ADVERTISEMENT

ಯಲ್ಲಾಪುರ: ಜಲಪಾತದ ದಾರಿಗಾಗಿ ಮರಗಳ ಹನನ

ಲಾಕ್‌ಡೌನ್‌ ಸಂದರ್ಭದಲ್ಲಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 12:04 IST
Last Updated 13 ಜೂನ್ 2021, 12:04 IST
ಯಲ್ಲಾಪುರ ತಾಲ್ಲೂಕಿನ ದೇಹಳ್ಳಿ ಗ್ರಾಮ ಪಂಚಾಯಿತಿಯ ಕುಂಬ್ರಾಳದಲ್ಲಿರುವ ಜಲಪಾತಕ್ಕೆ ರಸ್ತೆ ಕಾಡಿನ ಮಧ್ಯೆ ರಸ್ತೆ ನಿರ್ಮಿಸಿರುವುದು
ಯಲ್ಲಾಪುರ ತಾಲ್ಲೂಕಿನ ದೇಹಳ್ಳಿ ಗ್ರಾಮ ಪಂಚಾಯಿತಿಯ ಕುಂಬ್ರಾಳದಲ್ಲಿರುವ ಜಲಪಾತಕ್ಕೆ ರಸ್ತೆ ಕಾಡಿನ ಮಧ್ಯೆ ರಸ್ತೆ ನಿರ್ಮಿಸಿರುವುದು   

ಯಲ್ಲಾಪುರ (ಉತ್ತರ ಕನ್ನಡ): ಲಾಕ್‌ಡೌನ್ ಸಂದರ್ಭದಲ್ಲಿ ತಾಲ್ಲೂಕಿನ ಕುಂಬ್ರಾಳದಲ್ಲಿ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಜಲಪಾತಕ್ಕೆ ನೂರಾರು ಮರಗಳ ಹನನ ಮಾಡಿ ರಸ್ತೆ ನಿರ್ಮಿಸಲಾಗಿದೆ. ಅರಣ್ಯ ಇಲಾಖೆಯವರು ಈ ಮೊದಲೇ ನೀಡಿದ್ದ ಎಚ್ಚರಿಕೆಯನ್ನೂ ಕಡೆಗಣಿಸಿ ರಾತ್ರಿ ಕಾಮಗಾರಿ ನಡೆಸಲಾಗಿದೆ.

ದೇಹಳ್ಳಿ ಗ್ರಾಮ ಪಂಚಾಯಿತಿಯು ರಸ್ತೆ ನಿರ್ಮಿಸಿದ್ದು, ಶಿವಪುರದ ತೂಗುಸೇತುವೆ ಪಕ್ಕದಿಂದ ಸಾಗುತ್ತದೆ. ಕಾಮಗಾರಿಗಾಗಿ ಸೀಸಂ, ಸಾಗವಾನಿಯಂಥ ಬೆಲೆ ಬಾಳುವ ಮರಗಳನ್ನು ಧರೆಗೆ ಉರುಳಿಸಲಾಗಿದೆ. ಒಂದಷ್ಟು ಮಣ್ಣಿನಡಿಯಲ್ಲಿ ಹೂತು ಹೋಗಿವೆ. ಕೆಲವು ಕಾಳಿನದಿಯ ಹಿನ್ನೀರಿನ ಪಾಲಾಗಿವೆ. ಇನ್ನೂ ಕೆಲವು ಹೊಸ ರಸ್ತೆಯ ಪಕ್ಕದಲ್ಲಿ ಬಿದ್ದಿವೆ. ಹೊಸ ರಸ್ತೆಯ ಎಡಭಾಗದ ಗುಡ್ಡದ ಮಣ್ಣು ಸಡಿಲವಾಗಿದ್ದು, ಅಲ್ಲಿರುವ ಮರಗಳೂ ಮಳೆಗಾಲದಲ್ಲಿ ಬೀಳುವ ಸಾಧ್ಯತೆಯಿದೆ.

‘ನಮ್ಮ ಭಾಗದ ಅರಣ್ಯದಲ್ಲಿ ಇಂತಹ ಹಲವು ಜಲಪಾತಗಳಿವೆ. ಎಲ್ಲವಕ್ಕೂ ರಸ್ತೆ ನಿರ್ಮಿಸಲು ಹೊರಟರೆ ಕಾಡು ಸಂಪೂರ್ಣ ನಾಶವಾಗುತ್ತದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ಗ್ರಾಮಸ್ಥರಾದ ಮಂಜುನಾಥ ಮೆಣಸುಮನೆ, ಶಶಿಧರ ಕೋಟೆಮನೆ, ಪ್ರದೀಪ, ವಿರೂಪಾಕ್ಷ ಹಾಗೂ ವಿಘ್ನೇಶ್ವರ ಕಟ್ಟೆಗದ್ದೆ ಆಗ್ರಹಿಸಿದ್ದಾರೆ.

ADVERTISEMENT

‘ಚಾರಣಕ್ಕೆ ಮೂರು ಅಡಿ ಕಾಲುದಾರಿ ಮಾಡಿದ್ದರೆ ಸಾಕಿತ್ತು. ಜಲಪಾತವು ಬೇಸಿಗೆಯಲ್ಲಿ ಬತ್ತುತ್ತದೆ. ಮಳೆಗಾಲದಲ್ಲಿ ಉಂಬಳಗಳ ಕಾಟವಿದೆ. ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಮಣ್ಣಿನ ಕೆಳಗೆ ಹಾಕಿದ್ದು, ಹೊಳೆಗೆ ಹಾಕಿದ್ದು, ಈಗ ಬಿದ್ದಿರುವ ಮರಗಳು ಸುಮಾರು 500 ಆಗುತ್ತವೆ’ ಎಂದು ಗ್ರಾಮ ಅರಣ್ಯ ಸಮಿತಿಯ ಮಾಜಿ ಅಧ್ಯಕ್ಷ ಮಂಜುನಾಥ ಮೆಣಸುಮನೆ ತಿಳಿಸಿದ್ದಾರೆ.

‘ಅನುಮತಿ ಪಡೆದಿಲ್ಲ’: ಈ ರಸ್ತೆಯನ್ನು ಗ್ರಾಮ ಪಂಚಾಯಿತಿಯವರು ಅನುಮತಿ ಪಡೆಯದೇ ನಿರ್ಮಿಸಿದ್ದಾರೆ ಎಂಬುದು ಅರಣ್ಯ ಇಲಾಖೆಯ ಅಧಿಕಾರಿಗಳ ಆರೋಪವಾಗಿದೆ.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯ ಅಧಿಕಾರಿ ಬಾಲಸುಬ್ರಹ್ಮಣ್ಯ, ‘ಒಂದು ತಿಂಗಳ ಹಿಂದೆ ಇಲ್ಲಿ ರಸ್ತೆ ನಿರ್ಮಿಸುತ್ತಿರುವುದು ಗಮನಕ್ಕೆ ಬಂದಿತ್ತು. ಆಗ ಎಚ್ಚರಿಕೆ ನೀಡಿ, ಕೆಲಸ ನಿಲ್ಲಿಸಿ ಮುಳ್ಳಿನ ಬೇಲಿ ಹಾಕಿ ರಸ್ತೆಯನ್ನು ಮುಚ್ಚಲಾಗಿತ್ತು. ಆದರೆ, ಈ ಲಾಕ್‌ಡೌನ್ ಅವಧಿಯಲ್ಲಿ ಅದನ್ನು ಕಿತ್ತೆಸೆದು ರಾತ್ರಿ ವೇಳೆ ಕಾಮಗಾರಿ ಮಾಡಲಾಗಿದೆ. ಹಾಗಾಗಿ ಅರಣ್ಯ ಇಲಾಖೆಯ ಗಮನಕ್ಕೆ ಬಂದಿರಲಿಲ್ಲ’ ಎಂದು ತಿಳಿಸಿದ್ದಾರೆ.

‘ಅನುಮತಿ ಬೇಕಿಲ್ಲ’: ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗೆ ಅನುಮತಿ ಪಡೆಯಬೇಕಿಲ್ಲ’ ಎಂಬುದು ದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಪತಿ ಮುದ್ದೇಪಾಲ ಅವರ ವಾದವಾಗಿದೆ.

‘ಜಲಪಾತವನ್ನು ಪ್ರವಾಸಿ ತಾಣವಾಗಿ ಮಾಡಲು ಈ ಮೊದಲಿದ್ದ ಕಾಲುದಾರಿಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಐದಾರು ಸಣ್ಣಪುಟ್ಟ ಮರಗಳನ್ನಷ್ಟೇ ತೆರವು ಮಾಡಲಾಗಿದೆ. ಗ್ರಾಮ ಪಂಚಾಯಿತಿ ವಿರುದ್ಧ ರಾಜಕೀಯ ಪ್ರೇರಿತವಾಗಿ ವೃಥಾ ಆರೋಪಿಸಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

*
ಸ್ಥಳ ಪರಿಶೀಲನೆ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಸ್ತೆಗೆ ಅಡ್ಡಲಾಗಿ ಅಗಳ ತೆಗೆದು ಕಾಮಗಾರಿ ನಡೆದ ಸ್ಥಳದಲ್ಲಿ ಗಿಡ ನೆಡಲಾಗುವುದು.
- ಗೋಪಾಲಕೃಷ್ಣ ಹೆಗಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಯಲ್ಲಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.