ADVERTISEMENT

ಹೊನ್ನಾವರ | ಬೇಸಿಗೆಯಲ್ಲಿ ಜೆಸಿಬಿ ಮೊರೆತ: ಮಳೆಗಾಲದಲ್ಲಿ ಗುಡ್ಡ ಕುಸಿತ!

ಅಡಿಕೆ ತೋಟ, ರೆಸಾರ್ಟ್ ನಿರ್ಮಾಣದ ಉದ್ದೇಶಕ್ಕೆ ಗುಡ್ಡಗಳಿಗೆ ಹಾನಿ

ಎಂ.ಜಿ.ಹೆಗಡೆ
Published 17 ಜುಲೈ 2024, 7:01 IST
Last Updated 17 ಜುಲೈ 2024, 7:01 IST
ಹೊನ್ನಾವರ ತಾಲ್ಲೂಕಿನ ಭಾಸ್ಕೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಈ ವರ್ಷದ ಮಳೆಗಾಲದಲ್ಲಿ ಗುಡ್ಡ ಕುಸಿದಿರುವುದು
ಹೊನ್ನಾವರ ತಾಲ್ಲೂಕಿನ ಭಾಸ್ಕೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಈ ವರ್ಷದ ಮಳೆಗಾಲದಲ್ಲಿ ಗುಡ್ಡ ಕುಸಿದಿರುವುದು   

ಹೊನ್ನಾವರ: ಮಳೆಗಾಲ ಕಾಲಿಟ್ಟ ನಂತರ ರಸ್ತೆಗಳಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ವ್ಯತ್ಯಯ ಉಂಟಾಗುವ ಘಟನೆಗಳು ತಾಲ್ಲೂಕಿನಲ್ಲಿ ಪ್ರತಿನಿತ್ಯ ನಡೆಯುತ್ತಿವೆ.

ಗುಡ್ಡ ಹಾಗೂ ಭೂ ಕುಸಿತ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಈ ಘಟನೆಗಳಿಗೆ ‘ಭೂ ಮಾಫಿಯಾ’ ಹಾಗೂ ಅದಕ್ಕೆ ಬೆನ್ನೆಲುಬಾಗಿ ನಿಂತ ಆಡಳಿತ ಯಂತ್ರ ಕಾರಣ ಎಂಬ ಆರೋಪ ಜನರಿಂದ ಕೇಳಿಬರುತ್ತಿದೆ.

ಕಳೆದ ವರ್ಷ ಮಳೆಗಾಲದಲ್ಲಿ ಆರೋಳ್ಳಿ, ಅಪ್ಸರಕೊಂಡ, ಗುಡ್ಡೆಬಾಳ, ಕೊಳಗದ್ದೆ ಮೊದಲಾದೆಡೆಗಳಲ್ಲಿ ಗುಡ್ಡ ಕುಸಿತ ಆಗಿತ್ತು. ಈ ಬಾರಿ ಅಪ್ಸರಕೊಂಡ, ಯಲಗುಪ್ಪ, ಮಸುಕಲ್ಮಕ್ಕಿ, ಭಾಸ್ಕೇರಿ, ಉಪ್ಪೋಣಿ, ಜಲವಳ್ಳಿ ಮೊದಲಾದ ಕಡೆಗಳಲ್ಲಿ ಗುಡ್ಡ ಹಾಗೂ ಭೂ ಕುಸಿತ ಉಂಟಾಗಿದ್ದು, ಅವಾಂತರಗಳ ಸರಣಿ ಮುಂದುವರಿಯುವ ಭೀತಿ ಕಾಡಿದೆ.

ADVERTISEMENT

‘ಕಳೆದ ಕೆಲವು ತಿಂಗಳುಗಳಿಂದ ಜಲ ಜೀವನ್ ಮಿಷನ್ ಯೋಜನೆಗಾಗಿ ಪೈಪ್‍ಲೈನ್ ಅಳವಡಿಸಲು ಗುಡ್ಡದ ಬುಡವನ್ನು ಕೊರೆಯಲಾಗಿದೆ. ಅರಣ್ಯ ಅತಿಕ್ರಮಣ ಹಾಗೂ ಅಡಿಕೆ ತೋಟದ ವಿಸ್ತಾರ ಅವ್ಯಾಹತವಾಗಿ ಮುಂದುವರಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಅಗೆದು ನೆಲ ಸಮತಟ್ಟು ಮಾಡಲಾಗಿದೆ’ ಎನ್ನುತ್ತಾರೆ ಪರಿಸರವಾದಿಯೊಬ್ಬರು.

‘ರೆಸಾರ್ಟ್ ಮತ್ತಿತರ ವಾಣಿಜ್ಯ ಉದ್ದೇಶಗಳಿಗಾಗಿಯೂ ಮರಗಳ ಕಡಿತ, ಗುಡ್ಡ ಅಗೆತ ನಡೆದಿದೆ. ಗುಡ್ಡ ಅಗೆದ ಮಣ್ಣು ಹಳ್ಳ-ನದಿಗಳನ್ನು ಸೇರಿರುವುದರಿಂದ ನದಿಗಳಲ್ಲಿ ನೆರೆ ಬರುವ ಪ್ರಮಾಣ ಹೆಚ್ಚಿದೆ. ಗುಡ್ಡಗಾಡಿನಲ್ಲಿ ಜೆಸಿಬಿ ಮೊರೆತಕ್ಕೆ ಹೆದರಿ ವನ್ಯಜೀವಿಗಳು ನಾಡಿನತ್ತ ಮುಖ ಮಾಡುತ್ತಿವೆ’ ಎಂದರು.

‘ಜೆಸಿಬಿ ಮೂಲಕ ಅನಧಿಕೃತವಾಗಿ ಹಾಗೂ ಅವೈಜ್ಞಾನಿಕವಾಗಿ ಗುಡ್ಡದ ಮಣ್ಣು ತೆಗೆಯುತ್ತಿರುವುದು ಅವಘಡಗಳಿಗೆ ಕಾರಣವಾಗಿದೆ’ ಎನ್ನುತ್ತಾರೆ ಅಪ್ಸರಕೊಂಡ ಭಾಗದ ನಿವಾಸಿ ಜಗದೀಶ ಶಾಸ್ತ್ರಿ.

‘ತಾಲ್ಲೂಕಿನಲ್ಲಿ ಕಳೆದ 2 ವರ್ಷಗಳಲ್ಲಿ ಜೆಸಿಬಿ ಹಾಗೂ ಟಿಪ್ಪರ್‌ಗಳ ಸಂಖ್ಯೆ ದ್ವಿಗುಣವಾಗಿದೆ. ಅನಧಿಕೃತವಾಗಿ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ. 49 ಜೆಸಿಬಿ ಹಾಗೂ ಸುಮಾರು 200 ಟಿಪ್ಪರ್‌ಗಳು ನೋಂದಣಿಯಾಗಿವೆ’ ಎಂದು ಆರ್.ಟಿ.ಇ ಕಚೇರಿಯ ಮೂಲಗಳು ತಿಳಿಸಿವೆ.

ಅಕ್ರಮ ಮಣ್ಣು ಗಣಿಗಾರಿಕೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮದ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿದರೂ ಕರೆಯನ್ನು ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.