ಕಾರವಾರ: ನಗರದ ಕೋಣೆ ನಾಲಾ ಚರಂಡಿಯಲ್ಲಿ ಮೃತಪಟ್ಟ ನೂರಾರು ಮೀನುಗಳು ಹಾಗೂ ಹಾವು ಮಂಗಳವಾರ ತೇಲಿಬಂದಿವೆ. ಚರಂಡಿ ನೀರಿಗೆ ರಾಸಾಯನಿಕ ಮಿಶ್ರಣವಾಗಿದ್ದರಿಂದ ಜಲಚರಗಳು ಸಾವಿಗೀಡಾಗಿರಬಹುದು ಎಂದು ಸಾರ್ವಜನಿಕರು ಊಹಿಸಿದ್ದಾರೆ.
ನಗರದಲ್ಲಿ ಬಿದ್ದ ಮಳೆ ನೀರನ್ನು ಸಮುದ್ರಕ್ಕೆ ಸೇರಿಸುವ ಸುಮಾರು 10 ಕಿಲೋಮೀಟರ್ ಉದ್ದದ ಈ ಕಾಲುವೆಯಲ್ಲಿ ವಿವಿಧ ಜಾತಿಯ ಮೀನು, ಹಾವು, ಕಪ್ಪೆಗಳು ವಾಸವಾಗಿವೆ. ಮಂಗಳವಾರ ಬೆಳಿಗ್ಗೆ 11ರ ಸುಮಾರಿಗೆ ಮೀನುಗಳು ಮತ್ತು ಹಾವುಗಳ ಕಳೇಬರ ನೀರಿನಲ್ಲಿ ತೇಲುತ್ತ ಸಾಗುತ್ತಿದ್ದುದು ಕಂಡುಬಂತು. ಇದನ್ನು ಗಮನಿಸಿದ ಸಾರ್ವಜನಿಕರು ಕಿಡಿಗೇಡಿಗಳು ವಿಷ ಹಾಕಿರುವ ಅಥವಾ ರಾಸಾಯನಿಕ ತ್ಯಾಜ್ಯವನ್ನು ಗಟಾರಕ್ಕೆ ಬಿಟ್ಟಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ನಗರದ ಕಡಲಜೀವ ವಿಜ್ಞಾನ ಕೇಂದ್ರದ ಸಂಶೋಧನಾ ವಿದ್ಯಾರ್ಥಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೀರಿನಲ್ಲಿ ಆಮ್ಲಜನಕದ ಪ್ರಮಾಣವು ಮೀನುಗಳಿಗೆ ಅಗತ್ಯವಾದಷ್ಟು ಇಲ್ಲದಿದ್ದುದು ಪ್ರಾಥಮಿಕ ಅಧ್ಯಯನದಲ್ಲಿ ಕಂಡುಬಂದಿದೆ ಎಂದು ಪ್ರಾಧ್ಯಾಪಲ ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.