಪೀಠ ಭಾರತೀ ತೀರ್ಥ ಸ್ವಾಮೀಜಿ ಅವರ ಸ್ನಾನಘಟ್ಟ ಹಾಗೂ ಸಂಧ್ಯಾ ವಂದನೆ ಮಂಟಪ ಮುಳುಗಿದೆ. ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಕಾಳಿಂಗ ಸೇರಿ ಹಲವು ಹಾವುಗಳು, ಮರದ ದಿಮ್ಮಿಗಳು ತೇಲುತ್ತಿವೆ.

ಹೊರಹರಿವು ಹೆಚ್ಚಳ: ಆಲಮಟ್ಟಿ ಜಲಾಶಯದಿಂದ 14 ಗೇಟ್‌ಗಳ ಮೂಲಕ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಎರಡು ದಿನಗಳಿಂದ ಸುರಿದ ಭಾರೀ ಮಳೆ ಕಾರಣ ಒಂದು ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ನೀರು ಹರಿದು ಬಂದಿದ್ದು,  ಜಲಾಶಯದ ಹೊರಹರಿವನ್ನು ಮಂಗಳವಾರ ಹಂತಹಂತವಾಗಿ ಹೆಚ್ಚಿಸಲಾಯಿತು.

ಬೆಳಿಗ್ಗೆ 20 ಸಾವಿರ ಕ್ಯುಸೆಕ್ ಇದ್ದ ಹೊರಹರಿವು ಬೆಳಿಗ್ಗೆ 9.30ಕ್ಕೆ 40 ಸಾವಿರ ಕ್ಯುಸೆಕ್‌ಗೆ ಹೆಚ್ಚಿಸಲಾಯಿತು. ಒಳಹರಿವು ಮತ್ತಷ್ಟು ಹೆಚ್ಚಾದ ಕಾರಣ ಸಂಜೆ 6ಕ್ಕೆ 65 ಸಾವಿರ ಕ್ಯುಸೆಕ್‌ಗೆ ಏರಿಸಲಾಯಿತು.

ಕೊಡಗು ಜಿಲ್ಲೆಯಲ್ಲಿ ಮುಂಗಾರು ಬಿರುಸುಗೊಂಡಿದ್ದು, ಮಡಿಕೇರಿ ತಾಲ್ಲೂಕಿನ ಕೊಯನಾಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲೆ ಸೋಮವಾರ ತಡರಾತ್ರಿ ಭಾರಿ ಪ್ರಮಾಣದ ಮಣ್ಣು ಕುಸಿದು, 5 ಕೋಣೆಗಳು ಸಂಪೂರ್ಣ ಹಾನಿಯಾಗಿವೆ. ಹಗಲಿನಲ್ಲಿ ಕುಸಿದಿದ್ದರೆ ಹೆಚ್ಚು ಅನಾಹುತವಾಗುತ್ತಿತ್ತು. ಶಾಲೆಯ ಎಲ್ಲ 86 ಮಕ್ಕಳನ್ನು ಇಲ್ಲಿಗೆ 2.5 ಕಿ.ಮೀ ದೂರದ ಸಂಪಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಳಿಯಿಂದ ಕೂಡಿದ ಬಿರುಸಿನ ಮಳೆ ಸುರಿಯಿತು. ನೇತ್ರಾವತಿ, ಕುಮಾರಧಾರಾ, ಫಲ್ಗುಣಿ, ಶಾಂಭವಿ ಹಾಗೂ ನಂದಿನಿ ನದಿಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆಯಿಂದಾಗಿ ಬೆಳ್ತಂಗಡಿ– ಉಜಿರೆ ರಸ್ತೆಯು ಜಲಾವೃತವಾಗಿ, ವಾಹನ ಸವಾರರು ಸಮಸ್ಯೆ ಎದುರಿಸಿದರು. ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿಯ ಪ್ರವಾಹದಲ್ಲಿ ಆನೆಯ ಮೃತದೇಹವೊಂದು ತೇಲಿಹೋಗಿದೆ.

ರಾಜ್ಯದ ಕರಾವಳಿಯಲ್ಲಿ ಮುಂದಿನ ಐದು ದಿನ ಗುಡುಗು ಹಾಗೂ ಗಾಳಿಯಿಂದ ಕೂಡಿದ ಬಿರುಸಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಇದೇ 17 ಮತ್ತು 18ರಂದು ರೆಡ್ ಅಲರ್ಟ್‌ ಹಾಗೂ 19, 20, ಹಾಗೂ 21ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ಗುಡ್ಡ ಕುಸಿದ ಪರಿಣಾಮ ಗುಡ್ಡದ ಮೇಲಿದ್ದ ವಿದ್ಯುತ್ ತಂತಿಯ ಟವರ್ ಮಣ್ಣಿನ ಸಹಿತ ನೆಲಕ್ಕುರುಳಿತು.
ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದಿದ್ದರಿಂದ ಗಂಗಾವಳಿ ನದಿಯ ಇನ್ನೊಂದು ಪಕ್ಕದಲ್ಲಿರುವ ಉಳುವರೆ ಗ್ರಾಮದ ಮನೆಗಳ ಬಳಿ ಮಣ್ಣಿನ ರಾಶಿ ಬಂದು ಬಿದ್ದಿರುವುದು
ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು ಅಲ್ಲಿಂದ ಬಿದ್ದ ಮಣ್ಣು ಕಲ್ಲಿನ ರಾಶಿಯು ಉಳುವರೆ ಗ್ರಾಮಕ್ಕೆ ಬಿದ್ದ ಪರಿಣಾಮ ಮನೆಯೊಂದರ ಚಾವಣಿ ಹಾನಿಯಾಗಿರುವುದು
ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದ ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯಿತು.

ಗ್ಯಾಸ್ ಟ್ಯಾಂಕರ್ ಭಯ

ಗಂಗಾವಳಿ ನದಿಗೆ ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ನದಿಗೆ ಉರುಳಿ ತೇಲುತ್ತಿದ್ದ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗುತ್ತಿರುವ ಆತಂಕವೂ ಉಂಟಾಗಿತ್ತು. ಸಗಡಗೇರಿ ಸಮೀಪ ನದಿ ದಡಕ್ಕೆ ಅಪ್ಪಳಿಸಿ ಟ್ಯಾಂಕರ್ ನಿಂತಿತ್ತು. ಸುರಕ್ಷತೆ ದೃಷ್ಟಿಯಿಂದ ನದಿಯಂಚಿನ ಗ್ರಾಮಗಳ ಜನರನ್ನು ದೂರದಲ್ಲಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಟ್ಯಾಂಕರ್ ಅನ್ನು ಸುರಕ್ಷಿತವಾಗಿ ಸಾಗಿಸಲು ಮಂಗಳೂರಿನಿಂದ ವಿಶೇಷ ತಂಡವೊಂದು ಆಗಮಿಸಿದ್ದು ಬುಧವಾರ ಟ್ಯಾಂಕರ್ ಸಾಗಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಕಬಿನಿ ಜಲಾಶಯ ಭರ್ತಿ

ಎಚ್‌.ಡಿ.ಕೋಟೆ (ಮೈಸೂರು ಜಿಲ್ಲೆ): ಕಬಿನಿ ಜಲಾಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ಬೀಚನಹಳ್ಳಿ ಜಲಾಶಯವು ಮಂಗಳವಾರ ಭರ್ತಿಯಾಗಿದೆ. ಮುಂಗಾರಿನಲ್ಲಿ ರಾಜ್ಯದಲ್ಲಿಯೇ ಮೊದಲು ತುಂಬುವ ಜಲಾಶಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಲಾಶಯಕ್ಕೆ 29310 ಕ್ಯುಸೆಕ್ ಒಳಹರಿವಿದ್ದು ನಾಲ್ಕೂ ಕ್ರೆಸ್ಟ್‌ ಗೇಟ್‌ಗಳನ್ನು ತೆರೆದು 36 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿಯಾಗಿದ್ದು ಸಂಜೆ 4 ಗಂಟೆ ವೇಳೆಗೆ 2282.38 ಅಡಿ ನೀರಿತ್ತು. ಜಲಾಶಯದ ಹಿತದೃಷ್ಟಿಯಿಂದ ಹೊರಹರಿವನ್ನು ಹೆಚ್ಚಿಸಲಾಗಿದ್ದು ಮತ್ತಷ್ಟು ಏರಿಕೆಯಾಗುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ನದಿಯತ್ತ ತೆರಳದಂತೆ ಜಾನುವಾರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸುವಂತೆ ಧ್ವನಿ ವರ್ಧಕದ ಮೂಲಕ ತಾಲ್ಲೂಕು ಆಡಳಿತ ಪ್ರಚಾರ ನಡೆಸಿದೆ. ಕಬಿನಿ ಉಪನದಿಗಳಾದ ತಾರಕಾ ನುಗು ಹೊಳೆಗಳ ಒಳಹರಿವು ಹೆಚ್ಚಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವುದಿಂದ ತಾರಕಾ ಜಲಾಶಯಕ್ಕೆ 656 ಕ್ಯುಸೆಕ್‌ ನೀರು ಬರುತ್ತಿದೆ.   ಬೀರ್‍ವಾಳು ಗ್ರಾಮದಲ್ಲಿರುವ ನುಗು ‌ಜಲಾಶಯ ಮಟ್ಟ ನೆಲಮಟ್ಟದಿಂದ 110 ಅಡಿ ಇದ್ದು 108 ಅಡಿ ನೀರು ಸಂಗ್ರಹವಾಗಿದೆ. 4.8 ಟಿಎಂಸಿ ಸಾಮರ್ಥ್ಯದ ಜಲಾಶಯಕ್ಕೆ 4 ಸಾವಿರ ಕ್ಯುಸೆಕ್‌ ಒಳಹರಿವಿದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ನುಗು ನದಿ ಪಾತ್ರದ ಕಡಬೂರು ಶೆಟ್ಟಹಳ್ಳಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ

ಬೆಂಗಳೂರು: ಅಂಕೋಲಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ವಿಧಾನಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ ಅವರು, ‘ಭೂಕುಸಿತದಿಂದ ಡಾಬಾದ ನಾಲ್ಕು ಮಂದಿ ಮತ್ತು
ಅನಿಲ ಟ್ಯಾಂಕರ್‌ಗಳ  ಮೂರು ಮಂದಿ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದಾರೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.